ಬೆಂಗಳೂರು : ರಾಜ್ಯದಲ್ಲಿ ಕೋವಿಡ್ ಆರ್ಥಿಕ ಬಿಕ್ಕಟ್ಟಿನ ನಡುವೆಯೂ ಸಭಾಪತಿ, ಸಭಾಧ್ಯಕ್ಷ, ಸಿಎಂ, ಸಚಿವರು ಹಾಗೂ ಶಾಸಕರ ಸಂಬಳ, ಭತ್ಯೆ ಹೆಚ್ಚಳ ಮಾಡಲಾಗಿದೆ.
ಕಾಂಗ್ರೆಸ್ ಸದಸ್ಯರ ಪ್ರತಿಭಟನೆ, ಗದ್ದಲದ ಮಧ್ಯೆ ಯಾವುದೇ ಚರ್ಚೆ ಇಲ್ಲದೆ, ಶಾಸಕರು, ಸಭಾಧ್ಯಕ್ಷರು, ಸಭಾಪತಿ ಅವರ ವೇತನ ಭತ್ಯೆ ಪರಿಷ್ಕರಣೆಗೆ ಅವಕಾಶ ಮಾಡಿಕೊಡುವ ಕರ್ನಾಟಕ ವಿಧಾನಮಂಡಲದವರ ಸಂಬಳಗಳು, ನಿವೃತ್ತಿ ವೇತನಗಳು ಮತ್ತು ಭತ್ಯೆಗಳ ( ತಿದ್ದುಪಡಿ) ವಿಧೇಯಕ-2022 ಹಾಗೂ ಕರ್ನಾಟಕ ಮಂತ್ರಿಗಳ ಸಂಬಳಗಳು ಮತ್ತು ಭತ್ಯೆಗಳ (ತಿದ್ದುಪಡಿ) ವಿಧೇಯಕ- 2022 ಈ ಎರಡು ವಿಧೇಯಕಗಳು ವಿಧಾನಸಭೆಯಲ್ಲಿ ಇಂದು ಮಂಡನೆಯಾಗಿ ಅಂಗೀಕಾರ ದೊರೆಯಿತು.
ವಿಧಾನಮಂಡಳದವರ ಸಂಬಳಗಳು, ನಿವೃತ್ತಿ ವೇತನಗಳು ಮತ್ತು ಭತ್ಯೆಗಳ ಪರಿಷ್ಕರಣೆಯಿಂದ ವಾರ್ಷಿಕ 67 ಕೋಟಿ ರೂ. ಹೆಚ್ಚುವರಿ ವೆಚ್ಚ ಉಂಟಾಗಲಿದೆ. ಮಂತ್ರಿಗಳ ಸಂಬಳಗಳು ಮತ್ತು ಭತ್ಯೆಗಳ (ತಿದ್ದುಪಡಿ) ವಿಧೇಯಕದಿಂದ 25.40 ಕೋಟಿ ರೂ. ಆರ್ಥಿಕ ಹೊರೆಯಾಗಲಿದೆ.
ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಅವರು ಮುಖ್ಯಮಂತ್ರಿಗಳ ಪರವಾಗಿ ಕರ್ನಾಟಕ ಮಂತ್ರಿಗಳ ಸಂಬಳಗಳು ಮತ್ತು ಭತ್ಯೆಗಳ (ತಿದ್ದುಪಡಿ ) ವಿಧೇಯಕ- 2022 ಅನ್ನು ಗದ್ದಲದ ನಡುವೆಯೇ ಮಂಡಿಸಿದರು.
ಅದೇ ರೀತಿ ಕರ್ನಾಟಕ ವಿಧಾನಮಂಡಲದವರ ಸಂಬಳಗಳು, ನಿವೃತ್ತಿ ವೇತನಗಳು ಮತ್ತು ಭತ್ಯೆಗಳ (ತಿದ್ದುಪಡಿ ) ವಿಧೇಯಕ-2022 ವನ್ನು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಮಂಡಿಸಿದರು.
ಜೀವನ ನಿರ್ವಹಣಾ ವೆಚ್ಚದಲ್ಲಿ ಗಣನೀಯ ಹೆಚ್ಚಳವಾಗಿದೆ. ಹೀಗಾಗಿ ವಿಧಾನಮಂಡಳದವರ ಸಂಬಳ, ನಿವೃತ್ತಿ ವೇತನಗಳ ಮತ್ತು ಭತ್ಯೆಗಳ ಅನಿಯಮ 1956ನ್ನು 1957ರ ಕರ್ನಾಟಕ ಅನಿಯಮ-2ನ್ನು ತಿದ್ದುಪಡಿ ಮಾಡುವ ಮೂಲಕ ಸಂಸದೀಯ ಕಾರ್ಯನಿರ್ವಾಹಕರ ಶಾಸಕರ ಸಂಬಳ ಭತ್ಯೆಗಳನ್ನು ಹಾಗೂ ಕೆಲವು ಇತರೆ ಪ್ರಯೋಜನಗಳನ್ನು ಹೆಚ್ಚಿಸುವ ಉದ್ದೇಶವನ್ನು ಹೊಂದಿದೆ.
ಹಾಗೆಯೇ ಮುಖ್ಯಮಂತ್ರಿಗಳ, ಮಂತ್ರಿಗಳ, ರಾಜ್ಯಮಂತ್ರಿಗಳ, ಉಪಮಂತ್ರಿಗಳ ಸಂಬಳ ಭತ್ಯೆಯನ್ನು ದೀರ್ಘಕಾಲದಿಂದ ಪರಿಷ್ಕರಿಸಿಲ್ಲ. ಹೀಗಾಗಿ ಮನೆ ಬಾಡಿಗೆ, ಸಂಬಳ, ವಾಹನ ಭತ್ಯೆ ಇತ್ಯಾದಿಗಳ ಪರಿಷ್ಕರಣೆಗಾಗಿ ಕರ್ನಾಟಕ ಮಂತ್ರಿಗಳ ಸಂಬಳಗಳು ಮತ್ತು ಭತ್ಯೆಗಳ ಅನಿಯಮ 1956ರಲ್ಲಿ ತಿದ್ದುಪಡಿ ಮಾಡಲು ಈ ವಿಧೇಯಕ ತರಲಾಗಿದೆ ಎಂದು ಸಚಿವ ಮಾಧುಸ್ವಾಮಿ ತಿಳಿಸಿದರು.
ಪ್ರತಿ 5 ವರ್ಷಕ್ಕೊಮ್ಮೆ ಸಂಬಳ ಹೆಚ್ಚಳ ಆಗುವ ಬಗ್ಗೆ ಕಾನೂನು ರೂಪಿಸಲಾಗಿದೆ. 2023 ರಿಂದ ಜಾರಿಗೆ ಬರುವಂತೆ ಅನ್ವಯವಾಗಲಿದೆ. ಇನ್ನು ಮುಂದೆ ಜನಪ್ರತಿನಿಧಿಗಳ ಸಂಬಳ ಹೆಚ್ಚಿಸಲು ವಿಧೇಯಕ ಮಂಡನೆ ಮಾಡುವುದಿಲ್ಲ. ಬದಲಾಗಿ ಐದು ವರ್ಷಕ್ಕೊಮ್ಮೆ ಹೆಚ್ಚಳ ಆಗುವಂತೆ ಕಾನೂನು ರೂಪಿಸಲಾಗಿದೆ ಎಂದು ತಿಳಿಸಿದರು.
ಗದ್ದಲದ ನಡುವೆ ಧ್ವನಿಮತದ ಮೂಲಕ ಎರಡೂ ವಿಧೇಯಕಗಳಿಗೆ ಪ್ರತ್ಯೇಕವಾಗಿ ಅಂಗೀಕಾರ ದೊರೆಯಿತು.ಸಭಾಪತಿ, ಸಭಾಧ್ಯಕ್ಷರಿಗೆ ಸಂಬಳ ಒಂದು ತಿಂಗಳಿಗೆ 50 ಸಾವಿರದಿಂದ 75 ಸಾವಿರ ರೂ.ಗಳಿಗೆ ಪರಿಷ್ಕರಿಸಲಾಗುತ್ತಿದೆ.
ಒಂದು ವರ್ಷಕ್ಕೆ 3 ಲಕ್ಷ ರೂ.ಗಳ ಆತಿಥ್ಯ ಭತ್ಯೆಯನ್ನು ನಾಲ್ಕು ಲಕ್ಷ ರೂ.ಗಳಿಗೆ ಹೆಚ್ಚಳ ಮಾಡಲಾಗಿದೆ. ವಾಹನದ ಇಂಧನ ಭತ್ಯೆಯನ್ನು ಒಂದು ಸಾವಿರ ಲೀಟರ್ ಬದಲಾಗಿ 2000 ಲೀಟರ್ ಗೆ ಹೆಚ್ಚಿಸಲಾಗಿದೆ. ವಿರೋಧ ಪಕ್ಷದ ನಾಯಕರು ಸರ್ಕಾರಿ ಮುಖ್ಯ ಸಚೇತಕರಿಗೆ ವೇತನ ಭತ್ಯೆಗಳು ಹಾಗೆ ವಿಧಾನಸಭೆ ಮತ್ತು ಪರಿಷತ್‍ನ ಸದಸ್ಯರ ವೇತನ ಭತ್ಯೆಗಳನ್ನು ಪರಿಷ್ಕರಣೆಗೆ ಈ ವಿಧೇಯಕ ಅವಕಾಶ ಮಾಡಿಕೊಡಲಿದೆ.
ಮುಖ್ಯಮಂತ್ರಿಯವರ ಸಂಬಳ ಪ್ರತಿ ತಿಂಗಳು 50 ಸಾವಿರ ರೂ.ಗಳಿಂದ 75 ಸಾವಿರ ರೂ.ಗಳಿಗೆ, ಆತಿಥ್ಯ ಭತ್ಯೆಯನ್ನು 3 ಲಕ್ಷದಿಂದ 4 ಲಕ್ಷ ರೂ.ಗಳಿಗೆ ಇಂಧನ ಭತ್ಯೆಯನ್ನು ದುಪ್ಪಟ್ಟು ಮಾಡಲಾಗಿದೆ.
ಅದೇ ರೀತಿ ಸಚಿವರು, ರಾಜ್ಯ ಸಚಿವರು ಮತ್ತು ಮಂತ್ರಿಗಳು ಸಂಬಳ, ಭತ್ಯೆ ಹೆಚ್ಚಳಕ್ಕೆ ವಿಧೇಯಕದಲ್ಲಿ ಅವಕಾಶ ಮಾಡಿಕೊಡಲಾಗಿದೆ.ಮಂತ್ರಿಗಳಿಗೆ ತಿಂಗಳಿಗೆ ಅಂದಾಜು 4,47,500 ರೂ.ಸಿಗಲಿದೆ.
ಸಿಎಂ, ಮಂತ್ರಿಗಳ ಪರಿಷ್ಕೃತ ಸಂಬಳ, ಭತ್ಯೆ ಈ ರೀತಿ ಇದೆ.
- ಸಂಬಳ (ಮುಖ್ಯಮಂತ್ರಿ): 50,000 ದಿಂದ 75,000 ರೂ.,
- ಸಂಬಳ (ಸಚಿವರಿಗೆ): 40,000 ರಿಂದ 60,000 ರೂ.
- ಆತಿಥ್ಯ ಭತ್ಯೆ(ವಾರ್ಷಿಕ): 3,00,000 ರಿಂದ 4,50,000 ರೂ.
- ಮನೆ ಬಾಡಿಗೆ: 80,000 ದಿಂದ 1,20,000 ರೂ.
- ಮನೆ ನಿರ್ವಹಣೆ: 20,000 ರಿಂದ 30,000 ರೂ.
- ಇಂಧನ: 1000 ಲೀಟರ್ ದಿಂದ 2000 ಲೀಟರ್
ಸಭಾಧ್ಯಕ್ಷರ, ವಿಪಕ್ಷ ನಾಯಕ ಹಾಗೂ ಸಚೇತಕರಿಗೂ ಭತ್ಯೆ ಹೆಚ್ಚಳ:
ಸಭಾಧ್ಯಕ್ಷರು/ ಉಪಸಭಾಧ್ಯಕ್ಷ ಸಂಬಳ, ಭತ್ಯೆ ಎಷ್ಟಿದೆ? :
- ಸಂಬಳ: 50,000 ದಿಂದ 75,000 ರೂ.
- ಆತಿಥ್ಯ ವೇತನ ವಾರ್ಷಿಕ: 3,00,000 ದಿಂದ 4,00,000 ರೂ.
- ಮನೆ ಬಾಡಿಗೆ: 80,000 ರಿಂದ 1,60,000 ರೂ.
- ಇಂಧನ: 1000 ಲೀಟರ್ ರಿಂದ 2000 ಲೀಟರ್.
- ಪ್ರಯಾಣ ಬತ್ಯೆ: ಪ್ರತಿ ಕಿಲೋಮೀಟರ್ 30 ರಿಂದ 40 ರೂ.
- ದಿನ ಭತ್ಯೆ (ಪ್ರಯಾಣ): ದಿನಕ್ಕೆ 2000 ದಿಂದ 3000 ರೂ.
- ಹೊರ ರಾಜ್ಯ ಪ್ರವಾಸ: ದಿನಕ್ಕೆ 2500 +5000 - 3000+7000 ರೂ.
ವಿಪಕ್ಷ ನಾಯಕರಿಗೆ :
- ಸಂಬಳ: 40,000 ದಿಂದ 60,000 ರೂ.
- ಆತಿಥ್ಯ ವೇತನ ವಾರ್ಷಿಕ: 2,00,000 ದಿಂದ 2,50,000 ರೂ.
- ಇಂಧನ: 1000 ಲೀಟರ್ ರಿಂದ 2000 ಲೀಟರ್.
- ಪ್ರಯಾಣ ಭತ್ಯೆ: ಪ್ರತಿ ಕಿಲೋಮೀಟರ್ 30 ರೂ.
- ದಿನ ಭತ್ಯೆ (ಪ್ರಯಾಣ): ದಿನಕ್ಕೆ 2000 ದಿಂದ 3000 ರೂ.
- ಹೊರ ರಾಜ್ಯ ಪ್ರವಾಸ: 5000 ದಿಂದ 7000 ರೂ.
ಶಾಸಕರ ಭತ್ಯೆ:
- ಸಂಬಳ: 20,000 ದಿಂದ 40,000 ರೂ.
- ಕ್ಷೇತ್ರದ ಭತ್ಯೆ: 40,000 ರಿಂದ 60000 ರೂ.
- ಆತಿಥ್ಯ ವೇತನ (ವಾರ್ಷಿಕ): 2,00,000 ದಿಂದ 2,50,000 ರೂ.
- ಇಂಧನ: 1000 ಲೀಟರ್ ರಿಂದ 2000 ಲೀಟರ್.
- ಪ್ರಯಾಣ ಭತ್ಯೆ: ಪ್ರತಿ ಕಿಲೋಮೀಟರ್ 25 ರಿಂದ 30 ರೂ.ಗೆ ಏರಿಕೆ
- ದಿನ ಭತ್ಯೆ(ಪ್ರಯಾಣ): ದಿನಕ್ಕೆ 2000 ದಿಂದ 2500 ರೂ.
- ಹೊರ ರಾಜ್ಯ ಪ್ರವಾಸ: 5000 ದಿಂದ 7000 ರೂ.
- ದೂರವಾಣಿ ವೆಚ್ಚ ಯತಾಸ್ಥಿತಿ ತಿಂಗಳಿಗೆ 20,000 ರೂ. ಕಾಯ್ದಿರಿಸಲಾಗಿದೆ.
- ಆಪ್ತಸಹಾಯಕನಿಗೆ ಮತ್ತು ರೂಮ್ ಬಾಯ್ ಸೇರಿ ತಿಂಗಳಿಗೆ 10,000 ರಿಂದ 20,000 ರೂ.ಗೆ ಹೆಚ್ಚಳ ಮಾಡಲಾಗಿದೆ.
ಇದನ್ನೂ ಓದಿ: ಈಶ್ವರಪ್ಪ ರಾಜೀನಾಮೆಗೆ ಕಾಂಗ್ರೆಸ್ ಪಟ್ಟು : ವಿಧಾನಸಭೆ ಅಧಿವೇಶನ ಮಾರ್ಚ್ 4ರವರೆಗೆ ಮುಂದೂಡಿಕೆ