ಬೆಂಗಳೂರು: ಹೆಚ್ಎಎಲ್ ಸಂಸ್ಥೆ ಏಪ್ರಿಲ್ 20 ರಿಂದ ಶಿಫ್ಟ್ ಆಧಾರದಂತೆ ಕೆಲಸ ಆರಂಭಿಸಲಿದೆ. ಪ್ರತಿನಿತ್ಯ 5 ಗಂಟೆಗಳ ಕೆಲಸದ ಅವಧಿ ಆಧಾರದ ಮೇಲೆ ಪ್ರತಿಯೊಂದು ಶಿಫ್ಟ್ ನಡುವೆ ಅರ್ಧ ಗಂಟೆ ಅಂತರದ ಕಾಲಾವಕಾಶ ನೀಡಲಾಗುತ್ತದೆ ಎಂದು ಸಂಸ್ಥೆ ತಿಳಿಸಿದೆ.
ಸಂಸ್ಥೆಯ ನೌಕರರು ಹಾಗೂ ಒಪ್ಪಂದದ ನೌಕರರಿಗೆ ಕೆಲಸಕ್ಕೆ ಹಾಜರಾಗುವಂತೆ ಆದೇಶಿಸಲಾಗಿದೆ. ಏಪ್ರಿಲ್ 20 ರಿಂದ ಮೇ 3 ರ ವರಗೆ ಯಾವುದೇ ಕ್ಯಾಂಟೀನ್ ಸೌಲಭ್ಯ ಇರುವುದಿಲ್ಲ. ಆದರೆ ಕಾರ್ಯ ನಿರ್ವಹಿಸುತ್ತಿರುವ ನೌಕರರಿಗೆ ಕಾಫೀ ಹಾಗೂ ಚಹಾ ವ್ಯವಸ್ಥೆ ಮಾಡಲಾಗುತ್ತದೆ ಎಂದು ಹೆಚ್ಎಎಲ್ ಹೇಳಿದೆ. ಇಷ್ಟೇ ಅಲ್ಲದೆ ಪ್ರತಿಯೊಬ್ಬ ನೌಕರರ ಆರೋಗ್ಯ ತಪಾಸಣೆಯನ್ನು ಸಂಸ್ಥೆಯ ದ್ವಾರದಲ್ಲೇ ಮಾಡಿ ನಂತರ ಕಾರ್ಮಿಕರನ್ನು ಒಳ ಬಿಡಲಾಗುವುದು. ಕೇಂದ್ರ ಗೃಹ ಇಲಾಖೆ ನೀಡಿರುವ ಎಲ್ಲಾ ಸೂಚನೆಯನ್ನು ಸಂಸ್ಥೆ ಪಾಲಿಸಲಿದೆ ಎಂದು ಮಾನವ ಸಂಪನ್ಮೂಲ ಇಲಾಖೆ ಆಶ್ವಾಸನೆ ನೀಡಿದೆ.
ಇನ್ನು, ನೌಕರರು ಕಚೇರಿಗೆ ತಮ್ಮ ಸ್ವಂತ ವಾಹನಗಳಲ್ಲಿ ಬರಬೇಕು, ಸಂಚಾರಕ್ಕೆ ಸಂಸ್ಥೆ ಯಾವುದೇ ವ್ಯವಸ್ಥೆ ಮಾಡಿಲ್ಲ. ಹೆಚ್ಎಎಲ್ ನ ಬೆಂಗಳೂರು ಹಾಗೂ ಖಾನ್ಪುರ ಶಾಖೆಗಳು ಏಪ್ರಿಲ್ 20 ರಿಂದ ಪ್ರಾರಂಭವಾಗಲಿದೆ ಎಂದು ಪ್ರಕಟಣೆಯಲ್ಲಿ ಹಿಂದೂಸ್ತಾನ ಏರೋನಾಟಿಕಲ್ ಲಿಮಿಟೆಡ್ ಉಲ್ಲೇಖಿಸಿದೆ.