ಬೆಂಗಳೂರು: ಸಿದ್ದರಾಮಯ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಇಂದಿರಾ ಕ್ಯಾಂಟೀನ್ ಹೆಸರನ್ನು ಬಿಜೆಪಿ ಸರ್ಕಾರ ಬದಲಾಯಿಸುವ ನಿರ್ಧಾರಕ್ಕೆ ಬಂದಿರುವುದು ಗೊತ್ತಿರುವ ವಿಚಾರ. ಆದರೆ, ಯಾವ ಹೆಸರಿಡಬೇಕು ಎನ್ನುವುದೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ತಲೆ ನೋವಾಗಿ ಪರಿಣಮಿಸಿದೆ.
ಬಿಜೆಪಿ ಈಗಾಗಲೇ ಇಂದಿರಾ ಹೆಸರು ಬದಲಿಗೆ ಮಹಾತ್ಮರೊಬ್ಬರ ಹೆಸರು ನಾಮಕಾರಣ ಮಾಡುವ ನಿರ್ಧಾರಕ್ಕೆ ಬಂದಿದೆ. ಇದನ್ನು ಪೌರಾಡಳಿತ ಸಚಿವರೂ ಆಗಿರುವ ಕಂದಾಯ ಸಚಿವ ಆರ್.ಅಶೋಕ್ ಸ್ಪಷ್ಟಪಡಿಸಿದ್ದಾರೆ.
ಅಷ್ಟೇ ಅಲ್ಲದೆ, ಈ ವಿಚಾರ ಮುನ್ನೆಲೆ ಬಂದಿದ್ದೇ ತಡ ಬಿಜೆಪಿಯ ಒಬ್ಬೊಬ್ಬ ಶಾಸಕರೂ ಒಂದೊಂದು ಹೆಸರು ಸೂಚಿಸಿ ಸಿಎಂಗೆ ಮನವಿ ಸಲ್ಲಿಸುತ್ತಿದ್ದಾರೆ.
ಈ ಹೆಸರಿಡಿ, ಆ ಹೆಸರಿಡಿ!:
ಬಿಜೆಪಿ ಶಾಸಕ ರಾಜು ಗೌಡ ಅವರು ಮಹರ್ಷಿ ವಾಲ್ಮೀಕಿ, ಅನ್ನಕುಟೀರ ಹೆಸರಿಡುವಂತೆ ಸಿಎಂಗೆ ಮನವಿ ಮಾಡಿದ್ದರು. ಇದಕ್ಕೆ ಆರ್.ಅಶೋಕ್ ತಮ್ಮ ಒಲವು ವ್ಯಕ್ತಪಡಿಸಿದ್ದರು. ಅದರ ಬೆನ್ನಲ್ಲೇ ಸಚಿವ ಸಿ.ಟಿ.ರವಿ ಅವರು ಬಿಜೆಪಿ ಚುನಾವಣಾ ಪ್ರಣಾಳಿಕೆಯಂತೆ ಅನ್ನಪೂರ್ಣೇಶ್ವರಿ ಕ್ಯಾಂಟೀನ್ ಎಂಬುದಾಗಿ ಹೆಸರಿಡುವುದು ಸೂಕ್ತ ಎಂದು ಮನವಿ ಮಾಡಿದ್ದಾರೆ.
ಇತ್ತ ಸಚಿವ ಸುರೇಶ್ ಕುಮಾರ್ ಇಂದಿರಾ ಕ್ಯಾಂಟೀನ್‌ಗೆ ಅನ್ನಕುಟೀರ, ಮತ್ತೊಂದಿಷ್ಟು ಶಾಸಕರು ಸಂಗೊಳ್ಳಿರಾಯಣ್ಣ ಎಂಬುದಾಗಿ ಸೂಕ್ತ ಎಂಬ ಮನವಿಯನ್ನೂ ಮಾಡಿದ್ದಾರೆ. ಬೆಳಗಾವಿ ಭಾಗದ ಇಂದಿರಾ ಕ್ಯಾಂಟೀನ್‌ಗೆ ಸಂಗೊಳ್ಳಿ ರಾಯಣ್ಣ ಹೆಸರಿಡಿ ಎಂಬ ಕೂಗು ಕೇಳಿಬರುತ್ತಿದೆ.
ಬೆಂಗಳೂರು ವ್ಯಾಪ್ತಿಯ ಇಂದಿರಾ ಕ್ಯಾಂಟೀನ್‌ಗೆ ನಾಡಪ್ರಭು ಕೆಂಪೇಗೌಡರ ಹೆಸರು ನಾಮಕಾರಣ ಮಾಡಲು ಇಲ್ಲಿನ ಶಾಸಕರು ಒತ್ತಾಯಿಸಿದ್ದಾರೆ. ರಾಜ್ಯದ ಆಯಾ ಭಾಗದಲ್ಲಿರುವ ಇಂದಿರಾ ಕ್ಯಾಂಟೀನ್‌ಗೆ ಆ ಭಾಗದ ಪುಣ್ಯಪುರುಷರ ಹೆಸರಿಡುವುದು ಸೂಕ್ತ ಎಂದು ಕೆಲ ಬಿಜೆಪಿ ಶಾಸಕರು ಸಲಹೆ ನೀಡುತ್ತಿದ್ದಾರೆ. ಇಷ್ಟೊಂದು ಹೆಸರುಗಳನ್ನು ಸೂಚಿಸಿ ಬಿಜೆಪಿ ಶಾಸಕರು ಮನವಿ ಮಾಡುತ್ತಿರುವುದರಿಂದ ಯಡಿಯೂರಪ್ಪ ಅವರು ಗೊಂದಲಕ್ಕೆ ಸಿಲುಕಿದ್ದಾರೆ.