ಬೆಂಗಳೂರು: ಕೋವಿಡ್ 4ನೇ ಅಲೆಯ ಭೀತಿ ಹಿನ್ನೆಲೆಯಲ್ಲಿ ನಗರದ ಸಾರ್ವಜನಿಕ ಪ್ರದೇಶಗಳಲ್ಲಿ ಮಾಸ್ಕ್ ಧರಿಸುವುದನ್ನು ಸರ್ಕಾರ ಕಡ್ಡಾಯಗೊಳಿಸಿ ಆದೇಶ ಹೊರಡಿಸಿದೆ. ಮೇ 2ರಿಂದ ಮಾಸ್ಕ್ ಧರಿಸದವರಿಗೆ ತಲಾ 250 ರೂ ದಂಡ ವಿಧಿಸುವ ನಿಯಮ ಮರು ಜಾರಿ ಮಾಡಲಾಗುವುದು ಎಂದು ಪಾಲಿಕೆ ಆರೋಗ್ಯ ವಿಭಾಗದ ವಿಶೇಷ ಆಯುಕ್ತ ಡಾ. ತ್ರಿಲೋಕಚಂದ್ರ ತಿಳಿಸಿದ್ದಾರೆ.
ಸಾರ್ವಜನಿಕ ಸ್ಥಳದಲ್ಲಿ ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಎಂಬ ಆದೇಶವನ್ನು ಸರ್ಕಾರ ಹೊರಡಿಸಿದೆ. ಈ ಬಗ್ಗೆ ಮಾರ್ಷಲ್‌ಗಳು ಮಾರುಕಟ್ಟೆ, ಬಸ್ ನಿಲ್ದಾಣ, ರೈಲು ನಿಲ್ದಾಣ ಸೇರಿ ಎಲ್ಲ ಜನನಿಬಿಡ ಸ್ಥಳದಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ನಗರದ ಎಲ್ಲ ಶಾಪಿಂಗ್ ಮಾಲ್‌ಗಳು, ಸೂಪರ್ ಮಾರ್ಕೆಟ್ಗಳು, ಚಿತ್ರಮಂದಿರ, ಮಲ್ಟಿಪ್ಲೆಕ್ಸ್ ಮತ್ತು ಎಲ್ಲ ಮಾರುಕಟ್ಟೆಗಳಲ್ಲಿ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಲಾಗುತ್ತದೆ. ಈಗಾಗಲೇ ಮಾರ್ಷಲ್‌ಗಳು ಎಲ್ಲಡೆ ಭೇಟಿ ನೀಡಿ ಸರ್ಕಾರದ ಆದೇಶ ತೋರಿಸಿ ಸೂಚನೆ ನೀಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ನಿಯಮ ಪಾಲಿಸದ ಉದ್ಯಮ ಅಥವಾ ಮಳಿಗೆಗಳ ಮಾಲೀಕರಿಗೆ ದಂಡ ವಿಧಿಸಲಾಗುವುದು ಎಂದು ಹೇಳಿದ್ದಾರೆ.
4.5 ಲಕ್ಷ ಮಂದಿಗೆ ಬೂಸ್ಟರ್ ಡೋಸ್: ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಕಾರ್ಯಕರ್ತರು ಹಾಗೂ 60 ವರ್ಷ ಮೇಲ್ಪಟ್ಟ ವೃದ್ಧರು ಸೇರಿ 12 ಲಕ್ಷ ಜನರು ಬೂಸ್ಟರ್ ಡೋಸ್ ಪಡೆಯಲು ಅರ್ಹರಾಗಿದ್ದಾರೆ. ಈ ಪೈಕಿ 4.5 ಲಕ್ಷ ಮಂದಿ ಬೂಸ್ಟರ್ ಡೋಸ್ ಪಡೆದಿದ್ದು, ಉಳಿದವರು ಪಡೆಯಬೇಕಿದೆ ಎಂದು ಡಾ.ತ್ರಿಲೋಕಚಂದ್ರ ಮಾಹಿತಿ ನೀಡಿದ್ದಾರೆ.
(ಇದನ್ನೂ ಓದಿ: ಮಾಸ್ಕ್ ಧರಿಸದೆ ಓಡಾಟ: ದ.ಕ ಜಿಲ್ಲೆಯಲ್ಲಿ 1 ಕೋಟಿ ರೂ ದಂಡ ವಸೂಲಿ)