ಬೆಂಗಳೂರು: ರಾಜ್ಯ ಬಿಜೆಪಿಯ ವಕ್ತಾರ ಚಂದ್ರಶೇಖರ್ ಚಲಿಸುವ ಬಸ್ನಲ್ಲೇ ಹೃದಯಾಘಾತದಿಂದ ನಿಧನರಾಗಿದ್ದಾರೆ. ಕೆ.ಆರ್. ಮಾರ್ಕೆಟ್ ಬಳಿ ಬಿಎಂಟಿಸಿ ಬಸ್ನಲ್ಲಿ ಪ್ರಯಾಣಿಸುತ್ತಿದ್ದಾಗ ಹಠಾತ್ ಹೃದಯಾಘಾತದಿಂದ ನಿಧನರಾದರು. ಜಾಗತಿಕ, ರಾಷ್ಟ್ರೀಯ ವಿಷಯಗಳ ಕುರಿತು ಪಾಂಡಿತ್ಯ ಹೊಂದಿದ್ದ ಚಂದ್ರಶೇಖರ್ ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಇರಿಸಲಾಗಿದ್ದು, ಮರಣೋತ್ತರ ಪರೀಕ್ಷೆ ನಂತರ ಕುಟುಂಬಕ್ಕೆ ಹಸ್ತಾಂತರ ಮಾಡಲಾಗುತ್ತದೆ.
ಕಟೀಲ್ ಸಂತಾಪ : ಬಿಜೆಪಿ ವಕ್ತಾರ ಟಿ.ಎಸ್.(ಕೊರಿಯ) ಚಂದ್ರಶೇಖರ್ ಅವರ ನಿಧನಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ತೀವ್ರ ಸಂತಾಪ ಸೂಚಿಸಿದ್ದಾರೆ. ವಿದೇಶಾಂಗ ವ್ಯವಹಾರಕ್ಕೆ ಸಂಬಂಧಿಸಿ ತಜ್ಞರಾಗಿದ್ದ ಅವರು, ವಿವಿಧ ಟಿ.ವಿ. ಚಾನೆಲ್‍ಗಳಲ್ಲಿ ರಾಜ್ಯ ಮತ್ತು ರಾಷ್ಟ್ರಮಟ್ಟದ ಸಂವಾದಗಳಲ್ಲಿ ವಿಷಯ ತಜ್ಞರಾಗಿ ಚರ್ಚೆಗಳಲ್ಲಿ ಭಾಗವಹಿಸುತ್ತಿದ್ದರು. ಪಕ್ಷವನ್ನು ಸಮರ್ಥಿಸಿ ಮಾತನಾಡುತ್ತಿದ್ದರು ಎಂದು ಅವರು ತಿಳಿಸಿದ್ದಾರೆ.
ಸಂಘ ಪರಿವಾರದ ಹಿನ್ನೆಲೆಯವರಾದ ಅವರು ಹಲವಾರು ವರ್ಷಗಳಿಂದ ಪಕ್ಷದಲ್ಲಿ ಕೆಲಸ ಮಾಡಿದ್ದರು ಎಂದು ತಿಳಿಸಿದ್ದಾರೆ. ಮೃತರ ಆತ್ಮಕ್ಕೆ ಶಾಂತಿ ಲಭಿಸಲಿ. ದುಃಖತಪ್ತ ಕುಟುಂಬಕ್ಕೆ ಈ ನೋವನ್ನು ಸಹಿಸುವ ಶಕ್ತಿಯನ್ನು ಪರಮಾತ್ಮನು ನೀಡಲಿ ಎಂದು ಅವರು ಪ್ರಾರ್ಥಿಸಿದ್ದಾರೆ.
ಇದನ್ನೂ ಓದಿ : ಬಂಟ್ವಾಳ: ಹಾಡಹಗಲೇ ಚೂರಿಯಿಂದ ಇರಿದು ಮಹಿಳೆ ಕೊಲೆ