ಬೆಂಗಳೂರು: ಹೈಕೋರ್ಟ್ ನ್ಯಾಯಮೂರ್ತಿಗಳು ಮತ್ತು ಕೆಲ ವಕೀಲರನ್ನು ಕೊಲ್ಲುತ್ತೇನೆ ಎಂದು ಬೆದರಿಕೆ ಹಾಕಿ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ಗೆ ಪತ್ರ ಬರೆದಿದ್ದ, 78 ವರ್ಷದ ವೃದ್ಧನ ವಿರುದ್ಧ ದಾಖಲಿಸಿಕೊಂಡಿದ್ದ ಪ್ರಕರಣವನ್ನು ಹೈಕೋರ್ಟ್ ಕೈ ಬಿಟ್ಟಿದೆ.
ತಮ್ಮ ವೈಯಕ್ತಿಕ ಕೇಸ್ವೊಂದರಲ್ಲಿ ಹಿನ್ನೆಡೆ ಅನುಭವಿಸಿದ್ದ ಜಯನಗರ ನಿವಾಸಿ ಎಸ್.ವಿ ಶ್ರೀನಿವಾಸ್ ರಾವ್ ನ್ಯಾಯಮೂರ್ತಿಗಳು ಹಾಗೂ ಕೆಲ ವಕೀಲರನ್ನು ಕೊಲ್ಲುವುದಾಗಿ ಹೈಕೋರ್ಟ್ಗೆ ಪತ್ರ ಬರೆದಿದ್ದರು.
ಈ ಹಿನ್ನೆಲೆಯಲ್ಲಿ ಹೈಕೋರ್ಟ್ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿತ್ತು. ಈ ಅರ್ಜಿಯನ್ನು ಇಂದು ಸಿಜೆ ರಿತುರಾಜ್ ಅವಸ್ಥಿ ಅವರಿದ್ದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ನನಗೆ ನ್ಯಾಯ ಸಿಗದಿದ್ದಕ್ಕೆ ಹೀಗೆ ಪತ್ರ ಬರೆದಿದ್ದೆ.. ’ಈಗ ತಪ್ಪಿನ ಅರಿವಾಗಿದೆ’
ವಿಚಾರಣೆ ವೇಳೆ ಖುದ್ದು ವಾದ ಮಂಡಿಸಿದ ಆರೋಪಿತ ವೃದ್ಧ ರಾವ್, ತಮ್ಮ ಆಸ್ತಿಗೆ ಸಂಬಂಧಿಸಿದ ಪ್ರಕರಣದಲ್ಲಿ ಕಳೆದ 13 ವರ್ಷಗಳಿಂದ ನನಗೆ ನ್ಯಾಯ ಸಿಕ್ಕಿಲ್ಲ. ಇದರಿಂದ ಮಾನಸಿಕ ಸ್ಥಿಮಿತ ಕಳೆದುಕೊಂಡು ಹಾಗೆ ಪತ್ರ ಬರೆದಿದ್ದೆ. ಈ ಬಳಿಕ ತಪ್ಪಿನ ಅರಿವಾಗಿ ಹಿಂದಿನ ಸಿಜೆ ಸೂಚನೆ ಮೇರೆಗೆ ಕ್ಷಮೆ ಕೂಡ ಕೇಳಿದ್ದೇನೆ. ನ್ಯಾಯಾಲಯ ನನ್ನ ವಿರುದ್ಧದ ಪ್ರಕರಣ ಕೈಬಿಡುವುದಾಗಿ ತಿಳಿಸಿತ್ತು. ನನಗೆ ಅನ್ಯಾಯವಾಗಿದ್ದು, ನ್ಯಾಯ ಕೊಡಿಸಿ ಎಂದರು.
ನ್ಯಾಯಾಲಯದ ಚೌಕಟ್ಟಿನಲ್ಲೇ ಪರಿಹಾರ ಕಂಡುಕೊಳ್ಳಬೇಕು
ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ನಿಮಗೆ ಅನ್ಯಾಯವಾಗಿದೆ ಎಂದು ನ್ಯಾಯಮೂರ್ತಿಗಳನ್ನು ನಿಂದಿಸುವ ಹಕ್ಕಿದೆ ಎಂದು ಭಾವಿಸಬೇಡಿ. ನ್ಯಾಯಾಲಯದ ಚೌಕಟ್ಟಿನಲ್ಲೇ ನೀವು ಪರಿಹಾರ ಕಂಡುಕೊಳ್ಳಬೇಕು. ನಿಮ್ಮ ವಿರುದ್ಧ ನ್ಯಾಯಾಂಗ ನಿಂದನೆ ದಾಖಲಿಸಿಕೊಂಡಿರುವ ಈ ಪ್ರಕರಣದಲ್ಲಿ ನಿಮ್ಮ ಅಹವಾಲು ವಿಚಾರಿಸಲು ಸಾಧ್ಯವಿಲ್ಲ. ಅದಕ್ಕೆ ಪ್ರತ್ಯೇಕವಾಗಿ ಅರ್ಜಿ ಸಲ್ಲಿಸಿ ಪರಿಹಾರ ಕಂಡುಕೊಳ್ಳಿ ಎಂದು ಸೂಚಿಸಿತು.
ಬೇಷರತ್ ಕ್ಷಮೆ ಕೋರಿದ್ದ 78ರ ವೃದ್ಧ
ಅಲ್ಲದೇ, ಆರೋಪಿಯು 78 ವರ್ಷದ ವೃದ್ಧನಾಗಿದ್ದು ಹೃದಯ ಸಂಬಂಧಿ ಖಾಯಿಲೆಯಿಂದ ಬಳಲುತ್ತಿದ್ದಾರೆ. ಜತೆಗೆ ಹತಾಸೆಯಿಂದ ಬರೆದ ಬೆದರಿಕೆ ಪತ್ರಕ್ಕೆ ಬೇಷರತ್ ಕ್ಷಮೆ ಕೋರಿದ್ದಾರೆ. ಆರೋಪಿಯ ವಯಸ್ಸು, ಆರೋಗ್ಯ ಪರಿಸ್ಥಿತಿ ಹಾಗೂ ಕ್ಷಮೆ ಕೋರಿರುವುದನ್ನು ಪರಿಗಣಿಸಿ ಆವರ ವಿರುದ್ಧದ ನ್ಯಾಯಾಂಗ ನಿಂದನೆ ಪ್ರಕ್ರಿಯೆಯನ್ನು ಕೈಬಿಡುತ್ತಿದ್ದೇವೆ ಎಂದು ತಿಳಿಸಿ ಅರ್ಜಿ ಇತ್ಯರ್ಥಪಡಿಸಿತು.
ಇದೇ ವೇಳೆ, ಮುಂದಿನ ದಿನಗಳಲ್ಲಿ ಇಂತಹ ವರ್ತನೆ ಪುನರಾವರ್ತಿಸದಂತೆ ತಾಕೀತು ಮಾಡಿತು. ಒಂದು ವೇಳೆ ಮಾಡಿದರೆ, ಕಾನೂನು ರೀತಿ ಕ್ರಮ ಜರುಗಿಸುವುದಾಗಿ ಎಚ್ಚರಿಸಿತು.
ಇದನ್ನೂ ಓದಿ: ನ್ಯಾಯಮೂರ್ತಿಗಳನ್ನು ಕೊಲ್ಲುವ ಬೆದರಿಕೆ ಹಾಕಿದ 72ರ ವೃದ್ಧ: ಹೈಕೋರ್ಟ್ ಕ್ಷಮೆ ಕೇಳಿದ ರಾವ್