ಬೆಂಗಳೂರು: ರಾಜ್ಯದ ಹಲವೆಡೆ ಅಬ್ಬರಿಸುತ್ತಿರುವ ಮಳೆ ಮುಂದಿನ 5 ದಿನ ಮತ್ತಷ್ಟು ಚುರುಕುಗೊಳ್ಳಲಿದೆ. ಈ ಹಿನ್ನೆಲೆ ಈಗಾಗಲೇ ಹಲವು ಜಿಲ್ಲೆಗಳಲ್ಲಿ ಅಲರ್ಟ್ ಘೋಷಿಸಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು, ಹಾಸನದಲ್ಲಿ ನಾಳೆಯಿಂದ ಮೂರು ದಿನ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿಯಲ್ಲಿ ಆಗಸ್ಟ್ 3, 4 ರಂದು ಹಾಗೂ ಮಂಡ್ಯ ಮತ್ತು ರಾಮನಗರದಲ್ಲಿ ಆಗಸ್ಟ್ 4 ರಂದು ಭಾರಿ ಮಳೆ ಬೀಳುವ ಮುನ್ಸೂಚನೆ ಇರುವ ಹಿನ್ನೆಲೆಯಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
ಧಾರವಾಡ, ಗದಗ, ಬಳ್ಳಾರಿ, ಮಂಡ್ಯ, ರಾಮನಗರದಲ್ಲಿ ಆಗಸ್ಟ್ 2 ರಿಂದ 4ರವೆರೆಗೆ ಹಾಗೂ ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಮೈಸೂರು, ಬಾಗಲಕೋಟೆ, ವಿಜಯಪುರ ಮತ್ತು ಕಲಬುರಗಿಯಲ್ಲಿ ಆಗಸ್ಟ್ 4ರಂದು ಯೆಲ್ಲೋ ಅಲರ್ಟ್ ಇರಲಿದೆ. ರಾಜ್ಯದ ಉಳಿದೆಡೆ ಚದುರಿದಂತೆ ಸಾಧಾರಣ ಮಳೆಯಾಗಲಿದೆ ಎಂದು ಇಲಾಖೆ ಮಾಹಿತಿ ನೀಡಿದೆ.
ನಿನ್ನೆ ಹಲವು ಜಿಲ್ಲೆಗಳಲ್ಲಿ ಸುರಿದ ಮಳೆ ಮಾಹಿತಿ: ಭಾನುವಾರ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗಿದ್ದು, ಕಲಬುರಗಿಯಲ್ಲಿ 90 ಮಿ.ಮೀ ಮಳೆ ಬಿದ್ದಿದೆ. ಮುಂದಿನ ನಾಲ್ಕೈದು ದಿನ 115 ಮಿ.ಮೀನಿಂದ 204 ಮಿ.ಮೀವರೆಗೆ ಮಳೆಯಾಗುವ ಸಾಧ್ಯತೆ ಇದೆ ಎಂದು ಹೇಳಿದೆ.
ಬೆಂಗಳೂರಲ್ಲಿ ಮುಂದಿನ ಮೂರು ದಿನ ಮಳೆ: ಸಿಲಿಕಾನ್ ಸಿಟಿಯಲ್ಲಿ ಸುರಿಯುತ್ತಿರುವ ಮಳೆ ಮುಂದಿನ 4 ದಿನ ಮುಂದುವರಿಯಲಿದೆ. ಆಗಸ್ಟ್ 3 ರವರೆಗೆ ಸಾಧಾರಣಕ್ಕಿಂತ ಹೆಚ್ಚು ಮಳೆಯಾದರೆ, ಆಗಸ್ಟ್ 4ರಂದು ಭಾರಿ ಮಳೆ ಹಿನ್ನೆಲೆಯಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ವಾಡಿಕೆಗಿಂತ ಹೆಚ್ಚು ಮಳೆ: ನಗರದಲ್ಲಿ ಜೂನ್ 1ರಿಂದ ಜುಲೈ 31ರವರೆಗೆ ವಾಡಿಕೆಗಿಂತ ಹೆಚ್ಚು ಮಳೆ ಬಿದ್ದಿದೆ. 165 ಮಿ.ಮೀ ಮಳೆ ಬದಲಾಗಿ 297 ಮಿಮೀ ಮಳೆಯಾಗಿದ್ದು, ಶೇ. 79 ಹೆಚ್ಚು ಸುರಿದಿದೆ.
ಧರೆಗೆ ಉರುಳಿದ ಮರಗಳು, ಮನೆಗೆ ನುಗ್ಗಿದ ನೀರು: ಶನಿವಾರ ರಾತ್ರಿ ಮತ್ತು ಭಾನುವಾರ ಸುರಿದ ಭಾರಿ ಮಳೆಯಿಂದ ಸಿಲಿಕಾನ್ ಸಿಟಿಯಲ್ಲಿ 10ಕ್ಕೂ ಹೆಚ್ಚು ಮರಗಳು ಉರುಳಿದ್ದು, 100 ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿರುವುದು ಬೆಳಕಿಗೆ ಬಂದಿದೆ.
ಇದನ್ನೂ ಓದಿ: ಹಿಮಾಚಲದಲ್ಲಿ ಹಠಾತ್ ಪ್ರವಾಹ: ಪ್ರವಾಹದ ಮಧ್ಯೆ ಸಿಲುಕಿರುವ 150 ಜನ