ಆನೇಕಲ್ : ನಿನ್ನೆ ಮುಂಜಾವಿನಲ್ಲಿ ಡೀಸೆಲ್ ಕದಿಯುತ್ತಿದ್ದವರ ಮೇಲೆ ಮುಗಿಬಿದ್ದ ಜಿಗಣಿ ಠಾಣೆಯ ಪೇದೆ ಕೋಟೇಶ್ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಐಜಿಪಿ ಚಂದ್ರಶೇಖರ್ ಜಿಗಣಿಗೆ ಭೇಟಿ ನೀಡಿ ಗಾಯಾಳು ಪೊಲೀಸ್ ಮತ್ತು ಪಿಐ ಸುದರ್ಶನ್ ಅವರಿಗೆ ರಿವಾರ್ಡ್ ಘೋಷಿಸಿದ್ದಾರೆ.
ಪ್ರಕರಣ ಬಗ್ಗೆ ಮಾಹಿತಿ ನೀಡಿದ ಐಜಿಪಿ ಚಂದ್ರಶೇಖರ್, ಇತ್ತೀಚೆಗೆ ನಿಂತಿರುವ ಲಾರಿಗಳು ಹಾಗೂ ಇತರ ವಾಹನಗಳಿಂದ ಡೀಸೆಲ್ ಕಳ್ಳತನ ನಡೆಯುತ್ತಿರುವ ಬಗ್ಗೆ ಮಾಹಿತಿ ಬಂದಿತ್ತು. ಆದರೆ, ಯಾರೂ ಈ ಕುರಿತು ದೂರು ನೀಡಿರಲಿಲ್ಲ. ನಿನ್ನೆ ಬೆಳಗಿನ ಜಾವ ಇನ್ಸ್ಪೆಕ್ಟರ್ ಸುದರ್ಶನ್ ಅವರು ಪೆಟ್ರೋಲಿಂಗ್ನಲ್ಲಿದ್ದಾಗ ಮೈಕೋಲಾಪ್ಸ್ ಹತ್ತಿರ ನಿಂತಿದ್ದ ಟ್ರಕ್ನಿಂದ ನಾಲ್ಕು ಜನ ಡೀಸೆಲ್ ಕದಿಯುತ್ತಿರುವುದನ್ನು ಗಮನಿಸಿದ್ದಾರೆ.
ಆರೋಪಿಗಳು ಟಾಟಾ ಸುಮೋದಲ್ಲಿದ್ದರು. ಪೊಲೀಸರನ್ನು ನೋಡಿದ ತಕ್ಷಣ ನಾಲ್ವರಲ್ಲಿ ಇಬ್ಬರು ಓಡಿ ಹೋಗಿದ್ದಾರೆ. ಒಬ್ಬರು ಪೊಲೀಸ್ ವಾಹನಕ್ಕೆ ಡಿಕ್ಕಿ ಹೊಡೆದು ಪರಾರಿಯಾಗಿದ್ದರು. ಬೆನ್ನಟ್ಟಿದ್ದ ಪೊಲೀಸರು ಶೋಭಾ ಕಾಂಕ್ರೀಟ್ ಬ್ಲಾಕ್ಸ್ ಹತ್ತಿರ ಅವರ ಟಾಟಾ ಸುಮೋದ ಟಯರ್ಗೆ ಶೂಟ್ ಮಾಡಿದ್ದಾರೆ.
ಟಯರ್ ಪಂಚರ್ ಆದಾಗ ಗಾಡಿಯಿಂದ ಇಳಿದ ಇಬ್ಬರು ಪೊಲೀಸರ ಮೇಲೆ ಕಲ್ಲುಗಳನ್ನು ತೂರಿ ಅವರಲ್ಲಿದ್ದ ಮಚ್ಚಿನಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಅದರಲ್ಲಿ ಪಿಸಿ ಕೋಟೇಶ್ ಅವರ ಕೈಗೆ ಗಾಯಗಳಾಗಿದೆ. ಆರೋಪಿ ಕಾಲಿಗೆ ಗುಂಡು ಹೊಡೆದು ಮತ್ತೊಬ್ಬನನ್ನು ಬಂಧಿಸುವಲ್ಲಿ ಎಸ್ಪಿ ಲಕ್ಷ್ಮಿ ಗಣೇಶ್ ಮತ್ತು ಡಿವೈಎಸ್ಪಿ ಎಂ.ಮಲ್ಲೇಶ್ ಮಾರ್ಗದರ್ಶನದ ತಂಡ ಉತ್ತಮ ಸಾಹಸ ಕಾರ್ಯ ಮಾಡಿದೆ.
ಕೋಟೇಶ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆರೋಗ್ಯವಾಗಿದ್ದಾರೆ. ಆರೋಪಿಯೂ ಒಬ್ಬ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರ ಬಗ್ಗೆ ಹೆಚ್ಚಿನ ತನಿಖೆ ಮುಂದೆ ನಡೆಯಲಿದೆ ಎಂದು ತಿಳಿಸಿದರು. ಡೀಸೆಲ್ ಕಳ್ಳರನ್ನು ಹಿಡಿಯಲು ಅಧಮ್ಯ ಸಾಹಸ ಮಾಡಿ ಇಬ್ಬರನ್ನು ಬಂಧಿಸುವಲ್ಲಿ ಸಫಲರಾದ ಕೋಟೇಶ್, ಮೆಹಬೂಬ್ ಸಾಬ್, ಚೆನ್ನಬಸವ, ಗಂಗಾಧರ್ ಕೊಟ್ಟೂರ್ ಮತ್ತು ಪಿಐ ಸುದರ್ಶನ್ ಅವರನ್ನು ಅಭಿನಂದಿಸಿದರು.