ಬೆಂಗಳೂರು: 'ದುಡ್ಡೇ ದೊಡ್ಡಪ್ಪ' ಎಂಬುದು 'ದುಡಿಮೆಯೇ ದೊಡ್ಡಪ್ಪ' ಎಂದಾಗಬೇಕು ಎಂಬ ದಿಸೆಯಲ್ಲಿ ಜನರಿಗಾಗಿ ಉತ್ತಮ ಬಜೆಟ್ ಮಂಡಿಸಿರುವ ವಿಶ್ವಾಸ ನನಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಪೋಯಿಸ್ ಸಂಸ್ಥೆ ಖಾಸಗಿ ಹೋಟೆಲ್‌ನಲ್ಲಿ ಏರ್ಪಡಿಸಿದ್ದ ಎಲೆಕ್ಟ್ರಿಕಲ್ ಸ್ಕೂಟರ್ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ, ಬಜೆಟ್‌ನಲ್ಲಿ ಎಲ್ಲ ವರ್ಗದ ಅಭ್ಯುದಯಕ್ಕಾಗಿ ವಿವಿಧ ಯೋಜನೆಗಳನ್ನು ಘೋಷಿಸಲಾಗಿದೆ. ಇವುಗಳನ್ನು ಕಾರ್ಯರೂಪಕ್ಕೆ ತರಲಾಗುವುದು ಎಂದರು. ವಿಶ್ವದಲ್ಲೇ ಕರ್ನಾಟಕವನ್ನು ಮಾದರಿ ರಾಜ್ಯವನ್ನಾಗಿ ಅಭಿವೃದ್ಧಿ ಮಾಡುವ ಕನಸಿದೆ. ಇದಕ್ಕೆ ಬೇಕಾದ ಸೌಲಭ್ಯಗಳನ್ನು ಕಲ್ಪಿಸಲಾಗುವುದು ಎಂದು ಹೇಳಿದರು.
ದೇಶದ ಆರ್ಥಿಕ ಬೆಳವಣಿಗೆಗೆ ಕೊಡುಗೆ ನೀಡುತ್ತಿರುವುದು ರೈತರು ಮತ್ತು ಕಾರ್ಮಿಕರು. ರಸ್ತೆ ಅಭಿವೃದ್ಧಿಗೆ ನಮ್ಮ ಸರ್ಕಾರ ಅನುದಾನ ಕೊಡಬಹುದು. ಆದರೆ, ರಸ್ತೆ ಡಾಂಬರೀಕರಣ ಆಗುವುದಕ್ಕೆ ಕಾರ್ಮಿಕರು ಬೇಕು. ಕಾರ್ಮಿಕರು ಇಲ್ಲದಿದ್ದರೆ ರಸ್ತೆ ಅಭಿವೃದ್ಧಿಯಾಗಲ್ಲ ಹಾಗೂ ವಾಹನಗಳು ಓಡಾಡುವುದಿಲ್ಲ. ದುಡಿಯುತ್ತಿರುವ ಕಾರ್ಮಿಕರು ನಮ್ಮ ಸರ್ಕಾರಕ್ಕೆ ಮುಖ್ಯವಾಗಿದೆ. ದೇವರು ಕಾರ್ಮಿಕರ ಶ್ರಮದಲ್ಲಿ ಮತ್ತು ರೈತರ ಬೆವರಿನಲ್ಲಿದ್ದಾನೆ. ಜನರಿಗೆ ಪ್ರೋತ್ಸಾಹ ನೀಡಿದರೆ ಅವರೇ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಾರೆ ಎಂದು ಹೇಳಿದರು.
ಇದನ್ನೂ ಓದಿ: ಸಂಸದರ ಕ್ರೆಡಿಟ್ ವಾರ್: ಪ್ರತಾಪ್ ಸಿಂಹರಿಗೆ ಸ್ವಪಕ್ಷೀಯ ಶಾಸಕರಿಂದಲೇ ಟಾಂಗ್
ವಿಜ್ಞಾನ ಮತ್ತು ತಂತ್ರಜ್ಞಾನದ ಇನ್ನಷ್ಟು ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ. ನಿರುದ್ಯೋಗಿಗಳಿಗೆ ಹೆಚ್ಚು ಉದ್ಯೋಗ ಸಿಗವಂತಾಗಬೇಕು. ಈ ನಿಟ್ಟಿನಲ್ಲಿ ಹಲವು ಕ್ರಮ ಕೈಗೊಳ್ಳಲಾಗುವುದು. ಇಂಧನ ದರ ತಗ್ಗಿಸಲು, ಮಾಲಿನ್ಯ ರಹಿತ ಹಾಗೂ ಸುಲಭವಾಗಿ ವಾಹನ ಓಡಿಸಲು ವಿದ್ಯುತ್‌ಚಾಲಿತ ಸ್ಕೂಟರ್ಗಳ ಅಗತ್ಯವಿದೆ ಎಂದರು. ರಾಜ್ಯದಲ್ಲಿ ಪ್ರತಿಷ್ಠಿತ ಕೈಗಾರಿಕೆಗಳು ಹಾಗೂ ತಂತ್ರಜ್ಞಾನಗಳಿವೆ. ಅವುಗಳಿಗೆ ಉತ್ತೇಜನ ನೀಡಲಾಗುವುದು ಎಂದರು.