ಬೆಂಗಳೂರು: ನಾಯಕತ್ವ ಗೊಂದಲ ಬೀದಿಯಲ್ಲಿ ಬಗೆಹರಿಸುವ ವಿಚಾರ ಅಲ್ಲ. ಏನೇ ನಿರ್ಣಯ ಇದ್ದರೂ ಪಕ್ಷದ ಪಾರ್ಲಿಮೆಂಟ್ ಬೋರ್ಡ್ ನಿರ್ಧಾರ ಮಾಡುತ್ತೆ. ಈಗಾಗಲೇ ಇದರ ಬಗ್ಗೆ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಸ್ಪಷ್ಟವಾಗಿ ಹೇಳಿದ್ದಾರೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು.
ಬಿಜೆಪಿ ಕಚೇರಿಯಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ನಿಮ್ಮ ಮನಸ್ಸಿನಲ್ಲಿ ಗೊಂದಲ ಇದೆ. ಬೇರೆಯವರ ಹೇಳಿಕೆಗೆ ಪ್ರತಿಕ್ರಿಯೆ ಕೊಡಲ್ಲ. ಕೋವಿಡ್ ಸಂದರ್ಭದಲ್ಲಿ ಸರ್ಕಾರ ಉತ್ತಮ ಕೆಲಸ ಮಾಡಿದೆ. ಇದರಿಂದ ಕೋವಿಡ್ ನಿಯಂತ್ರಣಕ್ಕೆ ಬಂದಿದೆ. ಆಯಾ ಜಿಲ್ಲೆಗೆ ಆಕ್ಸಿಜನ್ ಪೂರೈಕೆ, ಇತರ ಔಷಧಿ ಪೂರೈಕೆ, ಜನರ ಹಿತ ನೋಡಿಕೊಂಡು ಕೆಲಸ ಮಾಡುತ್ತಿದೆ ಎಂದರು.
ಕಾರ್ಯಕರ್ತರು ನೊಂದುಕೊಳ್ಳಬಾರದು ಎಂದು ಇದ್ದರೆ ಯಾವುದೇ ಗೊಂದಲದ ಹೇಳಿಕೆ ಕೊಡಬಾರದು. ವ್ಯಕ್ತಿಗತ ಹಿತ ಮುಖ್ಯವಲ್ಲ, ಜನರ ಹಿತವಷ್ಟೇ ಮುಖ್ಯ. ಗೊಂದಲಗಳು ವಿರೋಧಿಗಳಿಗೆ ಅವಕಾಶ ಕೊಡುತ್ತಿದೆ. ವಲಸಿಗರು ಬಂದಿದ್ದರಿಂದ ನಮಗೆ ಬಹುಮತ ಸಿಕ್ಕಿದೆ. ಎಲ್ಲರು ಸೇರಿನೇ ಬಿಜೆಪಿ, ಇದರ ಬಗ್ಗೆ ಈಶ್ವರಪ್ಪ ಸ್ಪಷ್ಟನೆ ನೀಡಿದ್ದಾರೆ. ಪಕ್ಷದ ಆಶಯ ದುರ್ಬಲ ಆಗಲು ಬಿಡಲ್ಲ. ತಪ್ಪು ಸರಿಪಡಿಸುವ ಕೆಲಸ ಆಗುತ್ತಿದೆ ಎಂದರು.