ಬೆಂಗಳೂರು: ಕೊರೊನಾ ಸಂಕಷ್ಟ ಮತ್ತು ಕಲ್ಯಾಣ ಕರ್ನಾಟಕದ ಜನತೆ ಅತಿವೃಷ್ಟಿಯಿಂದ ಬಾಧಿತರಾಗಿರುವಾಗ ಈ ಬಾರಿ ತಮ್ಮ ಜನ್ಮದಿನವನ್ನು ಸಾರ್ವಜನಿಕವಾಗಿ ಆಚರಿಸಿಕೊಳ್ಳದಿರಲು ಕೆಪಿಸಿಸಿ ಕಾರ್ಯಾಧ್ಯಕ್ಷ ಮತ್ತು ಭಾಲ್ಕಿ ಶಾಸಕ ಈಶ್ವರ ಖಂಡ್ರೆ ನಿರ್ಧರಿಸಿದ್ದಾರೆ.
ಪ್ರತಿ ವರ್ಷ ಜ.15ರಂದು ಭಾಲ್ಕಿ ಕ್ಷೇತ್ರದ ಜನತೆ, ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಮತ್ತು ಹಿತೈಷಿಗಳು ಸೇರಿ ತಮ್ಮ ಜನ್ಮ ದಿನ ಆಚರಿಸುತ್ತಿದ್ದರು. ಅವರೆಲ್ಲರ ಪ್ರೀತಿ, ಅಭಿಮಾನಕ್ಕೆ ತಲೆಬಾಗಿ, ಕೇಕ್ ಕತ್ತರಿಸಿ ನಾನೂ ಈ ಅದ್ಧೂರಿ ಜನ್ಮದಿನ ಸಮಾರಂಭದಲ್ಲಿ ಪಾಲ್ಗೊಳ್ಳುತ್ತಿದ್ದೆ. ಆದರೆ, ಈ ಬಾರಿ ವಿಶ್ವವೇ ಕೊರೊನಾ ಸಂಕಷ್ಟದಲ್ಲಿರುವಾಗ, ಮತ್ತು ಭಾಲ್ಕಿ ಕ್ಷೇತ್ರದ ಜನತೆಯೂ ಸೇರಿದಂತೆ ಕಲ್ಯಾಣ ಕರ್ನಾಟಕದ ಜನರು ಅತಿವೃಷ್ಟಿಯಿಂದ ಬಾಧಿತವಾಗಿರುವಾಗ ಸಾರ್ವಜನಿಕವಾಗಿ ಸಂಭ್ರಮಿಸುವುದು ಸರಿಯಲ್ಲ ಎಂದು ತಾವು ಈ ನಿರ್ಧಾರಕ್ಕೆ ಬಂದಿರುವುದಾಗಿ ಈಶ್ವರ ಖಂಡ್ರೆ ತಿಳಿಸಿದ್ದಾರೆ.
ಈ ನಿಟ್ಟಿನಲ್ಲಿ ತಮ್ಮ ಪಕ್ಷದ ಕಾರ್ಯಕರ್ತರು ಅಭಿಮಾನಿಗಳು, ಕ್ಷೇತ್ರದ ಜನರು ಜ.15 ರಂದು ಹಾರ, ತುರಾಯಿ, ಶಾಲು ಇತ್ಯಾದಿಗೆ ಹಣ ವೆಚ್ಚ ಮಾಡದೇ, ತಾವು ಇರುವಲ್ಲಿಂದಲೇ ಶುಭ ಕೋರುವಂತೆ ಈಶ್ವರ ಖಂಡ್ರೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಇಂದು ಮೂರು ಗಂಟೆಗೆ ಸಂಪುಟ ವಿಸ್ತರಣೆ : ಯಾರಾಗಲಿದ್ದಾರೆ ನೂತನ ಮಿನಿಸ್ಟರ್!?
ಇಂದು ಸಭೆ: ಜನವರಿ 18 ರಂದು ಕಲಬುರ್ಗಿಯಲ್ಲಿ ಕೆಪಿಸಿಸಿಯಿಂದ ಹಮ್ಮಿಕೊಂಡಿರುವ ಸಂಕಲ್ಪ ಸಮಾವೇಶದ ಹಿನ್ನೆಲೆ ಇಂದು ಕಲಬುರ್ಗಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಪೂರ್ವಭಾವಿ ಸಭೆ ಕರೆದಿದ್ದಾರೆ. ಸಭೆಯಲ್ಲಿ ಶಾಸಕರಾದ ಪ್ರಿಯಾಂಕ್ ಖರ್ಗೆ ಅಜಯ್ ಸಿಂಗ್ ಹಾಗೂ ಇದೇ ಮುಖಂಡರು ಭಾಗಿಯಾಗುವ ಸಾಧ್ಯತೆ ಇದೆ. ಕಲಬುರ್ಗಿ ಜಿಲ್ಲಾ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿ ಸಭೆ ನಡೆಸಲು ತೀರ್ಮಾನಿಸಲಾಗಿದೆ. ಈ ಸಂದರ್ಭ 18 ರಂದು ನಡೆಯಲಿರುವ ಸಂಕಲ್ಪ ಸಮಾವೇಶದ ರೂಪುರೇಷೆಗಳ ಕುರಿತು ಮುಖಂಡರು ಚರ್ಚಿಸಲಿದ್ದಾರೆ.