ಬೆಂಗಳೂರು: ಪ್ರಕೃತಿ ವಿಕೋಪ ಪರಿಹಾರದಲ್ಲಿ ಯಾವುದೇ ತಾರತಮ್ಯ ಮಾಡುತ್ತಿಲ್ಲ. ಅಗತ್ಯಕ್ಕೆ ಅನುಗುಣವಾಗಿ ಕಾಲ ಕಾಲಕ್ಕೆ ಅನುದಾನ ಬಿಡುಗಡೆ ಮಾಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.
ಮಾಜಿ ಸಚಿವ ಎಂ.ಬಿ.ಪಾಟೀಲ್ ಪರಿಹಾರದಲ್ಲಿ ವಿಜಯಪುರ ಜಿಲ್ಲೆಗೆ ತಾರತಮ್ಯ ಮಾಡಲಾಗುತ್ತಿದೆ ಎಂದು ಆರೋಪಿಸಿ ಟ್ವೀಟ್ ಮಾಡಿದ್ದರು. ಇದಕ್ಕೆ ಸ್ಪಷ್ಟನೆ ನೀಡಿರುವ ಸಿಎಂ, ಪ್ರಕೃತಿ ವಿಕೋಪ ಪರಿಹಾರ ಕಾರ್ಯಗಳಿಗೆ ಜಿಲ್ಲಾಧಿಕಾರಿಗಳ ಪಿಡಿ ಖಾತೆಯಲ್ಲಿ ಲಭ್ಯವಿರುವ ಅನುದಾನವನ್ನು ಆಧರಿಸಿ ಹಣ ಬಿಡುಗಡೆ ಮಾಡಲಾಗುತ್ತದೆ. ಇತರ 21 ಜಿಲ್ಲೆಗಳಲ್ಲಿ ವಿಜಯಪುರ ಜಿಲ್ಲೆಗಿಂತ ಕಡಿಮೆ ಮೊತ್ತ ಲಭ್ಯವಿದೆ ಎಂಬುದು ಗಮನಿಸಬೇಕಾದ ಅಂಶ. ಆ.2ರ ಮಾಹಿತಿಯಂತೆ ವಿಜಯಪುರ ಜಿಲ್ಲಾಧಿಕಾರಿಗಳ ಪಿಡಿ ಖಾತೆಯಲ್ಲಿ 28.5 ಕೋಟಿ ರೂ. ಅನುದಾನ ಲಭ್ಯವಿದೆ ಎಂದು ತಿಳಿಸಿದರು.
ಇನ್ನು ಆ .2 ರ ಮಾಹಿತಿಯಂತೆ ಬೀದರ್ ಜಿಲ್ಲಾಧಿಕಾರಿಗಳ ಪಿಡಿ ಖಾತೆಯಲ್ಲಿ 20.45 ಕೋಟಿ ರೂ., ಕಲಬುರಗಿ ಜಿಲ್ಲಾಧಿಕಾರಿಗಳ ಬಳಿ 42.07 ಕೋಟಿ ರೂ., ಹಾಗೂ ಯಾದಗಿರಿ ಜಿಲ್ಲಾಧಿಕಾರಿಗಳ ಬಳಿ 25.14 ಕೋಟಿ ರೂ. ಅನುದಾನ ಲಭ್ಯವಿದೆ ಎಂದು ಸಿಎಂ ಸ್ಪಷ್ಟಪಡಿಸಿದರು.
ಇದನ್ನೂ ಓದಿ: 2021ರ ನೆರೆ ಸಂತ್ರಸ್ತರಿಗೆ 300 ಕೋಟಿ ರೂ. ಮನೆ ಹಾನಿ ಪರಿಹಾರ ಬಿಡುಗಡೆ