ಬೆಂಗಳೂರು: ಅರ್.ಆರ್. ನಗರ ಜೆಡಿಎಸ್ ಅಧ್ಯಕ್ಷ ಬೆಟ್ಟಸ್ವಾಮಿ ಗೌಡ ಇಂದು ತಮ್ಮ ಬೆಂಬಲಿಗರೊಂದಿಗೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.
ಬೆಟ್ಟಸ್ವಾಮಿ ರಾಜರಾಜೇಶ್ವರಿನಗರ ವಿಧಾನಸಭೆ ಉಪಚುನಾವಣೆ ಜೆಡಿಎಸ್ ಟಿಕೆಟ್ ಆಕಾಂಕ್ಷಿಯಾಗಿದ್ದರು. ಟಿಕೆಟ್ ಕೈತಪ್ಪಿದ ಹಿನ್ನೆಲೆ ಬೇಸರಗೊಂಡಿದ್ದರು. ಇಂದು ವಿವಿಧ ವಾರ್ಡ್ ಮಟ್ಟದ ಅಧ್ಯಕ್ಷರು ಹಾಗೂ ನಾಯಕರೊಂದಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸಮ್ಮುಖದಲ್ಲಿ ಕಾಂಗ್ರೆಸ್ಗೆ ಸೇರ್ಪಡೆಯಾದರು.
ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಡಿಕೆಶಿ ಕಾಂಗ್ರೆಸ್ ಪಕ್ಷದ ಬಾವುಟ ನೀಡಿ, ಶಾಲು ಹೊದಿಸಿ ಬರಮಾಡಿಕೊಂಡರು.
ಬೇಷರತ್ ಸೇರ್ಪಡೆ:
ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಮಾತನಾಡಿ, ಸುನಂದಾ ಶ್ರೀನಿವಾಸ್, ಅಂಥೋಣಿ, ಕೋದಂಡರಾಮಯ್ಯ, ರಾಜೇಶ್, ಶಿವಮುನಿಗೌಡ ಸೇರಿ 240 ಮುಖಂಡರು ಇಂದು ಕಾಂಗ್ರೆಸ್ ಸೇರಿದ್ದಾರೆ. ಇವರನ್ನ ಪಕ್ಷಕ್ಕೆ ಸೇರಿಸಿಕೊಳ್ಳೋಕೆ ನಾವು 15 ವರ್ಷಗಳಿಂದ ಪ್ರಯತ್ನ ಮಾಡಿದ್ದೆವು. ಆದರೆ ಸಮಯ ಕೂಡಿ ಬಂದಿರಲಿಲ್ಲ. ಈಗ ಯಾವುದೇ ಷರತ್ತಿಲ್ಲದೆ ಇವರೆಲ್ಲ ಬಂದಿದ್ದಾರೆ ಎಂದರು.
ಎಂ.ಶ್ರೀನಿವಾಸ್ ಜೆಡಿಎಸ್ ಶಾಸಕರಾಗಿದ್ದರು. ಈಗ ಎರಡು ಬಾರಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದರು. ಈಗ ಗೆದ್ದವರು ಪಕ್ಷದಲ್ಲಿಲ್ಲ. ಮತ್ತೆ ಕಾಂಗ್ರೆಸ್ ಅಭ್ಯರ್ಥಿಯನ್ನ ಗೆಲ್ಲಿಸಿಕೊಳ್ಳಬೇಕಿದೆ. ಬೆಟ್ಟಸ್ವಾಮಿ ಗೌಡ ಎಂಎಲ್ಎ ಅಭ್ಯರ್ಥಿಯಾಗಿದ್ದವರು. ಈಗ ಅವರು ನಮ್ಮ ಪಕ್ಷ ಸೇರಿದ್ದು ದೊಡ್ಡಪಡೆ ಕಟ್ಟುವ ಶಕ್ತಿಯಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಗೆಲ್ಲುವ ಅಭ್ಯರ್ಥಿಗಾಗಿ ಕಾಂಗ್ರೆಸ್ ಸೇರಿದ್ದೇವೆ
ಬೆಟ್ಟಸ್ವಾಮಿ ಗೌಡ ಮಾತನಾಡಿ, ಕಾಂಗ್ರೆಸ್ ಸೇರೋಕೆ ಹಲವು ಕಾರಣಗಳಿವೆ. ಆರ್.ಆರ್. ನಗರಕ್ಕೆ ಹೊಸಬರು ಬರ್ತಿದ್ರು, ಹೋಗ್ತಿದ್ರು. ಇದು ಪಕ್ಷ ಕಟ್ಟೋಕೆ ಸಮಸ್ಯೆಯಾಗಿತ್ತು. ಪ್ರತಿ ಬಾರಿ ಅಲ್ಲಿ ಗೆಲ್ಲುವ ಅಭ್ಯರ್ಥಿಯನ್ನ ನಮ್ಮ ಜೆಡಿಎಸ್ ಪಕ್ಷದ ನಾಯಕರು ಕಣಕ್ಕಿಳಿಸಲಿಲ್ಲ. ಅಷ್ಟು ದುಡಿದ್ರೂ ನಮ್ಮನ್ನ ಸರಿಯಾಗಿ ಪರಿಗಣಿಸಲಿಲ್ಲ. ಪಕ್ಷ ಸಂಘಟನೆ ಮೂಲಕ ಕಳೆದ ಬಾರಿ 60,300 ಮತಗಳನ್ನ ಪಕ್ಷಕ್ಕೆ ತಂದಿದ್ದೆವು. ಕಾರ್ಯಕರ್ತರ ಪರವಾದ ಅಭ್ಯರ್ಥಿ ನಮಗೆ ಬೇಕಿದೆ. ಅದಕ್ಕೆ ನಾವೆಲ್ಲ ಇವತ್ತು ಕಾಂಗ್ರೆಸ್ ಸೇರಿದ್ದೇವೆ ಎಂದರು.