ಬೆಂಗಳೂರು: ಲಾಕ್‌ಡೌನ್ ರಾಜ್ಯದ ಬೊಕ್ಕಸಕ್ಕೆ ಭಾರಿ ಏಟು ನೀಡಿದೆ. ಲಾಕ್ಡೌನ್ನಿಂದ ಸಂಪೂರ್ಣ ವ್ಯಾಪಾರ, ವಹಿವಾಟು ಸ್ಥಗಿತವಾಗಿರುವುದರಿಂದ ರಾಜ್ಯದ ಸ್ವಂತ ತೆರಿಗೆ ಮೂಲಕ್ಕೇ ಕೊಡಲಿ ಏಟು ಬಿದ್ದಿದೆ. ಬಹುತೇಕ ರಾಜ್ಯದ ಸ್ವಂತ ತೆರಿಗೆಗಳ ಸಂಗ್ರಹ ಕಳೆದ 21 ದಿನಗಳಿಂದ ಸ್ಥಗಿತವಾಗಿದೆ. ಲಾಕ್ಡೌನ್ನಿಂದ ಎದುರಾಗಿರುವ ಆರ್ಥಿಕ ಸಂಕಷ್ಟದಿಂದ ಪಾರಾಗಲು ಇದೀಗ ರಾಜ್ಯ ಸರ್ಕಾರ ಪ್ರಮುಖ ಆದಾಯ ಮೂಲವಾದ ಮದ್ಯ ಮಾರಾಟಕ್ಕೆ ಅನುವು ಮಾಡಿಕೊಡಲು ಚಿಂತನೆ ನಡೆಸಿದೆ.
ಅಬಕಾರಿ ಹಿಂದಿನ ಆರ್ಥಿಕ ಲೆಕ್ಕಾಚಾರ: ಅಬಕಾರಿ ಇಲಾಖೆ ರಾಜ್ಯದ ಪ್ರಮುಖ ಆದಾಯ ಸಂಗ್ರಹದ ಮೂಲವಾಗಿದೆ. ರಾಜ್ಯದ ಬೊಕ್ಕಸವನ್ನು ತುಂಬಿಸುವ ಎರಡನೇ ದೊಡ್ಡ ತೆರಿಗೆ ಮೂಲ ಅಬಕಾರಿ ತೆರಿಗೆ. ರಾಜ್ಯಕ್ಕೆ ಅತಿ ಹೆಚ್ಚು ಆದಾಯ ಮೂಲ ವಾಣಿಜ್ಯ ತೆರಿಗೆ. ನಂತರದ ಸ್ಥಾನ ಅಬಕಾರಿ ತೆರಿಗೆಯದ್ದಾಗಿದೆ. 2020-21 ಸಾಲಿನಲ್ಲಿ ರಾಜ್ಯ ಸರ್ಕಾರ ತನ್ನ ಸ್ವಂತ ತೆರಿಗೆಗಳಿಂದ ಸುಮಾರು 1,28,107 ಕೋಟಿ ರೂ. ಸಂಗ್ರಹಿಸುವ ಗುರಿ ಹೊಂದಿದೆ. ಈ ಪೈಕಿ ವಾಣಿಜ್ಯ ತೆರಿಗೆ ಮೂಲಕ 82,443 ಕೋಟಿ ರೂ. ಸಂಗ್ರಹಿಸುವ ಗುರಿ ಹೊಂದಿದ್ದರೆ, ಬರೋಬ್ಬರಿ 22,700 ಕೋಟಿ ರೂ. ಅಬಕಾರಿ ತೆರಿಗೆ ಮೂಲಕ ಆದಾಯ ಸಂಗ್ರಹದ ಗುರಿ ಹೊಂದಿದೆ. ಅಂದರೆ ಒಟ್ಟು ಸ್ವಂತ ತೆರಿಗೆ ಸಂಗ್ರಹದಲ್ಲಿ ಅಬಕಾರಿ ತೆರಿಗೆಯ ಪಾಲು 18%. 2019-20ನೇ ಸಾಲಿನಲ್ಲಿ 20,950 ಕೋಟಿ ರೂ. ಅಬಕಾರಿ ತೆರಿಗೆ ಸಂಗ್ರಹದ ಗುರಿ ಹೊಂದಿತ್ತು. ಈ ಪೈಕಿ ಫೆಬ್ರವರಿ ಅಂತ್ಯದ ವರೆಗೆ ಸುಮಾರು 19,701 ಕೋಟಿ ರೂ. ತೆರಿಗೆ ಸಂಗ್ರಹದ ಗುರಿ ಮುಟ್ಟಲಾಗಿತ್ತು.
21 ದಿನಗಳಲ್ಲಾದ ಅಬಕಾರಿ ತೆರಿಗೆ ನಷ್ಟ ಏನು?: 21 ದಿನಗಳ ಲಾಕ್ಡೌನ್ನಿಂದ ರಾಜ್ಯಾದ್ಯಂದ ಮದ್ಯ ಮಾರಾಟವನ್ನು ಸಂಪೂರ್ಣ ಮುಚ್ಚಿರುವುದರಿಂದ ತೆರಿಗೆ ಮೂಲವೇ ಖೋತಾ ಆಗಿದೆ. ಈ ಬಾರಿ ಬಜೆಟ್ನಲ್ಲಿ ಸಿಎಂ ಅಬಕಾರಿ ತೆರಿಗೆಯನ್ನು 6%ರಷ್ಟು ಹೆಚ್ಚಿಸಿದ್ದು, 22,700 ಕೋಟಿ ರೂ. ಅಬಕಾರಿ ತೆರಿಗೆ ಸಂಗ್ರಹದ ಗುರಿ ಹೊಂದಲಾಗಿದೆ. 21 ದಿನಗಳ ಲಾಕ್ಡೌನ್ನಿಂದ ರಾಜ್ಯ ಸರ್ಕಾರ ಅಂದಾಜು 1,323 ಕೋಟಿ ರೂ. ಅಬಕಾರಿ ತೆರಿಗೆ ನಷ್ಟ ಅನುಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಏಪ್ರಿಲ್ 30ರವರೆಗೆ ಲಾಕ್‌ಡೌನ್ ಮುಂದುವರಿಸಿದರೆ ಸರ್ಕಾರಕ್ಕೆ ಅಂದಾಜು ಸುಮಾರು 2205 ಕೋಟಿ ರೂ. ಅಬಕಾರಿ ತೆರಿಗೆ ನಷ್ಟ ಆಗಲಿದೆ ಎಂದು ಮೂಲಗಳು ತಿಳಿಸಿವೆ. 22,700 ಕೋಟಿ ರೂ.ನ ಒಟ್ಟು ಅಬಕಾರಿ ತೆರಿಗೆ ಸಂಗ್ರಹದ ಗುರಿ ಮುಟ್ಟಬೇಕಾದರೆ ಪ್ರತಿ ತಿಂಗಳು ಸರಾಸರಿ 1,891 ಕೋಟಿ ರೂ. ಅಬಕಾರಿ ತೆರಿಗೆ ಸಂಗ್ರಹ ಮಾಡಬೇಕಾಗಿದೆ.
ಎಂಎಸ್ಐಎಲ್ ಮದ್ಯದಂಗಡಿ ತೆರೆಯಲು ಚಿಂತನೆ: ಈಗಾಗಲೇ ಅಬಕಾರಿ ಇಲಾಖೆ ಅಧಿಕಾರಿಗಳು ಲಾಕ್‌ಡೌನ್ ಮುಂದುವರಿದರೆ ಮದ್ಯ ಮಾರಾಟಕ್ಕೆ ನಿರ್ಬಂಧಿತ ಅನುಮತಿ ನೀಡುವಂತೆ ಪ್ರಸ್ತಾಪವನ್ನು ಸಿಎಂಗೆ ಸಲ್ಲಿಸಿದ್ದಾರೆ. ಹೀಗಾಗಿಯೇ ಸರ್ಕಾರ ಎಂಎಸ್ಐಎಲ್ ಲಿಕ್ಕರ್ ಮಳಿಗೆಗಳನ್ನು ತೆರೆಯಲು ಚಿಂತನೆ ನಡೆಸಿದೆ. ರಾಜ್ಯಾದ್ಯಂತ ಸಮಾರು 400ಕ್ಕೂ ಅಧಿಕ ಎಂಎಸ್ಐಎಲ್ ಔಟ್ಲೆಟ್ಗಳಿವೆ. ಅವುಗಳ ಮೂಲಕ ಮದ್ಯ ಮಾರಾಟ ಮಾಡಿ ನಷ್ಟದ ಪ್ರಮಾಣವನ್ನು ಕಡಿಮೆ ಮಾಡುವ ಪ್ಲಾನ್ ರಾಜ್ಯ ಸರ್ಕಾರದ್ದು.