ಬೆಂಗಳೂರು : ವೃದ್ಧಾಶ್ರಮಗಳಿಗೆ ರಾಜ್ಯದಿಂದ ವಾರ್ಷಿಕ 8 ಲಕ್ಷ ರೂ. ಅನುದಾನ ಕೊಡಲಾಗುತ್ತಿದೆ. ಅನುದಾನ ಮೊತ್ತದಲ್ಲಿ 7 ಲಕ್ಷ ರೂ. ಏರಿಕೆ ಮಾಡಿ ಒಟ್ಟು 15 ಲಕ್ಷ ರೂ. ಅನುದಾನ ಕೊಡುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದರು.
ವಿಶ್ವ ಹಿರಿಯರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ, ಕೇಂದ್ರದಿಂದ ಸದ್ಯ 25 ಲಕ್ಷ ಅನುದಾನ ಬರುತ್ತಿದೆ. ರಾಜ್ಯದ ಅನುದಾನವೂ ಸೇರಿ ಒಟ್ಟು 40 ಲಕ್ಷ ರೂ. ಅನುದಾನ ಕೊಡುವ ಕೆಲಸ ಮಾಡುತ್ತೇವೆ ಎಂದರು.
ಅಂತಾರಾಷ್ಟ್ರೀಯ ಹಿರಿಯ ನಾಗರಿಕ ದಿನಾಚರಣೆಯನ್ನು ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ 'ಎಲ್ಲಾ ವಯೋಮಾನದವರಿಗೆ ಡಿಜಿಟಲ್ ಸಮಾನತೆ' ಎಂಬ ಘೋಷಣೆಯೊಂದಿಗೆ ಆಚರಿಸಲಾಯಿತು.
ಜತೆಗೆ ಹಿರಿಯ ನಾಗರಿಕರ ಸಹಾಯವಾಣಿ ಲೋಕಾರ್ಪಣೆಗೊಳಿಸಲಾಯಿತು. ಹಿರಿಯರ ರಾಷ್ಟ್ರೀಯ ಸಹಾಯವಾಣಿ-14567 ಅನ್ನು ಕೇಂದ್ರ ಸರ್ಕಾರ ಜಾರಿಗೆ ತಂದ ಒಂದು ಗಂಟೆಯಲ್ಲಿ ರಾಜ್ಯದಲ್ಲಿಯೂ ಚಾಲನೆ ನೀಡಲಾಯಿತು.
ಬಳಿಕ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಹಿರಿತನ ಒಂದು ಸ್ಥಿತಿ. ವಯಸ್ಸಿನಿಂದ ಹಿರಿತನ, ಅನುಭವದಿಂದ ಹಿರಿತನ, ನಡವಳಿಕೆಯಿಂದ ಹಿರಿತನ ಎಲ್ಲವೂ ನಾವು ಬದುಕು ನಡೆಸುವ ರೀತಿಯಲ್ಲಿ ತೀರ್ಮಾನವಾಗುತ್ತದೆ.
ಮಾನಸಿಕವಾಗಿ ಗಟ್ಟಿಯಾಗಿರಲು ಆರೋಗ್ಯ ತುಂಬಾ ಮುಖ್ಯ. ಕುಟುಂಬ, ಸಮಾಜದ ಸಹಾಯ, ಸಂಬಂಧವೂ ಮುಖ್ಯವಾಗುತ್ತದೆ. ಸರ್ಕಾರ, ಸಮಾಜ, ಕುಟುಂಬ ಹಿರಿಯ ಜೀವಿಗಳಿಗೆ ಆಸರೆ ಕೊಡಬೇಕು ಎಂದರು.
'ನಾನು ಮಾಜಿ ಯುವಕ, ನೀನು ಭಾವಿ ಮುದುಕ': ಉದಾಸಿಯವರು 84ನೇ ವಯಸ್ಸಲ್ಲಿ ನಮ್ಮನ್ನು ಬಿಟ್ಟು ಹೋದರು. ಅವರ ಹುಟ್ಟುಹಬ್ಬ ಆಚರಿಸುವಾಗ ಅವರ ವಯಸ್ಸು ಎಷ್ಟು ಎಂದು ಕೇಳಿದಾಗ, 'ಏ ತಮ್ಮ ಹಾಗೆಲ್ಲ ಕೇಳಬಾರದು. ನಾನು ಮಾಜಿ ಯುವಕ, ನೀನು ಭಾವಿ ಮುದುಕ' ಎನ್ನುತ್ತಿದ್ದರು. ಇದು ಮನಸ್ಸು ಎಂದರು.
ಒಳ್ಳೆ ಬಟ್ಟೆ, ಜಾಕೆಟ್ ಹಾಕಿದಾಗ ಕೇಳಿದರೆ, ಹಳೇ ಶೂಗಳಿಗೆ ಪಾಲಿಶ್ ಜಾಸ್ತಿ ಬೇಕು. ವಯಸ್ಸಾದ ಮೇಲೆ ಮೇಕಪ್ ಜಾಸ್ತಿ ಬೇಕಾಗುತ್ತದೆ ಎನ್ನುತ್ತಿದ್ದರು. ಹೀಗಾಗಿ, ಹಾಸ್ಯ ಮುಖ್ಯ. ಆತ್ಮ ಚೈತನ್ಯವನ್ನು ಸದಾ ಕಾಲ ಜೀವಂತವಾಗಿಡಬೇಕು. ಜೀವಂತಿಕೆಯಿಂದ ಬದುಕುವುದು ಬಹಳ ಮುಖ್ಯ. ರಾಜ್ಯದಲ್ಲಿ 54 ಲಕ್ಷ ಹಿರಿಯರಿದ್ದಾರೆ. ಎಲ್ಲರೂ ಸಂತೋಷವಾಗಿ, ಆರೋಗ್ಯವಾಗಿರಬೇಕು ಎಂದರು.
ಹಿರಿಯರನ್ನು ನೋಡಿದಾಗ ಅನುಭವದ ಭಂಡಾರದಂತೆ ಕಾಣುತ್ತಾರೆ. ಈ ಸಂಪತ್ತಿನ ಬಳಕೆ ಮಾಡುವ ಬಗ್ಗೆ ಯೋಚನೆ ಮಾಡುತ್ತಿದ್ದೇನೆ. ವೃದ್ಧಾಪ್ಯ ವೇತನ ಅವರು ಕೊಟ್ಟಿರುವ ಕೊಡುಗೆಯನ್ನೇ ವಾಪಸು ಕೊಡುತ್ತಿರುವುದು. ಜೀವಂತಿಕೆ ಕೊಡುವ ಹಲವಾರು ಕಾರ್ಯಕ್ರಮ ರೂಪಿಸುತ್ತೇವೆ ಎಂದರು.
7 ಸಾಧಕರಿಗೆ ಸನ್ಮಾನ : ವಿಶ್ವ ಹಿರಿಯ ನಾಗರಿಕರ ದಿನಚಾರಣೆ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿದ 7 ಸಾಧಕರಿಗೆ 1 ಲಕ್ಷ ನಗದು ಹಾಗೂ ನೆನಪಿನ ಕಾಣಿಕೆ ನೀಡಿ ಸನ್ಮಾನ ಮಾಡಲಾಯಿತು. ಜತೆಗೆ 75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವ ನೆನಪಿಗಾಗಿ 4 ವಿಶೇಷ ಸಾಧಕರಿಗೂ ಸನ್ಮಾನ ಮಾಡಲಾಯಿತು. ಇದರಲ್ಲಿ 103 ವರ್ಷದ ತೊಗಲುಗೊಂಬೆ ಕಲಾವಿದೆ ಭೀಮವ್ವ ದೊಡ್ಡಬಾಳಪ್ಪ ಶಿಳ್ಳೇಕ್ಯಾತರಿಗೆ ಸನ್ಮಾನಿಸಲಾಯಿತು.
ವಿಶ್ವ ಹಿರಿಯರ ದಿನಾಚರಣೆ ಕಾರ್ಯಕ್ರಮದಲ್ಲಿ ಆಯೋಜಕರು ಎಡವಟ್ಟು ಮಾಡಿದ್ದು, 80-90 ವರ್ಷದವರು ಕಾರ್ಯಕ್ರಮದಲ್ಲಿದ್ದರೂ ಮಧ್ಯಾಹ್ನ 1 ಗಂಟೆಗೆ ಇದ್ದ ಕಾರ್ಯಕ್ರಮವನ್ನು 2.30 ಆದರೂ ಆರಂಭಿಸಿಲ್ಲ. ಇದರಿಂದ ಸಂಜೆಯಾದರೂ ಹಿರಿಯ ವಯಸ್ಕರಿಗೆ ಊಟ ಮಾಡಲಾಗದೆ ಸಮಸ್ಯೆಯಾಯಿತು.
ಗಣಿ ಮತ್ತು ಭೂ ವಿಜ್ಞಾನ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ ಹಾಲಪ್ಪ ಆಚಾರ್ ಮಾತನಾಡಿ, ರಾಜ್ಯದಲ್ಲಿ 35 ವೃದ್ಧಾಶ್ರಮಗಳಿವೆ. 43 ವೃದ್ಧಾಶ್ರಮ ಹಂತ ಹಂತವಾಗಿ ಆರಂಭಿಸುತ್ತೇವೆ. ಹಿರಿಯ ನಾಗರಿಕರು ತಮ್ಮ ಸಮಯ ಉತ್ತಮ ರೀತಿಯಲ್ಲಿ ಸದುಪಯೋಗಪಡಿಸಿಕೊಳ್ಳಲು, ಕೆಲವು ಸೌಲಭ್ಯ ಒದಗಿಸಲಾಗುತ್ತಿದೆ. 14567 ಟೋಲ್ ಫ್ರೀ ಸಂಖ್ಯೆ ಸಹಾಯ ವಾಣಿಯನ್ನು ಬಳಸಿ ವಿವಿಧ ಸರ್ಕಾರದ ಕಾರ್ಯಕ್ರಮಗಳ ಮಾಹಿತಿ ಪಡೆಯಬಹುದಾಗಿದೆ ಎಂದರು.
ಕೇಂದ್ರ ಸರ್ಕಾರದ ಸಾಮಾಜಿಕ ನ್ಯಾಯ, ಸಬಲೀಕರಣ ಕೇಂದ್ರದ ರಾಜ್ಯ ಸಚಿವ ಎ ನಾರಾಯಣ ಸ್ವಾಮಿ ಮಾತನಾಡಿ, ಹಿರಿಯರ ಜೊತೆ ಆಟವಾಡುವ, ಅವರ ಪ್ರೀತಿಗೆ ಮನಸೋಲುವ ಸಮಯ ಇತ್ತು. ಈಗ ಹಿರಿಯರ ಬಗ್ಗೆ ತಾತ್ಸಾರದಿಂದ ವೃದ್ಧಾಶ್ರಮಗಳು ಇವೆ. ಇದು ಭಾರತದಲ್ಲಿ ಇರಬಾರದಿತ್ತು. ಮಾನವೀಯ ಮೌಲ್ಯ ಇರುವವರು ವೃದ್ಧಾಶ್ರಮದ ಸಂಸ್ಕೃತಿಯನ್ನು ಬೆಳೆಸುತ್ತಿರಲಿಲ್ಲ. ಎನ್ಜಿಒಗಳು ಪ್ರಾಮಾಣಿಕತೆಯಿಂದ ಕೆಲಸ ಮಾಡಬೇಕು. ಹಿರಿಯರನ್ನು ತಾತ್ಸಾರ ಮಾಡಬಾರದು ಎಂದರು.
ಪ್ರಶಸ್ತಿಗಳು
- ಗುರುಪಾದಪ್ಪ ಅಂಚೇರ-ಶಿಕ್ಷಣ ಕ್ಷೇತ್ರ
- ಗರವೀರ ಪ್ರಭು ಕ್ಯಾಲಕೊಂಡ-ಸಾಹಿತ್ಯ
- ಡಾ.ಶರಣಪ್ಪ ಗೋವನಾಳ-ಕಲೆ
- ಎಸ್.ಜಾನರ್ಧನ-ಸಮಾಜ ಸೇವೆ
- ಅಂಚೆ ಅಶ್ವತ್ಥ-ಕ್ರೀಡೆ
- ಬಿ.ಕಿಷನ್ ರಾವ್-ಕಾನೂನು
- ಬಿ.ಆರ್ ಅಂಬೇಡ್ಕರ್ ಕಲ್ಚರಲ್ ಸೊಸೈಟಿ ಬೀದರ್- ಸಂಸ್ಥೆ
- ಇದರೊಂದಿಗೆ ಮತ್ತೆ ನಾಲ್ಕು ಜನರನ್ನ ಸನ್ಮಾನಿಸಲಾಯಿತು
ಕಾರ್ಯಕ್ರಮದಲ್ಲಿ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ನಿರ್ದೇಶನಾಲಯ ಇಲಾಖೆ ನಿರ್ದೇಶಕ ಡಾ.ವಿ ಮುನಿರಾಜು, ಕೇಂದ್ರ ಸರ್ಕಾರದ ಸಾಮಾಜಿಕ ನ್ಯಾಯ, ಸಬಲೀಕರಣ ಕೇಂದ್ರದ ರಾಜ್ಯ ಸಚಿವ ಎ. ನಾರಾಯಣಸ್ವಾಮಿ, ಜಲಸಂಪನ್ಮೂಲ ಸಚಿವ ಗೋವಿಂದ ಎಂ.ಕಾರಜೋಳ, ಚಿಕ್ಕಪೇಟೆ ಶಾಸಕ ಉದಯ ಗರುಡಾಚಾರ್, ಶಾಸಕಿ ಕೆ.ಪೂರ್ಣಿಮಾ ಭಾಗಿಯಾಗಿದ್ದರು.
ಇದನ್ನೂ ಓದಿ: ಅಕ್ಟೋಬರ್ 11ರಿಂದ ಒಂದು ವಾರ ಹೈಕೋರ್ಟ್ಗೆ ದಸರಾ ರಜೆ