ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ವಿಚಾರ ಸದ್ಯಕ್ಕೆ ಮಾತನಾಡಲ್ಲ. ಪಕ್ಷದ ವೇದಿಕೆಯಲ್ಲಿ ಚರ್ಚಿಸಿದ ನಂತರ ಪ್ರತಿಕ್ರಿಯಿಸುತ್ತೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.
ಈ ವಿಚಾರವಾಗಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಮುಂದೆ ನಮ್ಮ ಪಕ್ಷದ ನಾಯಕರ ಜೊತೆಗೆ ಸುದೀರ್ಘ ಚರ್ಚೆ ಮಾಡಿ ಮಾತಾಡುತ್ತೇನೆ. ನಾನು ಈ ಸಂದರ್ಭದಲ್ಲಿ ಮಾತನಾಡಲ್ಲ. ಈಗಾಗಲೇ ಈ ವಿಚಾರವಾಗಿ ಸಮಾಲೋಚಿಸಿದ್ದೇವೆ. ರಮೇಶ್ ಜಾರಕಿಹೊಳಿ ಅವರು ಗೃಹಸಚಿವರನ್ನು ಕೇಂದ್ರ ಸಚಿವರನ್ನು ಭೇಟಿ ಮಾಡಿರುವ ಮಾಹಿತಿ ಇದೆ. ಎಲ್ಲೆಲ್ಲಿ ಎಷ್ಟೆಷ್ಟು ಪ್ರಕರಣಗಳಾಗಿವೆ ಎಂಬುದು ಸೇರಿದಂತೆ ಎಲ್ಲ ಮಾಹಿತಿ ಸಂಗ್ರಹಿಸುತ್ತೇವೆ. ಈಗ ಈ ವಿಚಾರವಾಗಿ ಚರ್ಚೆ ಮಾಡುವುದು ಬೇಡ. ಯಾವಾಗ ಮಾತನಾಡಬೇಕು ಎನ್ನುವುದನ್ನು ನಿರ್ಧರಿಸಿ ನಿಮಗೆ ತಿಳಿಸುತ್ತೇನೆ ಎಂದರು.
ಬೆಡ್ ಬ್ಲಾಕಿಂಗ್ ಪ್ರಕರಣ ಸಂಬಂಧ ಸತೀಶ್ ರೆಡ್ಡಿ ಬೆಂಬಲಿಗರ ಕೈವಾಡ ವಿಚಾರ ಮಾತನಾಡಿ, ಸಿಸಿಬಿಯವರು ಈಗ ಒಳ್ಳೆಯ ಕೆಲಸ ಮಾಡಿದ್ದಾರೆ. ಇದರ ಬಗ್ಗೆ ತೇಜಸ್ವಿ ಸೂರ್ಯನನ್ನೇ ಕೇಳಬೇಕು. ಪಾಪ ಸತೀಶ್ ರೆಡ್ಡಿನ ಕೇಳಿದರೆ ಹೇಗೆ ಎಂದು ವ್ಯಂಗ್ಯವಾಡಿದರು.
ಅಭಯ್ ಪಾಟೀಲ್ ಪೂಜೆ ಸಲ್ಲಿಸಿರುವ ವಿಚಾರ ಮಾತನಾಡಿ, ನಮ್ಮ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ, ವೈಜ್ಞಾನಿಕವಾಗಿ ಕ್ಷೇತ್ರ ವ್ಯಾಪ್ತಿಯಲ್ಲಿ ಕೊರೊನಾ ನಿಯಂತ್ರಣಕ್ಕೆ ಸ್ಯಾನಿಟೈಸೇಷನ್ ಮಾಡಿದರು. ವಿಜ್ಞಾನಿಗಳು ಕಂಡು ಹಿಡಿದ ವ್ಯವಸ್ಥೆಯನ್ನು ಬಳಸಿ ರೋಗವನ್ನು ದೂರಮಾಡುವ ಪ್ರಯತ್ನ ಮಾಡಿದ್ದಾರೆ. ಆದರೆ, ಶಾಸಕ ಅಭಯ್ ಪಾಟೀಲ್ ಇದನ್ನ ಧರ್ಮದ ಕಡೆ ಕೊಂಡೊಯ್ಯುವ ಪ್ರಯತ್ನ ಮಾಡಿದ್ದಾರೆ. ಅವರು ಪ್ರಧಾನ ಮಂತ್ರಿ ಅವರನ್ನು ಅನುಸರಿಸುತ್ತಿದ್ದಾರೆ. ದೀಪ ಹಚ್ಚಿ, ಚಪ್ಪಾಳೆ ಹೊಡೆಯಿರಿ ಗಂಟೆ ಹೊಡೆಯಿರಿ ಎಂಬ ರೀತಿಯಲ್ಲಿ ಅನುಸರಿಸುತ್ತಿದ್ದಾರೆ ಎಂದು ಲೇವಡಿ ಮಾಡಿದರು.