ಬೆಂಗಳೂರು: ಕಾಂಗ್ರೆಸ್ ಪಕ್ಷದ 20 ಜನ ಶಾಸಕರು ಬಿಜೆಪಿ ಸೇರಲು ಸಿದ್ಧರಾಗಿದ್ದಾರೆ. ಕಾಂಗ್ರೆಸ್ ಪಕ್ಷವನ್ನು ಹಿಂದುಳಿದ ವರ್ಗದವರು ದೂರ ಮಾಡುವ ಕೆಲಸವನ್ನು ಮಾಡುತ್ತಿದ್ದಾರೆ. ಅವರನ್ನು ಸೆಳೆಯುವ ಕೆಲಸವನ್ನು ಮುನಿರತ್ನ ಅವರಿಗೆ ನೀಡಲಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಸಂಸದರಾದ ನಳಿನ್ ಕುಮಾರ್ ಕಟೀಲ್ ಒಬಿಸಿ ಮೋರ್ಚಾ ಕಾರ್ಯಕ್ರಮದಲ್ಲಿ ತಿಳಿಸಿದರು.
ರಾಜ್ಯದ ಬಿಜೆಪಿ ಸರ್ಕಾರದಲ್ಲಿ ಒಬಿಸಿ ಸಮುದಾಯದಿಂದ ಸಚಿವರಾದ ಕೆ.ಎಸ್.ಈಶ್ವರಪ್ಪ, ಕೋಟ ಶ್ರೀನಿವಾಸ ಪೂಜಾರಿ, ಸುನೀಲ್ ಕುಮಾರ್, ಎಂ.ಟಿ.ಬಿ.ನಾಗರಾಜ್, ಭೈರತಿ ಬಸವರಾಜ್, ಮುನಿರತ್ನ ಮತ್ತು ಆನಂದ್ ಸಿಂಗ್, ಸಂಸದರಾದ ಪಿ.ಸಿ. ಮೋಹನ್ ಮತ್ತು ರಾಜ್ಯಸಭಾ ಸದಸ್ಯರಾದ ನಾರಾಯಣ್ ಅವರಿಗೆ ಹಾಗೂ ಒಬಿಸಿ ಸಮುದಾಯದ ಶಾಸಕರಿಗೆ ಗೌರವಾರ್ಪಣೆ ಕಾರ್ಯಕ್ರಮ ಬಿಜೆಪಿ ಒಬಿಸಿ ಮೋರ್ಚಾ ರಾಜ್ಯ ಘಟಕದ ವತಿಯಿಂದ ನಗರದ ಮಲ್ಲೇಶ್ವರದ ಚೌಡಯ್ಯ ಮೆಮೋರಿಯಲ್ ಹಾಲ್‍ನಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ನಳಿನ್‍ಕುಮಾರ್ ಕಟೀಲ್, ಕಾಂಗ್ರೆಸ್ ಪಕ್ಷವನ್ನು ಹಿಂದುಳಿದ ವರ್ಗದವರು ದೂರ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಹಿಂದುಳಿದ ವರ್ಗಗಳ ಅನೇಕ ನಾಯಕರು ಬಿಜೆಪಿ ಸೇರಲಿದ್ದಾರೆ ಎಂದರು. ಹಿಂದುಳಿದ ವರ್ಗದ ಕಂಚಿನ ಕಂಠಕ್ಕೆ ಹಕ್ಕು ಮತ್ತು ಧ್ವನಿಯನ್ನು ಜನಪರ ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದ್ದಾರೆ ಎಂದರು.
ಸಿದ್ದರಾಮಯ್ಯ ಅವರ ಅಹಿಂದ ಹೋರಾಟವು ಅಧಿಕಾರಕ್ಕೆ ಸೀಮಿತವಾಯಿತು. ಆದರೆ, ನಮ್ಮ ಸರ್ಕಾರವು ವಿದ್ಯಾರ್ಥಿಗಳಿಗೆ ಮೀಸಲಾತಿ, ಹೆಚ್ಚು ವಿದ್ಯಾರ್ಥಿವೇತನ ನೀಡಿದೆ. ಹಿಂದುಳಿದ ಜಾತಿ ಪಟ್ಟಿಗೆ ಜಾತಿ ಸೇರ್ಪಡೆಯ ಅವಕಾಶವನ್ನೂ ರಾಜ್ಯಗಳಿಗೆ ನೀಡಲಾಗಿದೆ ಎಂದರು.
ಹಿಂದುಳಿದ ವರ್ಗಗಳ ಸಮುದಾಯದ ಜವಾಬ್ದಾರಿಯನ್ನು ಈಶ್ವರಪ್ಪ ಅವರಿಗೆ ನೀಡಿದ್ದೇವೆ. ಅವರು ನರೇಂದ್ರ ಬಾಬು ಅವರ ಜೊತೆಗೂಡಿ ಒಬಿಸಿಯ ಎಲ್ಲಾ ಸಮುದಾಯದವರನ್ನು ಬಿಜೆಪಿಗೆ ತರಲಿದ್ದಾರೆ ಎಂದು ತಿಳಿಸಿದರು.
ಬಿಜೆಪಿ ಒಬಿಸಿ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷರು ಮತ್ತು ರಾಜ್ಯಸಭಾ ಸದಸ್ಯ ಡಾ.ಲಕ್ಷ್ಮಣ್ ಅವರು ಮಾತನಾಡಿ, ಒಬಿಸಿ ಸಮುದಾಯದ 7 ಜನರನ್ನು ಸಚಿವರನ್ನಾಗಿ ಮಾಡಿದ್ದಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಕೃತಜ್ಞತೆ. ಮೋರ್ಚಾವು ಒಬಿಸಿ ಸಮುದಾಯದ ಕೇಂದ್ರ ಸಚಿವರನ್ನು ಈಗಾಗಲೇ ಗೌರವಿಸಿದೆ ಎಂದು ತಿಳಿಸಿದರು.
ಒಬಿಸಿ ಸಮುದಾಯದ 27 ಜನರನ್ನು ಸಚಿವರನ್ನಾಗಿ ಮಾಡಿ ನರೇಂದ್ರ ಮೋದಿ ಅವರು ಹೊಸ ಇತಿಹಾಸ ಸೃಷ್ಟಿಸಿದ್ದಾರೆ ಎಂದು ಮೆಚ್ಚುಗೆ ಸೂಚಿಸಿದರು. ಅಲ್ಪಸಂಖ್ಯಾತರ ಕೋಟಾದಡಿ ವಿವಿಧ ಮತದವರಿಗೂ ಅವಕಾಶ ನೀಡಿದ್ದಾರೆ ಎಂದರು. ಒಬಿಸಿ ಸಮುದಾಯಕ್ಕೆ ಶೇ 27ರಷ್ಟು ಮೀಸಲಾತಿಯನ್ನು ನೀಡಿದ ಸರ್ಕಾರ ನಮ್ಮದು ಎಂದು ವಿವರಿಸಿದ್ದಾರೆ.
ಇದನ್ನೂ ಓದಿ: ಜೆಡಿಎಸ್, ಕಾಂಗ್ರೆಸ್ ವಾಕೌಟ್: ಚಾಣಕ್ಯ ವಿವಿ ಬಿಲ್ ಪರಿಷತ್ನಲ್ಲೂ ಪಾಸ್