ಬೆಂಗಳೂರು: ಬೆಳಕಿನ ಹಬ್ಬ ದೀಪಾವಳಿ ಬಂದರೆ ಎಲ್ಲರಿಗೂ ಸಂಭ್ರಮ, ಸಡಗರ. ಮನೆ ಮಂದಿಯೆಲ್ಲಾ ಬಣ್ಣ ಬಣ್ಣದ ಹಣತೆ ತಂದು, ಭಿನ್ನ-ವಿಭಿನ್ನದ ಪಟಾಕಿ ಸಿಡಿಸಿ ಸಂತಸದಲ್ಲಿ ಮಿಂದೇಳುತ್ತವೆ. ಇದು ನಮಗೆ ಖುಷಿ ಕೊಟ್ಟರೆ, ಮೂಕ ಪ್ರಾಣಿಗಳು ಮಾತ್ರ ತೊಂದರೆ ಅನುಭವಿಸುತ್ತವೆ.
ಖುಷಿಯಾಗಿ ಓಡಾಡಿಕೊಂಡು, ಮಾಲೀಕರೊಂದಿಗೆ ಕೀಟಲೆ ಮಾಡ್ತಾ, ಹೇಳೋ ಮಾತುಗಳನ್ನ ಕೇಳುವ ಶ್ವಾನಗಳು ಪಟಾಕಿ ಶಬ್ದಕ್ಕೆ ಹೆದರಿ ಮನೆ ಬಿಟ್ಟು ಹೋಗಿರುವ ಉದಾಹರಣೆಗಳಿವೆ. ಪಟಾಕಿ ಸದ್ದಿಗೆ ಭಯಭೀತಗೊಳ್ಳುವ ಶ್ವಾನ ಮತ್ತಿತರ ಸಾಕುಪ್ರಾಣಿಗಳು ಅಸಹಜ ರೀತಿಯಲ್ಲಿ ವರ್ತಿಸುತ್ತವೆ. ಜತೆಗೆ ಜೋರಾದ ಶಬ್ದದಿಂದ ಶ್ವಾನಗಳು ಕಿವುಡಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಅವುಗಳ ಕಾಲು, ಕಣ್ಣುಗಳು ಹಾನಿಯೂ ಆಗುತ್ತದೆ. ಎಷ್ಟೋ ಪ್ರಾಣಿಗಳು ತಮ್ಮ ಜೀವವನ್ನೇ ಕಳೆದುಕೊಂಡಿವೆ.
ನಮ್ಮಷ್ಟೇ ಬದುಕುವ ಹಕ್ಕು ಪ್ರಾಣಿಗಳಿಗೂ ಇದೆ. ಪಟಾಕಿ ಶಬ್ದ ಮನುಷ್ಯನಿಗಿಂತ ಶ್ವಾನಗಳಿಗೆ ಹತ್ತು ಪಟ್ಟು ಜೋರಾಗಿ ಕೇಳಿಸುವುದರಿಂದ ಸಾಕಷ್ಟು ನರಳಾಟ ಅನುಭವಿಸುತ್ತವೆ. ಮುದ್ದು ಮುದ್ದಾಗಿರೋ ಸಾಕು ಪ್ರಾಣಿಗಳು ಮಂಕಾಗಿ ಬಿಡುತ್ತವೆ ಎಂದು ಹೇಳುತ್ತಾರೆ ಶ್ವಾನ ಪ್ರೇಮಿ ವಸುಂಧರಾ.
ರಾಸಾಯನಿಕದಿಂದ ಕೂಡಿರುವ ಸಿಡಿಮದ್ದು ಪ್ರಾಣಿಗಳಿಗೆ ಸಾಕಷ್ಟು ತೊಂದರೆ ಉಂಟಾಗುತ್ತೆ. ಇದರ ವಾಸನೆ ಸೇವಿಸುವ ಶ್ವಾನಗಳಿಗೆ ವಾಂತಿ-ಭೇದಿ ಆಗುತ್ತದೆ. ಹೀಗಾಗಿ ಎಲ್ಲರೂ ಪ್ರಾಣಿಗಳ ಮೇಲೇ ಕನಿಕರ ತೋರಬೇಕು. ಇದು ಕೇವಲ ಶ್ವಾನಗಳಿಗೆ ಮಾತ್ರವಲ್ಲ ಬೆಕ್ಕು, ಹಸು ಸೇರಿದಂತೆ ಎಲ್ಲಾ ಪ್ರಾಣಿ-ಪಕ್ಷಿಗಳಿಗೆ ಅನ್ವಯವಾಗುತ್ತದೆ. ಪಟಾಕಿ ಮುಕ್ತ ದೀಪಾವಳಿ ಆಚರಣೆಗೆ ಪ್ರತಿಯೊಬ್ಬರೂ ಒತ್ತು ನೀಡಬೇಕಿದೆ ಎಂದು ಹೇಳಿದರು.