ಬೆಂಗಳೂರು: ನಗರದ ಬೆಂಗಳೂರು ದಕ್ಷಿಣ ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಿ.ಕೆ ಹರಿಪ್ರಸಾದ್ ನಿನ್ನೆ ಕೆಪಿಸಿಸಿ ಕಚೇರಿಗೆ ಭೇಟಿ ನೀಡಿದ್ದರು.
ಈ ವೇಳೆ ಮಾತನಾಡಿದ ಅವರು, ನಾನು ಕಾಂಗ್ರೆಸ್ನಲ್ಲಿ 45 ವರ್ಷಗಳಿಂದ ಪೂರ್ಣಾವಧಿ ಕಾರ್ಯಕರ್ತನಾಗಿ ಇದ್ದೇನೆ. ಚುನಾವಣೆಯಲ್ಲಿ ನಿರ್ದಿಷ್ಟ ಕ್ಷೇತ್ರದ ಒತ್ತಾಯ ಇರಲಿಲ್ಲ. ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಎಲ್ಲಿ ಹೇಳ್ತಾರೋ ಅಲ್ಲಿ ಸ್ಪರ್ಧೆಗಿಳಿಯಲು ನಿರ್ಧರಿಸಿದ್ದೆ. ಪಕ್ಷ ಬೆಂಗಳೂರು ದಕ್ಷಿಣದಲ್ಲಿ ನಿಲ್ಲುವಂತೆ ಸೂಚಿಸಿದ್ದು, ಅಲ್ಲಿಂದಲೇ ಕಣಕ್ಕಿಳಿಯುವೆ ಎಂದರು.
ಪಕ್ಷದ ಸೂಚನೆಯಂತೆ ಸ್ಪರ್ಧೆ ಮಾಡುತ್ತಿದ್ದೇನೆ. 1999 ಸನ್ನಿವೇಶ ಬೇರೆ ಇತ್ತು. ಈಗ ಸನ್ನಿವೇಶ ಬೇರೆ ಇದೆ. ಗೆಲ್ಲೋ ಸಂಪೂರ್ಣ ವಿಶ್ವಾಸ ಇದೆ ಎಂದು ಹರಿಪ್ರಸಾದ್ ಭರವಸೆಯ ಮಾತುಗಳನ್ನಾಡಿದರು.
ರಾಜ್ಯಸಭೆ ಸದಸ್ಯರಾಗಿರುವ ಹರಿಪ್ರಸಾದ್ 1999ರಲ್ಲಿ ಇದೇ ಕ್ಷೇತ್ರದಿಂದ ಸ್ಪರ್ಧಿಸಿ ಸೋಲು ಅನುಭವಿಸಿದ್ದರು. ಇದೀಗ ಇನ್ನೊಮ್ಮೆ ಅವರಿಗೆ ಸ್ಪರ್ಧಿಸುವ ಅವಕಾಶ ಒದಗಿ ಬಂದಿದೆ.
ಬಿಫಾರಂ ಸ್ವೀಕಾರ
ಅಭ್ಯರ್ಥಿ ಘೋಷಣೆ ಬೆನ್ನಲ್ಲೇ ಕೆಪಿಸಿಸಿ ಕಚೇರಿಗೆ ಆಗಮಿಸಿದ ಬಿ.ಕೆ ಹರಿಪ್ರಸಾದ್ ಬಿ ಫಾರಂ ಪಡೆದರು. ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಬಿ ಫಾರಂ ನೀಡಿದರು.