ಬೆಂಗಳೂರು: ಕೋವಿಡ್-19 ನಿಯಂತ್ರಣ ವಿಷಯವಾಗಿ ಮೇಲ್ವಿಚಾರಣೆ ನಡೆಸಲು ಹಾಗೂ ಅಗತ್ಯ ಮಾರ್ಗದರ್ಶನ ನೀಡಲು ರೂಪಿಸಿರುವ ರಾಜ್ಯ ಮಟ್ಟದ ತಜ್ಞರ ಸಮಿತಿಯು ಈವರೆಗೂ ನಡೆಸಿರುವ ತನ್ನೆಲ್ಲಾ ಕಾರ್ಯ ಚಟುವಟಿಕೆಗಳ ಕುರಿತಂತೆ ವರದಿ ಸಲ್ಲಿಸಲು ಹೈಕೋರ್ಟ್ ನಿರ್ದೇಶಿಸಿದೆ.
ಕೋವಿಡ್-19 ನಿರ್ವಹಣೆಗೆ ಸಂಬಂಧಿಸಿದಂತೆ ಸಲ್ಲಿಸಿರುವ ವಿವಿಧ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ ನೇತೃತ್ವದ ವಿಭಾಗೀಯ ಪೀಠ ಈ ನಿರ್ದೇಶನ ನೀಡಿದೆ. ವಿಚಾರಣೆ ವೇಳೆ ಅಭಿಪ್ರಾಯ ವ್ಯಕ್ತಪಡಿಸಿದ ಪೀಠ, ಸದ್ಯ ರಾಜ್ಯದಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳು ನಿರಂತರವಾಗಿ ಹೆಚ್ಚುತ್ತಿವೆ. ಸೋಂಕು ಸದ್ಯಕ್ಕೆ ಕಡಿಮೆಯಾಗುವ ಲಕ್ಷಣಗಳು ಕಾಣುತ್ತಿಲ್ಲ. ಹೀಗಿರುವಾಗ ತಜ್ಞರ ಸಮಿತಿ ಪಾತ್ರ ಬಹಳ ಮುಖ್ಯ ಎಂದಿದೆ.
ಅಲ್ಲದೆ, ತಜ್ಞರ ಸಮಿತಿ ಈವರೆಗೆ ಏನೆಲ್ಲಾ ಕಾರ್ಯ ನಿರ್ವಹಿಸಿದೆ? ಎಷ್ಟು ಸಭೆ ನಡೆಸಿದೆ? ಎಷ್ಟು ಆಸ್ಪತ್ರೆಗಳ ಪರಿಶೀಲನೆ ನಡೆಸಿದೆ? ಮುಖ್ಯವಾಗಿ ಎಷ್ಟು ಖಾಸಗಿ ಕೋವಿಡ್-19 ಆಸ್ಪತ್ರೆ ಮತ್ತು ಕೋವಿಡ್ ಕೇರ್ ಸೆಂಟರ್ಗಳಲ್ಲಿ ಸಮರ್ಪಕ ಸೌಲಭ್ಯಗಳು ಇವೆಯೇ? ಅವಶ್ಯವಾದ ಉಪಕರಣಗಳು ಇವೆಯೇ? ಅಲ್ಲಿ ಒದಗಿಸುತ್ತಿರುವ ಆಹಾರದ ಗುಣಮಟ್ಟ ಹೇಗಿದೆ? ಇತ್ಯಾದಿ ಅಂಶಗಳ ಬಗ್ಗೆ ವರದಿ ಸಲ್ಲಿಸಬೇಕು ಎಂದು ಸಮಿತಿಯ ಸದಸ್ಯ ಕಾರ್ಯದರ್ಶಿಗೆ ಪೀಠ ನಿರ್ದೇಶಿಸಿದೆ.
ವಿಚಾರಣೆ ವೇಳೆ ವಕೀಲ ಜಿ.ಆರ್.ಮೋಹನ್ ವಾದಿಸಿ, ಬೆಂಗಳೂರು ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರ ಮತ್ತು ಜಿಕೆವಿಕೆಯಲ್ಲಿ ಸ್ಥಾಪಿಸಿರುವ ಕೋವಿಡ್ ಕೇರ್ ಕೇಂದ್ರವನ್ನು ಮುಚ್ಚುವುದಾಗಿ ಸರ್ಕಾರ ಹಾಗೂ ಬಿಬಿಎಂಪಿ ಹೇಳುತ್ತಿದೆ. ಈ ಕೋವಿಡ್ ಕೇರ್ ಸೆಂಟರ್ಗಳನ್ನು ಸ್ಥಾಪಿಸಲು ಕೋಟ್ಯಂತರ ಹಣ ವ್ಯಯಿಸಲಾಗಿದೆ ಮತ್ತು ಬಿಐಇಸಿಯಲ್ಲಿ 10,500 ಸಾವಿರ ಹಾಸಿಗೆಗಳ ವ್ಯವಸ್ಥೆ ಮಾಡಿರುವುದಾಗಿ ಸರ್ಕಾರವೇ ಹೇಳಿದೆ. ಕೊರೊನಾ ವ್ಯಾಪಿಸುತ್ತಿರುವ ಸಂದರ್ಭದಲ್ಲಿ ಈ ಸೆಂಟರ್ಗಳನ್ನು ಮುಚ್ಚಿದರೆ ಸಮಸ್ಯೆಯಾಗಲಿದೆ. ಅಲ್ಲಿರುವ ಉಪಕರಣಗಳು ವ್ಯರ್ಥವಾಗಲಿವೆ. ಇಷ್ಟಲ್ಲದೆ, ಖಾಸಗಿ ಕೋವಿಡ್ ಆಸ್ಪತ್ರೆ ಮೇಲೆ ಒತ್ತಡ ಹೆಚ್ಚಾಗಲಿದೆ. ಈ ಅಂಶವನ್ನು ತಜ್ಞರ ಸಮಿತಿ ಪರಿಶೀಲಿಸುವಂತೆ ನಿರ್ದೇಶನ ನೀಡಬೇಕು ಎಂದು ಕೋರಿದರು. ವಾದ ಪರಿಗಣಿಸಿದ ಪೀಠ, ಕೇಂದ್ರಗಳನ್ನು ಮುಚ್ಚುವ ನಿರ್ಧಾರದ ಬಗ್ಗೆಯೂ ಸಮಿತಿ ಪರಿಶೀಲಿಸಿ ಮುಂದಿನ ಎರಡು ವಾರಗಳಲ್ಲಿ ವರದಿ ಸಲ್ಲಿಸಬೇಕು ಎಂದು ನಿರ್ದೇಶಿಸಿ ವಿಚಾರಣೆ ಮುಂದೂಡಿತು.