ಬೆಂಗಳೂರು: ಸಾಕಷ್ಟು ವಿವಾದ ಎಬ್ಬಿಸಿದ್ದ ರೋಹಿತ್ ಚಕ್ರತೀರ್ಥ ಸಮಿತಿಯ ಪಠ್ಯ ಪರಿಷ್ಕರಣೆಗೆ ಕೊನೆಗೂ ಸರ್ಕಾರ ತೆರೆ ಎಳೆದಿದೆ. ಚಕ್ರತೀರ್ಥ ಸಮಿತಿ ಮಾಡಿದ ಕೆಲವು ಲೋಪಗಳಿಗೆ ತಿದ್ದುಪಡಿ ಮಾಡಲು ಸರ್ಕಾರ ಆದೇಶ ಹೊರಡಿಸಿದೆ.
ಕಳೆದ ಕೆಲ ದಿನಗಳಿಂದ ಭಾರಿ ಸದ್ದು ಮಾಡುತ್ತಿದ್ದ ಪಠ್ಯ ಪರಿಷ್ಕರಣೆ ವಿವಾದಕ್ಕೆ ಸರ್ಕಾರ ಇದೀಗ ತೆರೆ ಎಳೆದಿದೆ. ಸಾಹಿತಿಗಳು, ಪ್ರತಿಪಕ್ಷಗಳ ಆಕ್ರೋಶಕ್ಕೆ ಮಣಿದಿರುವ ಸರ್ಕಾರ ಪರಿಷ್ಕರಣೆಯಲ್ಲಾಗಿರುವ ವಿವಾದಿತ 8 ಅಂಶಗಳನ್ನು ತಿದ್ದುಪಡಿ ಮಾಡಲು ಅನುಮತಿ ನೀಡಿದೆ. ಈಗಾಗಲೇ ಪರಿಷ್ಕರಿಸಿರುವ ಪಠ್ಯಪುಸ್ತಕಗಳನ್ನು ವಿದ್ಯಾರ್ಥಿಗಳ ಶೈಕ್ಷಣಿಕ ಹಾಗೂ ಆಡಳಿತಾತ್ಮಕ ಹಿತದೃಷ್ಟಿಯಿಂದ ಬಿಟ್ಟುಹೋದ ಅಂಶಗಳನ್ನು ತಿದ್ದುಪಡಿ ಹಾಗೂ ಸೇರ್ಪಡೆ ಮಾಡಿ ತಿದ್ದೋಲೆ ಹೊರಡಿಸಲು ಅನುಮತಿ ನೀಡಿ ಆದೇಶಿಸಿದೆ.
ತಿದ್ದುಪಡಿಯಾಗಲಿರುವ ಅಂಶಗಳು ಯಾವುವು?:
- 9ನೇ ತರಗತಿ ಸಮಾಜ ವಿಜ್ಞಾನ ಭಾಗ-01ರ ನಮ್ಮ ಸಂವಿಧಾನ ಎಂಬ ಪಾಠದಲ್ಲಿ ತೆಗೆದಿದ್ದ ಡಾ.ಅಂಬೇಡ್ಕರ್ ಅವರ 'ಸಂವಿಧಾನದ ಶಿಲ್ಪಿ' ಎಂಬ ಪದ ಪುನರ್ ಸೇರ್ಪಡೆ.
- 7ನೇ ತರಗತಿಯ ಸಮಾಜ ವಿಜ್ಞಾನ ಭಾಗ-01ರ ಭಕ್ತಿ ಪಂಥ ಹಾಗೂ ಸೂಫಿ ಸಂತರ ಸಂಪೂರ್ಣ ಪಾಠ ಮರು ಸೇರ್ಪಡೆ.
- 7ನೇ ತರಗತಿಯ ಪ್ರಥಮ ಭಾಷೆ ಕನ್ನಡ ಪಠ್ಯಪುಸ್ತಕದ ಪುಟ ಸಂಖ್ಯೆ 147 ರಲ್ಲಿ 'ಗೊಂಬೆ ಕಲಿಸುವ ನೀತಿ' ಪದ್ಯದ ಕೃತಿಕಾರರ ಹೆಸರು ಡಾ. ಆರ್.ಎನ್.ಜಯಗೋಪಾಲ್ ಎಂದು ತಪ್ಪಾಗಿ ಮುದ್ರಣಗೊಂಡಿದ್ದು, ಮೂಲ ಕೃತಿಕಾರರಾದ ಚಿ.ಉದಯಶಂಕರ್ ಅವರ ಪರಿಚಯ.
- 6ನೇ ತರಗತಿ ಸಮಾಜ ವಿಜ್ಞಾನ ಭಾಗ-1ರ ಸಿದ್ದಗಂಗಾ ಮಠ ಹಾಗೂ ಆದಿಚುಂಚನಗಿರಿ ಮಠದ ಸೇವೆಯ ಕುರಿತಾದ ಸೇವೆಯ ಸಾಲುಗಳ ಪುನರ್ ಸೇರ್ಪಡೆ.
- 7ನೇ ತರಗತಿ ಸಮಾಜ ವಿಜ್ಞಾನ ಭಾಗ-1ರ ಮೈಸೂರು ಮತ್ತು ಇತರ ಸಂಸ್ಥಾನಗಳು ಎಂಬ ಪಾಠದಲ್ಲಿನ ಸುರಪುರ ನಾಯಕರ ಕುರಿತಾದ ವಿವರಗಳ ಸೇರ್ಪಡೆ.
- 7ನೇ ತರಗತಿ ಕನ್ನಡ, ಸಮಾಜ ವಿಜ್ಞಾನ ಭಾಗ-1ರ ರಾಷ್ಟ್ರಕವಿ ಕುವೆಂಪು ಹಾಗೂ ಹುಯಿಲಗೋಳ ನಾರಾಯಣರಾವ್ ಅವರ ಭಾವಚಿತ್ರಗಳ ಅಳವಡಿಕೆ.
- 9ನೇ ತರಗತಿಯ ಸಮಾಜ ವಿಜ್ಞಾನ ಭಾಗ-1ರ ಪಠ್ಯಪುಸ್ತಕದಲ್ಲಿ ಭಾರತದ ಮತ ಪರಿವರ್ತಕರು ಎಂಬ ಅಧ್ಯಾಯದಲ್ಲಿ ಬಸವಣ್ಣನವರ ಕುರಿತಾದ ವಿಷಯ ಸೇರ್ಪಡೆ.
- 4ನೇ ತರಗತಿಯ ಪರಿಸರ ಅಧ್ಯಯನ ಪಾಠದ ಕುವೆಂಪು ಆನೇಕರ ಪ್ರೋತ್ಸಾಹದಿಂದ ಇವರು ಮುಂದೆ ಪ್ರಖ್ಯಾತ ಕವಿ ಎನಿಸಿಕೊಂಡರು ಎಂಬ ಸಾಲನ್ನು ಕೈ ಬಿಡುವುದು.
ಇದನ್ನೂ ಓದಿ: ಪಠ್ಯ ಪರಿಷ್ಕರಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿಲ್ಲ, ಬದಲಾವಣೆಗೆ ಮುಕ್ತವಾಗಿದ್ದೇವೆ: ಸಿಎಂ
ಮತ್ತೊಂದು ಸಮಿತಿ ಮಾಡುವ ನಿರ್ಧಾರ ಇಲ್ಲ: ಪಠ್ಯ ಪುಸ್ತಕ ಪರಿಷ್ಕರಣೆಗೆ ಮತ್ತೊಂದು ಸಮಿತಿ ಮಾಡುವ ವಿಚಾರ ಹಿನ್ನೆಲೆ ಅಂತಹ ಯಾವುದೇ ನಿರ್ಧಾರ ಇಲ್ಲ ಎಂದು ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಸ್ಪಷ್ಟಪಡಿಸಿದ್ದಾರೆ. ಕೊಡಗಿನ ಕುಶಾಲನಗರದಲ್ಲಿ ಮಾತಾನಾಡಿದ ಅವರು, ಪಠ್ಯ ಪುಸ್ತಕ ಪರಿಷ್ಕರಣೆಯಲ್ಲಿ ಡಯಟ್ ಪ್ರಾಂಶುಪಾಲರು ಮತ್ತು ಶಿಕ್ಷಕರ ನೇತೃತ್ವದಲ್ಲಿ ಬಸವಣ್ಣನವರ ಪಠ್ಯವೊಂದನ್ನು ಮಾತ್ರ ಸರಿಪಡಿಸಲಾಗುವುದು. ಉಳಿದಂತೆ ಎಲ್ಲವೂ ಹಾಗೆಯೇ ಮುಂದುವರಿಯಲಿದೆ. ಈಗಾಗಲೇ ರಾಜ್ಯದಲ್ಲಿ ಶೇ. 80 ರಷ್ಟು ವಿದ್ಯಾರ್ಥಿಗಳಿಗೆ ಪುಸ್ತಕ ವಿಸ್ತರಣೆ ಆಗಿದೆ. ಕಲಿಕಾ ಚೇತರಿಕೆ ಆದ ಬಳಿಕ ಎಂದಿನಂತೆ ಪಾಠಗಳು ನಡೆಯಲಿವೆ ಎಂದು ತಿಳಿಸಿದರು.
ಇನ್ನು ಶ್ರೀರಂಗಪಟ್ಟಣದ ಗಾಂಜಾಂನಲ್ಲಿ ಮುಸ್ಲಿಮರು ಸಮಾವೇಶ ಮಾಡುತ್ತಿರುವ ಹಿನ್ನೆಲೆಯಲ್ಲಿ ಸಮಾಜ ಸಾಕಷ್ಟು ಎಚ್ಚೆತ್ತುಕೊಂಡಿದೆ. ಈಗಾಗಲೇ ಕುಮಾರಸ್ವಾಮಿ ಕೂಡ ಅದು ಆಂಜನೇಯಸ್ವಾಮಿ ದೇವಾಲಯವಾಗಿತ್ತು ಎಂದಿದ್ದಾರೆ. ಆದರೆ, ಸರ್ಕಾರ ಅದರ ಸಂಬಂಧ ಯಾವುದೇ ನಿರ್ಧಾರ ಮಾಡಿಲ್ಲ. ಮುಸ್ಲಿಮರು ಈ ಕುರಿತು ಕೋರ್ಟ್ಗೆ ಕೂಡ ಹೋಗುವ ಸಾಧ್ಯತೆ ಇದೆ. ನೋಡೋಣ ಮುಂದೆ ಏನಾಗುತ್ತದೆ. ಅಲ್ಲಿ ನಡೆಸುತ್ತಿರುವ ಸಮಾವೇಶ ಸಂಬಂಧ ಭದ್ರತೆಗೆ ಸಂಬಂಧಿಸಿದಂತೆ ಆಯಾ ಇಲಾಖೆ ನೋಡಿಕೊಳ್ಳುತ್ತದೆ ಎಂದರು.
ಇದನ್ನೂ ಓದಿ: ಕಮ್ಯುನಿಷ್ಠರಾಗಿ ಅಲ್ಲ, ಶಿಕ್ಷಣ ನಿಷ್ಠರಾಗಿ.. ಸಚಿವ ಆರ್ ಅಶೋಕ್ ಆರೋಪಕ್ಕೆ ಬರಗೂರು ಸುದೀರ್ಘ ಸ್ಪಷ್ಟನೆ..