ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭಾರತೀಯ ಜನತಾ ಪಕ್ಷ ಆಯೋಜಿಸಿದ್ದ ಜನ ಸಂವಾದ ರ‌್ಯಾಲಿಯ ಸಮಾರೋಪ ಸಮಾರಂಭವನ್ನು ಸರ್ಕಾರಿ ನಿವಾಸ ಕಾವೇರಿಯಲ್ಲಿ ಕುಟುಂಬದವರೊಂದಿಗೆ ಕುಳಿತು ವೀಕ್ಷಿಸಿದರು.
ಪ್ರಧಾನಿ ನರೇಂದ್ರ ಮೋದಿ ಸರ್ಕಾರವು ಎರಡನೇ ಅವಧಿಯ ಮೊದಲ ವರ್ಷವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ಅಭೂತಪೂರ್ವ ಜನ ಬೆಂಬಲದೊಂದಿಗೆ ಮುಂದೆ ಸಾಗುತ್ತಿರುವ ಸಮಯದಲ್ಲಿ ಸರ್ಕಾರದ ಸಾಧನೆಗಳನ್ನು ಮನೆ-ಮನಗಳಿಗೆ ತಲುಪಿಸುವ ಸಲುವಾಗಿ ಬಿಜೆಪಿ ಈ ಕಾರ್ಯಕ್ರಮ ಆಯೋಜಿಸಿತ್ತು.
ಈ ಸಂದರ್ಭದಲ್ಲಿ ಮುಖ್ಯ ಭಾಷಣ ಮಾಡಿದ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರ ಭಾಷಣದ ಕುರಿತು ಸಿಎಂ ಪ್ರಶಂಸೆ ವ್ಯಕ್ತಪಡಿಸಿದರು.
ಪ್ರಧಾನಿ ಮೋದಿ ಸರ್ಕಾರ ಹಾಗೂ ರಾಜ್ಯ ಸರ್ಕಾರದ ಸಾಧನೆಗಳು ಹಾಗೂ ಕೊರೋನಾ ತುರ್ತು ಸಮಯದ ನಿರ್ವಹಣೆ, ಸಂಕಷ್ಟದ ಸಮಯದಲ್ಲಿ ಸರ್ಕಾರಗಳು ಹಾಗೂ ಪಕ್ಷ ಕೈಗೊಂಡ ಕಾರ್ಯಗಳ ಕುರಿತು ಸವಿವರವಾಗಿ ಜನತೆಯ ಮುಂದಿಟ್ಟ ಬಿ.ಎಲ್.ಸಂತೋಷ್ ಅವರನ್ನು ಅಭಿನಂದಿಸಿದರು.