ಬೆಂಗಳೂರು: ನಗರದಲ್ಲಿ ಒಮಿಕ್ರಾನ್ ಸೋಂಕು ಬಾಧಿತರ ಸಂಖ್ಯೆ ಹೆಚ್ಚಳವಾಗುತ್ತಿದ್ದು ಜನರು ಎಚ್ಚರಿಕೆಯಿಂದ ಇರಬೇಕು. ಸಭೆ-ಸಮಾರಂಭಗಳಲ್ಲಿ ಭಾಗಿಯಾಗದಿರುವುದು ಒಳ್ಳೆಯದು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಸಲಹೆ ನೀಡಿದ್ದಾರೆ.
ಅಪಾರ್ಟ್ಮೆಂಟ್ಗಳಲ್ಲಿ ಒಮಿಕ್ರಾನ್ ಹಾಗೂ ಕೋವಿಡ್ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಜಾಸ್ತಿಯಾಗುತ್ತಿದೆ. ಮೂರಕ್ಕೂ ಹೆಚ್ಚು ಪಾಸಿಟಿವ್ ಕೇಸ್ ಕಂಡು ಬರುವ ಕಡೆ ಮೈಕ್ರೋ ಕಂಟೈನ್ಮೆಂಟ್ ಮಾಡಲಾಗ್ತಿದೆ. ಪ್ರಸ್ತುತ ನೂರಕ್ಕೂ ಹೆಚ್ಚು ಕಂಟೈನ್ಮೆಂಟ್ ಪ್ರದೇಶಗಳಿವೆ. ಅಪಾರ್ಟ್ಮೆಂಟ್ಗಳ ಸಾಮಾನ್ಯ ಪ್ರದೇಶಗಳಲ್ಲಿ ಜನ ಸೇರುವುದು, ಪಾರ್ಟಿ ಮಾಡುವುದನ್ನು ನಿಷೇಧಿಸಬೇಕು ಎಂದರು.
ನಗರದಲ್ಲಿ 27 ಆರೋಗ್ಯಾಧಿಕಾರಿಗಳಿದ್ದು, 141 ಪ್ರಾಥಮಿಕ ಆರೋಗ್ಯ ಕೇಂದ್ರಗಳಿವೆ. ಕೋವಿಡ್ ನಿಯಂತ್ರಣ ಹಾಗೂ 15 ವರ್ಷ ಮೇಲ್ಪಟ್ಟ ಮಕ್ಕಳಿಗೆ ಲಸಿಕೆ ನೀಡುವ ಸಿದ್ಧತೆ ಕುರಿತು ಸಭೆ ನಡೆಸಲಾಗಿದೆ, ನಿರ್ದೇಶನಗಳನ್ನೂ ನೀಡಲಾಗಿದೆ ಎಂದು ಹೇಳಿದರು.
ಕರ್ನಾಟಕ ಬಂದ್ ವೇಳೆ ಕೋವಿಡ್ ನಿಯಮ ಪಾಲಿಸಬೇಕು. ಒಂದು ವೇಳೆ ನಿಯಮ ಉಲ್ಲಂಘಿಸಿದರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಆಯುಕ್ತರು ಎಚ್ಚರಿಸಿದರು.