ಬೆಂಗಳೂರು: ಸಿಸಿಟಿವಿ ಇಲ್ಲದಿರುವ ಜಾಗದಲ್ಲಿ ನಿಲ್ಲಿಸಲಾಗಿರುವ ಬೈಕ್ಗಳನ್ನೇ ಟಾರ್ಗೆಟ್ ಮಾಡಿ, ಕಳ್ಳತನ ಮಾಡಿ ಅದೇ ಬೈಕ್ಗಳ ಮೇಲೆ ನಗರದಲ್ಲಿ ಓಡಾಡಿ, ಜನರ ಮೊಬೈಲ್ಗಳನ್ನು ಸುಲಿಗೆ ಮಾಡುತ್ತಿದ್ದ ಐವರು ಖದೀಮರನ್ನು ಚಂದ್ರಲೇಔಟ್ ಪೊಲೀಸರು ಬಂಧಿಸಿದ್ದಾರೆ.
ಸಯ್ಯದ್ ಉಮರ್ ಫಾರೂಕ್, ಇಮ್ರಾನ್, ಸೈಯದ್ ಮುಜಾಯಿದ್, ಶಾಹಿದ್ ಅಫ್ರಿದ್, ಮೊಯಿನುದ್ಧಿನ್ ಬಂಧಿತ ಆರೋಪಿಗಳು.
ಮೊದಲ ನಾಲ್ಕು ಆರೋಪಿಗಳು ಸಿಸಿಟಿವಿ ಕ್ಯಾಮರಾ ಇಲ್ಲದ ಕಡೆ ನಿಲ್ಲಿಸುತ್ತಿದ್ದ ಬೈಕ್ಗಳನ್ನು ಕದಿಯುತ್ತಿದ್ದರು. ಕದ್ದ ಬೈಕ್ನಲ್ಲಿ ನಗರದೆಲ್ಲೆಡೆ ಸುತ್ತಾಡಿ ಒಂಟಿಯಾಗಿ ನಡೆದು ಹೋಗುವವರನ್ನು ಟಾರ್ಗೆಟ್ ಮಾಡಿ ಅವರ ಬಳಿಯಿಂದ ಮೊಬೈಲ್ಗಳನ್ನು ಕಳ್ಳತನ ಮಾಡುತ್ತಿದ್ದರು. ಕದ್ದ ಮೊಬೈಲ್ಗಳನ್ನು ನಗರದ ಬರ್ಮಾ ಬಜಾರ್ನಲ್ಲಿ ಮೊಬೈಲ್ ಅಂಗಡಿಯಲ್ಲಿ ಕೆಲಸ ಮಾಡುವ ಪ್ರಕರಣದ ಐದನೇ ಆರೋಪಿ ಮೊಯಿನುದ್ದೀನ್ಗೆ ಅರ್ಧ ಬೆಲೆಯಲ್ಲಿ ಮಾರಾಟ ಮಾಡುತ್ತಿದ್ದರು.
ಬೈಕ್ ಕಳ್ಳತನ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದಾಗ ಮೊಬೈಲ್ ಕಳ್ಳತನದ ಜಾಲ ಬೆಳಕಿಗೆ ಬಂದಿದೆ. ಬಂಧಿತರಿಂದ ನಾಲ್ಕು ಪಲ್ಸರ್ ಬೈಕ್, 3.88 ಲಕ್ಷ ಬೆಲೆಯ 97 ಮೊಬೈಲ್ಗಳನ್ನು ಜಪ್ತಿ ಮಾಡಿದ್ದಾರೆ. ಬಂಧಿತ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.