ಬೆಂಗಳೂರು : ಮಾರಕ ಕೊರೊನಾ ವೈರಸ್ ಹರಡುವ ಭೀತಿ ಹಿನ್ನೆಲೆಯಲ್ಲಿ ಕಠಿಣ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ಹೈಕೋರ್ಟ್ ಗೆ ಸಾರ್ವಜನಿಕ ಹಿತಾಸಕ್ತಿ ಆರ್ಜಿ ಸಲ್ಲಿಸಲಾಗಿದೆ.
ಸಾಮಾಜಿಕ ಕಾರ್ಯಕರ್ತರಾದ ಮೊಹಮ್ಮದ್ ಆರೀಫ್ ಜಮೀಲ್ ಮತ್ತು ಮಾರುತಿ ಎಂಬುವರು ಈ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿಯಲ್ಲಿ ಕೇಂದ್ರ ಹಾಗೂ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯಗಳನ್ನು ಪ್ರತಿವಾದಿ ಮಾಡಲಾಗಿದೆ. ಅರ್ಜಿದಾರರ ಪರ ವಕೀಲ ರೆಹಮತ್-ಉಲ್ಲಾ-ಕೊತ್ವಾಲ್ ಅವರು, ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ಅವರಿದ್ದ ವಿಭಾಗೀಯ ಪೀಠದ ಮುಂದೆ ಸೋಮವಾರ ಹಾಜರಾಗಿ ಅರ್ಜಿಯನ್ನು ತುರ್ತು ವಿಚಾರಣೆಗೆ ಪರಿಗಣಿಸಬೇಕು ಎಂದು ಕೋರಿದರು.
ಅದಕ್ಕೆ ಪ್ರತಿಕ್ರಿಯಿಸಿದ ಮುಖ್ಯ ನ್ಯಾಯಮೂರ್ತಿಗಳು, ಕೊರೊನಾ ವೈರಸ್ ಸೋಂಕು ಹರಡುವುದನ್ನು ನಿಯಂತ್ರಿಸಲು ರಾಜ್ಯ ಸರ್ಕಾರ ಈಗಾಗಲೇ ಹಲವು ಕ್ರಮ ಕೈಗೊಂಡಿದೆ. ಹೀಗಾಗಿ, ಒಂದೆರಡು ದಿನ ಕಾದು ನೋಡೋಣ. ಆ ನಂತರ ಅರ್ಜಿಯನ್ನು ವಿಚಾರಣೆಗೆ ಪರಿಗಣಿಸಲಾಗುವುದು ಎಂದು ತಿಳಿಸಿದರು.
ಸಾಂಕ್ರಾಮಿಕ ಕಾಯಿಲೆಗಳ ಕಾಯ್ದೆ-1897ರಕ್ಕೆ ತಿದ್ದುಪಡಿ ತರಬೇಕು. ಸಾಂಕ್ರಾಮಿಕ ರೋಗ ಹರಡುವುದನ್ನು ತಡೆಯಲು ವಿವಿಧ ಸಂಘಟನೆಗಳು ಹಾಗೂ ತಜ್ಞರಿಂದ ಸಲಹೆ-ಸೂಚನೆಗಳನ್ನು ಆಹ್ವಾನಿಸಲು ಅವಕಾಶ ಕಲ್ಪಿಸಬೇಕು. ಕೂಡಲೇ ‘ಸಾಂಕ್ರಾಮಿಕ ರೋಗ ನಿಯಂತ್ರಣ ಮಂಡಳಿ’ ರಚನೆ ಮಾಡಬೇಕು ಎಂಬುದು ಸೇರಿದಂತೆ ವಿವಿಧ ಮುಂಜಾಗ್ರಾತಾ ಕ್ರಮಗಳನ್ನು ಕೈಗೊಳ್ಳಲು ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಅರ್ಜಿಯಲ್ಲಿ ಕೋರಲಾಗಿದೆ.