ಬೆಂಗಳೂರು: ಜಾತ್ರೆಗಳಲ್ಲಿ ಮುಸ್ಲಿಂ ಸಮುದಾಯದವರು ವ್ಯಾಪಾರ ನಡೆಸುವುದಕ್ಕೆ ಹಿಂದೂ ಸಂಘಟನೆಗಳ ವಿರೋಧ ವಿಚಾರವನ್ನು ಕಾಂಗ್ರೆಸ್ನ ಮುಸ್ಲಿಂ ಜನಪ್ರತಿನಿಧಿಗಳು ತೀವ್ರವಾಗಿ ಖಂಡಿಸಿದ್ದಾರೆ. ಮುಸ್ಲಿಂ ವ್ಯಾಪಾರಿಗಳಿಗೆ ನಿರ್ಬಂಧದಿಂದ ಬಿಜೆಪಿ ಒಳಗೊಳಗೆ ಖುಷಿ ಪಡುತ್ತಿದೆಯಾ?. ಜನರ ಗಮನ ಬೇರೆಡೆ ಸೆಳೆಯಲು ಸರ್ಕಾರ ಕುಮ್ಮಕ್ಕು ನೀಡುತ್ತಿದೆಯೇ ಎಂದು ಆರೋಪಿಸಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಕಾಂಗ್ರೆಸ್ ಶಾಸಕರಾದ ಯು.ಟಿ.ಖಾದರ್, ರಿಜ್ವಾನ್ ಅರ್ಷದ್ ಹಾಗೂ ಸಲೀಂ ಅಹ್ಮದ್, ಜಾತ್ಯತೀತ ರಾಷ್ಟ್ರದಲ್ಲಿ ಇಂಥದೊಂದು ನಡೆ ಸಮಂಜಸವಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ವಿಧಾನಸಭೆಯ ಕಾಂಗ್ರೆಸ್ ಉಪನಾಯಕರಾದ ಯು.ಟಿ ಖಾದರ್ ಮಾತನಾಡಿ, ಭಾರತ ದೇಶ ವಿವಿಧತೆಯಲ್ಲಿ ಏಕತೆ ಹೊಂದಿರುವ ದೇಶ. ಇಲ್ಲಿ ಎಲ್ಲ ಧರ್ಮೀಯರು ಸಹಬಾಳ್ವೆಯಿಂದ ಬದುಕುತ್ತಿದ್ದಾರೆ ಎಂದರು.
ಹಿಂದೂ ಸಹೋದರರ ಬೆಂಬಲ ಬೇಡ: ಕೆಲವರು ಧರ್ಮಗಳ ನಡುವೆ ಕಂದಕವನ್ನು ಸೃಷ್ಟಿಸುತ್ತಿದ್ದಾರೆ. ಕರಾವಳಿ ಭಾಗದಲ್ಲಿ ಕೆಲ ಹಿತಾಸಕ್ತಿಗಳು ಭಿತ್ತಿ ಪತ್ರಗಳನ್ನ ಹಾಕುತ್ತಿದ್ದಾರೆ. ಸಮಾಜದಲ್ಲಿ ಅಶಾಂತಿ, ದ್ವೇಷ ಸೃಷ್ಟಿಸಲು ಹೊರಟಿದ್ದಾರೆ. ಮುಲ್ಕಿ ಸೇರಿದಂತೆ ಕೆಲವೆಡೆ ಭಿತ್ತಿ ಪತ್ರಗಳನ್ನ ಹಾಕಲಾಗಿದೆ. ಇದೊಂದು ಅಸಹ್ಯ ಕೃತ್ಯ. ಇದಕ್ಕೆ ಹಿಂದೂ ಸಹೋದರರು ಬೆಂಬಲ ಕೊಡಬಾರದು ಎಂದು ಖಾದರ್ ಮನವಿ ಮಾಡಿದರು.
ಸಮಾಜದಲ್ಲಿ ದ್ವೇಷ ಬಿತ್ತುವ ಕೆಲಸ ನಡೆಯುತ್ತಿದ್ದರೂ ಬಿಜೆಪಿ ಸರ್ಕಾರ ಮೌನವಾಗಿದೆ. ಈ ತೀರ್ಮಾನದಿಂದಾಗಿ ಬಿಜೆಪಿ ಒಳಗೊಳಗೆ ಖುಷಿ ಪಡುತ್ತಿದೆಯಾ?. ಜನರ ಗಮನ ಬೇರೆಡೆ ಸೆಳೆಯಲು ಸರ್ಕಾರ ಈ ರೀತಿಯ ಕುಮ್ಮಕ್ಕು ನೀಡುತ್ತಿದೆಯೇ ಎಂದೂ ಆರೋಪಿಸಿದರು. ಕೆಪಿಸಿಸಿ ಕಾರ್ಯಾಧ್ಯಕ್ಷರಾದ ವಿಧಾನ ಪರಿಷತ್ ಸದಸ್ಯ ಸಲೀಂ ಅಹ್ಮದ್ ಮಾತನಾಡಿ, ಕೋಮು ಸಾಮರಸ್ಯಕ್ಕೆ ಕರ್ನಾಟಕ ಹೆಸರುವಾಸಿ. ಎಲ್ಲಿ ಬೇಕಾದರೂ ಹೋಗಿ ವ್ಯಾಪಾರ ಮಾಡಬಹುದು ಎಂದು ಸಂವಿಧಾನ ಹೇಳಿದೆ.
ಆದರೆ, ಕೆಲ ಸಂಘಟನೆಗಳು ಬ್ಯಾನರ್ ಹಾಕಿದ್ದು ದುರ್ದೈವ. ಯಾರು ಬ್ಯಾನರ್ ಹಾಕಿದ್ದಾರೆ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು. ಮುಖ್ಯಮಂತ್ರಿ ಕೂಡಲೇ ಮಧ್ಯ ಪ್ರವೇಶ ಮಾಡಬೇಕು. ಯಾಕೆ ಬಿಜೆಪಿ ಸರ್ಕಾರ ಬಂದಾಗಲೇ ಈ ರೀತಿ ಆಗುತ್ತದೆ. ಯಾರು ಇದಕ್ಕೆ ಕುಮ್ಮಕ್ಕು ಕೊಡುತ್ತಾರೆ. ಹಿಜಾಬ್ ವಿಚಾರಕ್ಕೆ ಕೋರ್ಟ್ ಕೊಟ್ಟು ತೀರ್ಪು ಪಾಲನೆ ಮಾಡಬೇಕು. ಆದರೆ, ಯಾರು ಷಡ್ಯಂತ್ರ ಮಾಡುತ್ತಾರೆ ಅಂತಹವರ ವಿರುದ್ಧ ಗೃಹ ಸಚಿವರು ಕ್ರಮ ತೆಗೆದುಕೊಳ್ಳಲಿ ಎಂದರು.
ಸದನದಲ್ಲಿ ಪ್ರಸ್ತಾಪಕ್ಕೆ ನಿರ್ಧಾರ: ಹಿಂದೂ ಜಾತ್ರೆಗಳಲ್ಲಿ ಮುಸ್ಲಿಂ ವರ್ತಕರಿಗೆ ವ್ಯಾಪಾರಕ್ಕೆ ನಿರಾಕರಣೆ ವಿಚಾರವನ್ನು ವಿಧಾನಸಭೆಯಲ್ಲಿ ಪ್ರಸ್ತಾಪಿಸಲು ಕೂಡ ಕಾಂಗ್ರೆಸ್ ಶಾಸಕರು ನಿರ್ಧಾರ ಮಾಡಿದ್ದಾರೆ. ಶೂನ್ಯವೇಳೆಯಲ್ಲಿ ಪ್ರಸ್ತಾಪಿಸಲು ಸ್ಪೀಕರ್ ಕಚೇರಿಗೆ ನೋಟಿಸ್ ಸಹ ಕೊಡಲು ತೀರ್ಮಾನಿಸಲಾಗಿದೆ. ಈ ವಿಚಾರವನ್ನು ಖುದ್ದು ಶಾಸಕ ರಿಜ್ವಾನ್ ಅರ್ಷದ್ ಮಾಧ್ಯಮಗಳಿಗೆ ತಿಳಿಸಿದರು. ಜಾತ್ರೆಗಳಲ್ಲಿ ಮುಸ್ಲಿಂ ಸಮುದಾಯದವರು ಅಂಗಡಿಗಳನ್ನು ಹಾಕಲು ನಿರ್ಬಂಧ ಹಾಕಿದ್ದಾರೆ. ಆ ರೀತಿ ಪೊಸ್ಟರ್ ಹಾಕಿದವರಿಗೆ ನಾನು ಇಷ್ಟೇ ಹೇಳಲು ಬಯಸುತ್ತೇನೆ. ಇತಿಹಾಸವನ್ನು ಓದಬೇಕು. ನಮ್ಮ ದೇಶದಲ್ಲಿ ಪಾರಂಪರಿಕವಾಗಿ ಸಮಾರಸ್ಯ ಬಂದಿದೆ. ಇದನ್ನ ಹಾಳು ಮಾಡೋದಕ್ಕೆ ನಿಮ್ಮಿಂದ ಸಾಧ್ಯವಿಲ್ಲ ಮಾಡೋದಕ್ಕೆ ಹೋಗಕೂಡದು ಎಂದು ರಿಜ್ವಾನ್ ಅರ್ಷದ್ ಹೇಳಿದರು.
ದೇವಸ್ಥಾನ ಸ್ಥಾಪನೆ ಮಾಡಿದ್ದು ಮುಸ್ಲಿಂ ಸೈನಿಕ: ಉಡುಪಿಯ ಮಾರಿ ಜಾತ್ರೆಯಲ್ಲಿ ಮುಸ್ಲಿಂ ಸಮುದಾಯದವರು ಅಂಗಡಿ ಹಾಕಬಾರದು ಅಂತ ಸಂಘ ಪರಿವಾರದವರು ಬಜರಂಗದಳದವರು ಹೇಳಿದ್ದಾರೆ. ಅವರಿಗೆ ಇತಿಹಾಸ ಗೊತ್ತಿರಬೇಕು ಎಂದರು. ಆ ದೇವಸ್ಥಾನ ಸ್ಥಾಪನೆ ಮಾಡಿದ್ದು ಒಬ್ಬ ಮುಸ್ಲಿಂ ಸೈನಿಕ ಎಂದು ಅರ್ಷದ್ ತಿಳಿಸಿದರು. ಕೆಳದಿಯ ಬಸವಪ್ಪ ನಾಯಕನ ಆಳ್ವಿಯಕೆಯಲ್ಲಿ ಮುಸ್ಲಿಂ ಸೈನಿಕ ಈ ದೇವಸ್ಥಾನ ನಿರ್ಮಾಣ ಮಾಡಿದ್ದಾರೆ.
ಆ ಮುಸ್ಲಿಂ ಸೈನಿಕನಿಗೆ ಕನಸಿನಲ್ಲಿ ಮಾರಿ ದೇವಿ ಬಂದು ದೇವಸ್ಥಾನ ನಿರ್ಮಾಣ ಮಾಡು ಅಂತ ಹೇಳುತ್ತಾಳೆ. ಆ ದೇವಿ ಒಬ್ಬ ಮುಸ್ಲಿಂ ಸೈನಿಕನಿಗೆ ದೇವಸ್ಥಾನ ನಿರ್ಮಾಣ ಮಾಡಲು ಹೇಳುತ್ತಾಳೆ. ನಾನು ಒಬ್ಬ ಮುಸ್ಲಿಂ, ಹೇಗೆ ದೇವಸ್ಥಾನ ನಿರ್ಮಾಣ ಮಾಡಲಿ ಅಂದಾಗ ನಾಲ್ಕೈದು ಜಾತಿಯರನ್ನು ಸೇರಿಕೊಂಡು ಗುಡಿ ನಿರ್ಮಾಣ ಮಾಡು ಎಂದು ದೇವಿ ಆತನಿಗೆ ಹೇಳಿರುತ್ತಾರೆ ಎಂದರು.
ಆಗ 1740 ಇಸವಿಯಲ್ಲಿ ಮುಸ್ಲಿಂ ಸೈನಿಕ ನಿರ್ಮಾಣ ಮಾಡಿದ ದೇವಸ್ಥಾನಕ್ಕೆ ಈಗ ಅಲ್ಲಿಗೆ ಮುಸ್ಲಿಮರು ಬರಬಾರದು ಅಂತ ಹೇಳುತ್ತಿದ್ದೀರಾ? ದುರ್ಗಾಪರಮೇಶ್ವರಿ ದೇವಸ್ಥಾನವನ್ನು ಸಹ ಮುಸ್ಲಿಂ ವ್ಯಾಪಾರಿ ಕಟ್ಟಿದ್ದು, ಅಲ್ಲೂ ನಿರ್ಬಂಧ ಮಾಡುತ್ತೀರಾ?. ರಾಜಕೀಯ ಲಾಭಕ್ಕೋಸ್ಕರ ಹಿಂದೂ ಮುಸ್ಲಿಮರನ್ನು ಒಡೆದಾಡಿಸಿ ಅವರನ್ನು ಬೇರೆ-ಬೇರೆ ಮಾಡಿ ರಾಜಕೀಯ ಲಾಭಕ್ಕಾಗಿ ಮಾಡುತ್ತಿರುವುದು ಪಾಪ ಎಂದು ರಿಜ್ವಾನ್ ಅರ್ಷದ್ ಅಸಮಾಧಾನ ವ್ಯಕ್ತಪಡಿಸಿದರು.
ರಾಜಕೀಯ ಲಾಭಕ್ಕಾಗಿ ಬೇರೆ-ಬೇರೆ ಮಾಡುವುದನ್ನು ಯಾರು ಸಹ ಕ್ಷಮಿಸುವುದಿಲ್ಲ. ಯಾವ ದೇವರು ನಂಬಿದ್ದೇವೆ ಆ ದೇವರು ಸಹ ಕ್ಷಮಿಸುವುದಿಲ್ಲ. ಸಮಾಜ ಒಡೆಯುವ ಕೆಲಸ ಯಾರು ಮಾಡಬೇಡಿ ಎಂದು ಕೈ ಮುಗಿದ ರಿಜ್ವಾನ್ ಅರ್ಷದ್, ಸರ್ಕಾರ ಯಾವುದೇ ನಿರ್ದಿಷ್ಟ ಕ್ರಮ ಕೈಗೊಂಡಿಲ್ಲ. ರಾಜಕೀಯ ಲಾಭ ಆಗುತ್ತೆ ಅಂತ ಸುಮ್ಮನೆ ಬಿಟ್ಟಿದ್ದಾರೆ. ನಾನು ಅವರಿಗೆ ಇಷ್ಟೇ ಹೇಳುತ್ತೀನಿ ನಿಮಗೆ ರಾಜಕೀಯ ಲಾಭ ಆಗಬಹುದು, ಆದರೆ ಸಮಾಜಕ್ಕೆ ನಷ್ಟವಾಗಲಿದೆ ಎಂದರು.
ಇದನ್ನೂ ಓದಿ: 'ಕಾಶ್ಮೀರ್ ಫೈಲ್ಸ್' ಬಿಜೆಪಿ ಅಜೆಂಡಾ ಮೇಲೆ ಮಾಡಿದ ಸಿನಿಮಾ: ಪುನೀತ್ ಕೊನೆಯ ಚಿತ್ರಕ್ಕೆ ತೊಂದರೆ ಸರಿಯಲ್ಲ ಎಂದ ಡಿಕೆಶಿ