ಬೆಂಗಳೂರು: ಮುಜರಾಯಿ ದೇವಾಲಯಗಳ ಮೂಲಕ ನಡೆಯುತ್ತಿರುವ ಯಕ್ಷಗಾನ ಕಲಾವಿದರಿಗೆ ವೇತನ ಪರಿಷ್ಕರಣೆಗಾಗಿ ಸಮಿತಿ ರಚಿಸಲು ನಿರ್ಧರಿಸಲಾಗಿದೆ ಎಂದು ಮುಜರಾಯಿ ಇಲಾಖೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ತಿಳಿಸಿದರು.
ವಿಧಾನಸೌಧದಲ್ಲಿ ಮಾತನಾಡಿದ ಅವರು, ವೇತನ ಪರಿಷ್ಕರಣೆ ಮಾನದಂಡ ನಿಗದಿಗೆ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಎಂ.ಎನ್.ಹೆಗಡೆ ಅವರ ನೇತೃತ್ವದಲ್ಲಿ ಸಮಿತಿ ರಚಿಸಲಾಗುತ್ತದೆ. ತೆಂಕು ಮತ್ತು ಬಡಗು ತಿಟ್ಟಿನ ತಲಾ ಮೂವರು ತಜ್ಞ ಕಲಾವಿದರು ಸಮಿತಿಯ ಸದಸ್ಯರಾಗಿರುತ್ತಾರೆ. 3ತಿಂಗಳಲ್ಲಿ ವರದಿ ನೀಡಲು ಸಮಿತಿಗೆ ಕಾಲಾವಧಿ ನೀಡಲಾಗಿದೆ. ಸಮಿತಿ ವರದಿ ಬಂದ ನಂತರ ವೇತನ ಪರಿಷ್ಕರಣೆ ಬಗ್ಗೆ ತೀರ್ಮಾನಿಸುತ್ತೇವೆ ಎಂದು ತಿಳಿಸಿದರು.
ರಾಸಾಯನಿಕ ಕುಂಕುಮ ಬಳಸದಂತೆ ನಿಷೇಧ:
ರಾಸಾಯನಿಕ ಮಿಶ್ರಿತ ಕುಂಕುಮ ಬಳಸುತ್ತಿರುವ ಆರೋಪ ಕೇಳಿ ಬಂದಿದ್ದು, ಈ ಕುಂಕುಮಗಳನ್ನು ಉಪಯೋಗಿಸದಂತೆ ಸುತ್ತೋಲೆ ಹೊರಡಿಸಲಾಗಿದೆ. ಇದು ಎಲ್ಲಿ ತಯಾರಾಗುತ್ತದೆ ಅನ್ನೋದನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸ್ಪಷ್ಟಪಡಿಸಿದರು.
ಹರಾಡಿ ರಾಮಗಾಣಿಗ ಹೆಸರಲ್ಲಿ ಪ್ರಶಸ್ತಿ:
ಹರಾಡಿ ರಾಮಗಾಣಿಗ ಹೆಸರಲ್ಲಿ ಪ್ರಶಸ್ತಿ ನೀಡಲು ಸರ್ಕಾರ ನಿರ್ಧರಿಸಿದೆ. ಒಂದು ಲಕ್ಷ ರೂ ಮೊತ್ತದ ಪ್ರಶಸ್ತಿ ನೀಡಲು ತೀರ್ಮಾನಿಸಿದ್ದು, ಯಕ್ಷಗಾನದಲ್ಲಿ ಸಾಧನೆ ಮಾಡಿದ ಕಲಾವಿದರಿಗೆ ಈ ಪ್ರಶಸ್ತಿ ನೀಡಲಾಗುವುದು. ಹಿಂದೆ ನಾನು ಮಂತ್ರಿ ಆದಾಗ ಈ ಪ್ರಶಸ್ತಿ ಘೋಷಣೆ ಮಾಡಿದ್ದೆ. ಆದರೆ, ಅದು ನಿಂತು ಹೋಗಿತ್ತು. ಈಗ ಮತ್ತೆ ಪ್ರಶಸ್ತಿ ನೀಡಲು ನಿರ್ಧರಿಸಲಾಗಿದೆ ಎಂದರು.