ಬೆಂಗಳೂರು: ರಾಜರಾಜೇಶ್ವರಿನಗರ ವಲಯದ ಕೊರೊನಾ ನಿಯಂತ್ರಣ ಕಾರ್ಯವೈಖರಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಸಮಾಧಾನಗೊಂಡಿದ್ದು, ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಕೋವಿಡ್-19 ನಿಯಂತ್ರಣ ಸಂಬಂಧ ಸಿಎಂ ನೇತೃತ್ವದಲ್ಲಿ ವಲಯವಾರು ಸಭೆ ಆರಂಭಗೊಂಡಿದೆ. ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ನಡೆಯುತ್ತಿರುವ ಸಭೆಯಲ್ಲಿ ಆರ್ಆರ್ ನಗರ ವಲಯ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್, ಸಂಸದ ಡಿ.ಕೆ.ಸುರೇಶ್, ಸಂಯೋಜನಾಧಿಕಾರಿ ಡಾ.ವಿಶಾಲ್, ಬಿಬಿಎಂಪಿ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು ಭಾಗಿಯಾಗಿದ್ದಾರೆ.
ಕೊರೊನಾ ನಿಯಂತ್ರಣ ಸಂಬಂಧ ಅಧಿಕಾರಿಗಳ ಕಾರ್ಯವೈಖರಿಗೆ ಅಸಮಧಾನಗೊಂಡ ಸಿಎಂ ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡರು. ಇನ್ನು ಎಷ್ಟು ಸಭೆ ಮಾಡಬೇಕು ನಿಮಗೆ ಅರ್ಥ ಆಗೋದಿಲ್ಲ. ಜನ ಸಾಯುತ್ತಿದ್ದಾರೆ. ನಿಮಗೆ ಮಾನವೀಯತೆ ಅನ್ನೋದೇ ಇಲ್ವಾ. ಪ್ರತಿಯೊಂದಕ್ಕೂ ನಾನೇ ಹೇಳಬೇಕಾ? ಇನ್ಮುಂದೆ ವಲಯವಾರು ದೂರುಗಳು ಬಂದರೆ ನಿರ್ಧಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಅಧಿಕಾರಿಗಳಿಗೆ ಸಿಎಂ ಎಚ್ಚರಿಕೆ ನೀಡಿದ್ದಾರೆ.
ಆರ್ಆರ್ ನಗರದಲ್ಲಿ ಸೋಂಕಿನ ಪ್ರಮಾಣ, ಹರಡುವಿಕೆ ಪ್ರಮಾಣ, ನಿಯಂತ್ರಣಕ್ಕೆ ಕೈಗೊಳ್ಳಬೇಕಿರುವ ಕುರಿತು ಅಧಿಕಾರಿಗಳ ಜೊತೆ ಸಿಎಂ ಸಮಾಲೋಚನೆ ನಡೆಸಿ ಸಲಹೆ ಸೂಚನೆ ನೀಡುತ್ತಿದ್ದಾರೆ.