ಬೆಂಗಳೂರು: ವಿಧಾನ ಪರಿಷತ್ ಇತಿಹಾಸದಲ್ಲೇ ಇಂದು ವಿಶೇಷವಾದ ದಿನ. ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದ್ದ ಅಧಿವೇಶನ ಇಂದು ಸಮಾವೇಶಗೊಳ್ಳುತ್ತಿದೆ. ಈ ವಿಶೇಷ ಒಂದು ದಿನದ ಈ ಪರಿಷತ್ ಕಲಾಪ ಹಲವು ಕುತೂಹಲಗಳಿಗೆ ಕಾರಣವಾಗಿದೆ. ಗೋಹತ್ಯೆ ನಿಷೇಧ ವಿಧೇಯಕ ಇಂದಿನ ಕಲಾಪದಲ್ಲಿ ಮಂಡನೆಯಾಗುತ್ತಾ? ಅನ್ನೋದೇ ಎಲ್ಲರ ಕುತೂಹಲವಾಗಿದೆ.
ಇಂದಿನ ಕಾರ್ಯಸೂಚಿ ಪಟ್ಟಿಯಲ್ಲಿ ಅವಿಶ್ವಾಸ ನಿರ್ಣಯ ಪ್ರಸ್ತಾಪ ಇಲ್ಲ
ಇಂದಿನ ಕಲಾಪದ ಕಾರ್ಯಸೂಚಿ ಪಟ್ಟಿಯಲ್ಲಿ ಅವಿಶ್ವಾಸ ನಿರ್ಣಯದ ಪ್ರಸ್ತಾಪವಿಲ್ಲ. ಗೋಹತ್ಯೆ ನಿಷೇಧದ ಮಸೂದೆ ಮತ್ತು ಇತರ ವಿಷಯಗಳು ಸೇರಿವೆ. ಒಂದೆಡೆ ಜೆಡಿಎಸ್ ಬೆಂಬಲ ತಮಗೆ ಇದೆ ಎಂದು ಬಿಜೆಪಿ ನಾಯಕರು ಹೇಳಿಕೊಂಡಿದ್ದರೂ, ಗೋಹತ್ಯೆ ನಿಷೇಧದ ಮಸೂದೆಗೆ ನಮ್ಮ ಬೆಂಬಲ ಇಲ್ಲ, ಕೆಲ ಮಾರ್ಪಾಡುಗಳು ಮಾಡುವ ಅವಶ್ಯಕತೆ ಇದೆ ಎಂದು ಜೆಡಿಎಸ್ ನಾಯಕ, ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಸಭಾಪತಿ ಹಾಗೂ ಸರ್ಕಾರದ ಜಟಾಪಟಿಯ ಕಾರಣ ಅನಿರ್ದಿಷ್ಟವಾಧಿಗೆ ಮುಂದೂಡಿದ ಐದು ದಿನಗಳಲ್ಲಿಯೇ ಇಂದು ಮತ್ತೊಮ್ಮೆ ಒಂದು ದಿನದ ಪರಿಷತ್ ಅಧಿವೇಶನ ನಡೆಯಲಿದೆ. ಒಂದು ದಿನ ನಡೆಯುವ ಈ ಅಧಿವೇಶನ ರಾಜಕೀಯ ಹಾವು ಏಣಿ ಆಟಕ್ಕೆ ವೇದಿಕೆಯಾಗಲಿದೆ. ಸಭಾಪತಿ ಮೇಲೆ ಅವಿಶ್ವಾಸ ನಿರ್ಣಯ ಮಂಡನೆಗೆ ಮುಂದಾಗಿದ್ದ ಬಿಜೆಪಿ ಸದಸ್ಯರು ಇಂದು ಮತ್ತೆ ಅದೇ ವಿಚಾರ ಚರ್ಚೆಗೆ ತೆಗೆದುಕೊಳ್ಳುವ ಸಾಧ್ಯತೆ ಹೆಚ್ಚಿದೆ. ಗೋಹತ್ಯಾ ನಿಷೇಧ ವಿಧೇಯಕ ಪರಿಷತ್ ನಲ್ಲಿ ಮಂಡನೆಯಾಗಬೇಕಿದ್ದು, ಮತ್ತೆ ವಿಧೇಯಕದ ಮಂಡನೆಗೆ ಬಿಜೆಪಿ ಮುಂದಾದರೆ ಸದನದಲ್ಲಿ ಜೆಡಿಎಸ್ ನಡೆ ಕೂಡಾ ಮಹತ್ವ ಪಡೆದುಕೊಳ್ಳಲಿದೆ.
ಸದ್ಯ ಸರ್ಕಾರ ಮತ್ತು ಸಭಾಪತಿ ನಡುವಿನ ಮುಸುಕಿನ ಗುದ್ದಾಟದಲ್ಲಿ ಸರ್ಕಾರದ ಕೈ ಮೇಲಾಗಿದೆ. ಸಭಾಪತಿ ವಿರುದ್ಧದ ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆಯನ್ನು ಕೈಗೆತ್ತಿಕೊಳ್ಳುವ ಮುಂಚೆಯೇ ಕಲಾಪವನ್ನು ಸಭಾಪತಿಗಳು ಮುಂದೂಡಿದ್ರು, ರಾಜ್ಯಾಪಾಲರ ಬಳಿ ದೂರು ಕೊಂಡೊಯ್ದ ಬಿಜೆಪಿ ಸದಸ್ಯರು ಕಾನೂನಿನ ಲಾಭ ಪಡೆದು ಒಂದು ಹೆಜ್ಜೆ ಮುಂದೆ ಇದ್ದಾರೆ. ಗ್ರಾಮ ಪಂಚಾಯಿತಿ ಚುನಾವಣೆಗಳ ನೆಪವೊಡ್ಡಿ ವಿಧಾನಸಭಾ ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿತ್ತು. ಆದರೆ, ಪರಿಷತ್ ಕಲಾಪವನ್ನು ಪೂರ್ವ ನಿಗದಿಯಂತೆ ಡಿಸೆಂಬರ್ 15ನ ವರೆಗೂ ನಡೆಸಬೇಕಿತ್ತು. ಆದರೆ, ಸಭಾಪತಿ ಗಳ ಮೇಲಿನ ಅವಿಶ್ವಾಸ ನಿರ್ಣಯ ತೆಗೆದುಕೊಳ್ಳಲು ಬಿಜೆಪಿ ಪಟ್ಟು ಹಿಡಿದ ಹಿನ್ನೆಲೆ ಪರಿಷತ್ ಕಲಾಪವನ್ನು ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ಮುಂದೂಡಿದ್ರು. ಇದು ಬಿಜೆಪಿ ಸದಸ್ಯರನ್ನು ಕೆರಳುವಂತೆ ಮಾಡಿತ್ತು. ಕಲಾಪದ ನಡಾವಳಿ ಬಾಕಿ ಇರುವಂತೆಯೇ ಸದನವನ್ನು ಮುಂದೂಡಲಾಗಿದೆ ಅನ್ನೋದು ಬಿಜೆಪಿ ಆರೋಪವಾಗಿದೆ.