ಬೆಂಗಳೂರು : ಸಾರಿಗೆ ನೌಕರರಿಗೆ ಒಂದು ತಿಂಗಳ ವೇತನವನ್ನೂ ತಡೆ ಹಿಡಿಯದೇ ಸಂಪೂರ್ಣ ನೀಡಿದ್ದೇವೆ. ಈ ತಿಂಗಳ ವೇತನವೂ ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಎಂದು ಸಾರಿಗೆ ಸಚಿವವರೂ ಆದ ಡಿಸಿಎಂ ಲಕ್ಷ್ಮಣ ಸವದಿ ಅವರು ವಿಧಾನಸಭೆಯಲ್ಲಿ ತಿಳಿಸಿದರು.
ಇಂದು ಪ್ರಶ್ನೋತ್ತರ ವೇಳೆ ಶಾಸಕ ಹರ್ಷವರ್ಧನ್ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಕೋವಿಡ್ ಸಂದರ್ಭದಲ್ಲಿ ಸಾರಿಗೆ ಸಂಸ್ಥೆ ದೊಡ್ಡ ಮಟ್ಟದ ನಷ್ಟಕ್ಕೆ ಸಿಲುಕಿತು. ಆದರೂ, ನೌಕರರಿಗೆ ತೊಂದರೆಯಾಗದಂತೆ ಸಂಪೂರ್ಣ ವೇತನ ಬಿಡುಗಡೆ ಮಾಡಿದ್ದೇವೆ. ಈ ತಿಂಗಳ ವೇತನ ಮಾತ್ರ ಬಾಕಿಯಿದ್ದು, ಮೂರ್ನಾಲ್ಕು ದಿನಗಳಲ್ಲಿ ಅದು ಕೂಡ ಬಿಡುಗಡೆಯಾಗಲಿದೆ ಎಂದು ಹೇಳಿದರು.
ಸಾರಿಗೆ ಇಲಾಖೆಯ 1,30,000 ನೌಕರರಿಗೆ 7 ತಿಂಗಳಿನಿಂದ ಹಣಕಾಸಿನ ಕೊರತೆಯಿಂದಾಗಿ ವೇತನ ನೀಡಲು ಸಾಧ್ಯವಾಗಿರಲಿಲ್ಲ. ಈ ಸಂಬಂಧ ಮುಖ್ಯಮಂತ್ರಿಗಳು ಹಾಗೂ ಹಣಕಾಸು ಇಲಾಖೆ ಜೊತೆ ಚರ್ಚಿಸಿ ನಂತರ ವೇತನ ಬಿಡುಗಡೆ ಮಾಡಲಾಯಿತು.
ಶೇ.75-25ರಷ್ಟು ನಾಲ್ಕು ತಿಂಗಳು, ಶೇ.50-50ರಷ್ಟು ಎರಡು ತಿಂಗಳು ವೇತನವನ್ನು ನೀಡಿದ್ದೇವೆ. ನಮ್ಮ ನಿಗಮಗಳು ನಷ್ಟದಲ್ಲಿದ್ದ ಕಾರಣ, ಸರ್ಕಾರದ ವತಿಯಿಂದ ವೇತನ ಕೊಡಲಾಗಿದೆ. ಯಾವುದೇ ನೌಕರರ ವೇತನ ತಡೆ ಹಿಡಿದಿಲ್ಲ ಎಂದು ಸ್ಪಷ್ಟಪಡಿಸಿದರು.
ಇದಕ್ಕೂ ಮುನ್ನ ಸದಸ್ಯ ಕೆ ಎಸ್ ಲಿಂಗೇಶ್ ಅವರ ಪ್ರಶ್ನೆಗೆ ಗ್ರಾಮೀಣ ಭಾಗಗಳಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗಳಿಗೆ ಅನಾನುಕೂಲವಾಗುವಂತೆ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು. ಕೋವಿಡ್ ಇರುವ ಕಾರಣ ಶಾಲಾ-ಕಾಲೇಜುಗಳನ್ನು ಆರಂಭಿಸಲಾಗಿಲ್ಲ. ಒಂದು ವೇಳೆ ಆರಂಭವಾದ ನಂತರವೂ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದರು.
ಅದೇ ರೀತಿ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನಲ್ಲಿ ನೂತನ ಪ್ರಾದೇಶಿಕ ಸಾರಿಗೆ ಕಚೇರಿ ಪ್ರಾರಂಭಿಸುವ ಬಗ್ಗೆ ಅಧಿಕಾರಿಗಳ ಜೊತೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು. ಪ್ರಶ್ನೋತ್ತರ ಅವಧಿಯಲ್ಲಿ ಶಾಸಕ ಶಿವಕುಮಾರ್ ಶೆಟ್ಟಿ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಉಡುಪಿ ಜಿಲ್ಲೆಯಲ್ಲಿ ಒಂದೇ ಪ್ರಾದೇಶಿಕ ಸಾರಿಗೆ ಕಚೇರಿ ಇದೆ.
ಇದರಿಂದ ದೂರದ ಬೈಂದರೂ ಮತ್ತು ಕುಂದಾಪುರ ತಾಲೂಕಿನ ಸಾರ್ವಜನಿಕರ ದೈನಂದಿನ ವ್ಯವಹಾರಗಳಿಗೆ ತೊಂದರೆಯಾಗುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಶೀಘ್ರದಲ್ಲೇ ಅಧಿಕಾರಿಗಳ ಸಭೆ ಕರೆಯುವುದಾಗಿ ಹೇಳಿದರು.
ಬೈಂದೂರು ಅಥವಾ ಕುಂದಾಪುರದಲ್ಲಿ ಆರ್ಟಿಒ ಕಚೇರಿ ಸ್ಥಾಪಿಸಲು ನಮಗೆ ಹಣಕಾಸಿನ ಸಮಸ್ಯೆಯಿದೆ. ಕೋವಿಡ್ ಬಂದ ನಂತರ ನಾವು ಹೊಸ ಯೋಜನೆಗಳನ್ನಾಗಲಿ, ಕಾರ್ಯಕ್ರಮಗಳನ್ನಾಗಲಿ ಆರಂಭಿಸದಂತೆ ಆರ್ಥಿಕ ಇಲಾಖೆ ಅಧಿಕಾರಿಗಳು ಸಲಹೆ ಮಾಡಿದ್ದಾರೆ ಎಂದರು.