ಬೆಂಗಳೂರು: ಧರ್ಮೇಗೌಡರ ನಿಧನದಿಂದ ತೆರವಾಗಿದ್ದ ವಿಧಾನ ಪರಿಷತ್ ಸ್ಥಾನದ ಉಪ ಚುನಾವಣೆಗೆ ತುಳಸಿ ಮುನಿರಾಜುಗೌಡರನ್ನು ಅಭ್ಯರ್ಥಿಯನ್ನಾಗಿ ಬಿಜೆಪಿ ಹೈಕಮಾಂಡ್ ಪ್ರಕಟಿಸಿದೆ.
ನಾಮಪತ್ರ ಸಲ್ಲಿಕೆಗೆ ಎರಡು ದಿನ ಮಾತ್ರ ಬಾಕಿ ಇದ್ದು, ಆರ್.ಆರ್.ನಗರದ ಟಿಕೆಟ್ ಆಕಾಂಕ್ಷಿಯಾಗಿದ್ದ ತುಳಸಿ ಮುನಿರಾಜುಗೌಡರಿಗೆ ಟಿಕೆಟ್ ನೀಡಿದೆ. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ್ದ ಮುನಿರತ್ನಗೋಸ್ಕರ ಕ್ಷೇತ್ರವನ್ನು ತ್ಯಾಗಮಾಡಿದ್ದ ಮುನಿರಾಜುಗೌಡರಿಗೆ ಪಕ್ಷ ಪರಿಷತ್ ಉಪ ಚುನಾವಣೆಯಲ್ಲಿ ಮಣೆ ಹಾಕಿದ್ದು, ಅಚ್ಚರಿ ರೀತಿಯಲ್ಲಿ ಟಿಕೆಟ್ ನೀಡಿದೆ.
ವಿಧಾನಸಭೆಯಿಂದ ವಿಧಾನ ಪರಿಷತ್ನ ಒಂದು ಸ್ಥಾನಕ್ಕೆ ಉಪ ಚುನಾವಣೆ ನಡೆಯುತ್ತಿದ್ದು, ಆಡಳಿತಾರೂಢ ಬಿಜೆಪಿಗೆ ಈ ಸ್ಥಾನ ದಕ್ಕುವುದು ಬಹುತೇಕ ಖಚಿತವಾಗಿದೆ.
ಹಳ್ಳಿ ಹಕ್ಕಿ ವಿಶ್ವನಾಥ್ಗೆ ನಿರಾಸೆ
ಇನ್ನು ಸಚಿವ ಸ್ಥಾನ ಪಡೆಯಲು ಚುನಾಯಿತರಾಗಬೇಕಿರುವ ನಾಮನಿರ್ದೇಶಿತ ಎಂಎಲ್ಸಿ ಹೆಚ್.ವಿಶ್ವನಾಥ್ ಈ ಉಪ ಚುನಾವಣೆಯಲ್ಲಿ ಟಿಕೆಟ್ ಕೊಡಿ ಎಂದು ಮನವಿ ಮಾಡಿ ಸಂಪುಟ ಸೇರ್ಪಡೆ ಅಪೇಕ್ಷೆ ವ್ಯಕ್ತಪಡಿಸಿದ್ದರು. ಆದ್ರೆ ಆ ಬೇಡಿಕೆಯನ್ನು ಹೈಕಮಾಂಡ್ ಪರಿಗಣಿಸಲಿಲ್ಲ. ಇದರಿಂದಾಗಿ ವಿಶ್ವನಾಥ್ ನಿರಾಶರಾಗುವಂತಾಗಿದೆ.