ಬೆಂಗಳೂರು: ಅಂತರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದ್ದ ಬಾಂಗ್ಲಾ ಯುವತಿ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣದ ತನಿಖೆ ಮುಕ್ತಾಯಗೊಂಡಿದೆ. ಈ ಸಂಬಂಧ ರಾಮಮೂರ್ತಿ ನಗರ ಪೊಲೀಸರು ಇನ್ನೆರಡು ದಿನಗಳಲ್ಲಿ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಲು ಸಿದ್ದತೆ ನಡೆಸುತ್ತಿದ್ದಾರೆ.
1ನೇ ಎಸಿಎಂಎಂ ನ್ಯಾಯಾಲಯಕ್ಕೆ ಒಟ್ಟು 12 ಮಂದಿ ಆರೋಪಿಗಳ ವಿರುದ್ದ 1019 ಕ್ಕೂ ಹೆಚ್ಚು ಪುಟಗಳ ಪ್ರಾಥಮಿಕ ಚಾರ್ಜ್‌ಶೀಟ್ ಸಲ್ಲಿಸಲು ಪೊಲೀಸರು ತಯಾರಿ ಮಾಡಿಕೊಂಡಿದ್ದಾರೆ. ಒಟ್ಟು 10 ಮಂದಿ ಆರೋಪಿಗಳ ವಿರುದ್ದ ಅತ್ಯಾಚಾರ ಆರೋಪವಿದ್ದರೆ, ಇಬ್ಬರು ಯುವತಿಯರ ವಿರುದ್ಧ ಅಕ್ರಮ ವಲಸೆ ಆರೋಪವಿದೆ. ಈ ಪ್ರಕರಣದಲ್ಲಿ 30ಕ್ಕೂ ಹೆಚ್ಚು ಸಾಕ್ಷಿಗಳನ್ನು ಉಲ್ಲೇಖಿಸಲಾಗಿದೆ. ಪ್ರಮುಖವಾಗಿ 6 ಮಂದಿಯಿಂದ 164 ಹೇಳಿಕೆ ದಾಖಲು ಮಾಡಿದ ಅಂಶ ಚಾರ್ಜ್ಶೀಟ್ನಲ್ಲಿ ನಮೂದಿಸಲಾಗಿದೆ ಎನ್ನಲಾಗುತ್ತಿದೆ.
ಜೊತೆಗೆ ಕೃತ್ಯ ನಡೆದ ಜಾಗದ ಸಾಕ್ಷಿಗಳನ್ನೇ ಹೈಲೈಟ್ ಮಾಡಿರುವ ತನಿಖಾಧಿಕಾರಿಗಳು ಆರೋಪಿಗಳ ಮನೆಯಲ್ಲಿ ಸಿಕ್ಕ ಸಾಕ್ಷ್ಯಾಧಾರಗಳು ಮತ್ತೊಂದೆಡೆ ದಂಧೆಕೋರರ ಕರೆ ಮಾಹಿತಿ ಸೇರಿ ಟೆಕ್ನಿಕಲ್ ಎವಿಡೆನ್ಸ್ ಜೊತೆಗೆ ಆರೋಪಿಗಳ ಮೊಬೈಲ್ನಲ್ಲಿ ಸೆರೆಯಾಗಿರುವ ಡಿಜಿಟಲ್ ಎವಿಡೆನ್ಸ್ ಪೊಲೀಸರಿಗೆ ಪೂರಕವಾಗಿದೆ. ಸ್ಥಳದ ಸಾಕ್ಷಿಗಳ ಕುರಿತಂತೆ ಎಫ್ಎಸ್ಎಲ್ ವರದಿ ಅಂಶಗಳನ್ನು ಅಡಕ ಮಾಡಲಾಗಿದೆ. ಅಲ್ಲದೆ ಆರೋಪಿಗಳ ಡಿಎನ್ಎ ಸ್ಯಾಂಪಲ್ ವರದಿಯ ಪ್ರಮುಖಾಂಶಗಳನ್ನು ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ತಿಳಿದುಬಂದಿದೆ. ಎಲ್ಲಾ ಆರೋಪಿಗಳ ಮೊಬೈಲ್ ಸೀಜ್ ಮಾಡಲಾಗಿದ್ದು, ಡಿಜಿಟಲ್ ಎವಿಡೆನ್ಸ್ ರಿಪೋರ್ಟ್ ಕೂಡಾ ಪೊಲೀಸರು ಪಡೆದಿದ್ದಾರೆ.
ಘಟನೆಯ ವಿಡಿಯೋದಲ್ಲಿ ಮುಖ ಕಾಣದ ಅನೇಕ ಮಂದಿ ಇದ್ದಾರೆ. ಆರೋಪಿಗಳ ಹೇಳಿಕೆಯ ಮೇಲೆ ಹಲವರನ್ನು ಬಂಧಿಸಲಾಗಿದೆ. ಅದಕ್ಕೆ ಪೂರಕವಾಗಿ ವಾಯ್ಸ್ ಮ್ಯಾಚ್ ರಿಪೋರ್ಟ್ ಸಹ ಪಡೆಯಲಾಗಿದೆ. ಇಡೀ ಘಟನೆಗೆ ಆರೋಪಿಗಳು ಹಾಗೂ ಸಂತ್ರಸ್ತೆ ನಡೆಸುತ್ತಿದ್ದ ದಂಧೆ ಮುಖ್ಯ ಕಾರಣವಾಗಿದೆ ಎಂದು ಖುದ್ದು ಚಾರ್ಜ್ ಶೀಟ್ನಲ್ಲಿ ಉಲ್ಲೇಖವಾಗಿದೆ ಎಂದು ಹೇಳಲಾಗಿದೆ.
ಪ್ರಕರಣದ ಪ್ರಮುಖ ಆರೋಪಿ ರಿದಯ್ ಬಾಬು ಸೇರಿ ನಾಲ್ವರು ಯುವತಿಯರನ್ನು ಬಾಂಗ್ಲಾದಿಂದ ಅಕ್ರಮವಾಗಿ ಭಾರತಕ್ಕೆ ಸಾಗಾಟ ಮಾಡಿದ್ದರು. ಈ ಪೈಕಿ ಸಂತ್ರಸ್ತೆ ಹಾಗೂ ಜೊತೆಗಿದ್ದ ನಾಲ್ವರನ್ನು ಆರೋಪಿಗಳ ಕಪಿಮುಷ್ಠಿಯಿಂದ ದೂರ ಮಾಡಿದ್ದಳು. ಇದರಿಂದ ಯುವತಿಯ ಮೇಲೆ ಬಂಡವಾಳದ ಹಣ ನಷ್ಟವಾಗಿದೆ ಎಂದು ಆರೋಪಿಸಿ ಸಾಮೂಹಿಕ ಆತ್ಯಾಚಾರ ನಡೆಸಿದ್ದರು ಎಂದು ತನಿಖೆಯಲ್ಲಿ ಪೊಲೀಸರು ಕಂಡುಕೊಂಡಿದ್ದಾರೆ.
ಘಟನೆಗೆ ಸಂಬಂಧಿಸಿ ಇದುವರೆಗೂ 12 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ರಿದಯ್ ಬಾಬು, ಸಾಗರ್ ಮೊಹಮ್ಮದ್ ಬಾಬಾ ಶೇಕ್, ನುಸ್ರತ್, ಕಾಜಲ್ ಶೋಬಜ್ ಮತ್ತು ರುಪ್ಸನಾ ಹಾಗೂ ದಾಲೀಮ್, ಜಮಾಲ್ ಮತ್ತು ಅಜೀಂ, ಅಕಿಲ್, ರಫ್ಸನ್ ಹಾಗೂ ಈತನ ಪತ್ನಿ ತಾನ್ಯಾ ಸೇರಿದಂತೆ ಎಲ್ಲಾ ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದಾರೆ.