ಬೆಂಗಳೂರು: ನಾಳೆ ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯಕ್ಕೆ ಭೇಟಿ ಆಗಮಿಸುತ್ತಿದ್ದು, ಬೆಂಗಳೂರು, ತುಮಕೂರು, ಚಿಕ್ಕಬಳ್ಳಾಪುರ ಪ್ರವಾಸ ಮಾಡಲಿದ್ದಾರೆ. ಸರ್ಕಾರ ಹಾಗೂ ಪಕ್ಷದ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿರುವ ಅವರು ಕ್ಷೀರ ಬ್ಯಾಂಕ್, ಯಶಸ್ವಿನಿ ಯೋಜನೆಗೆ ಚಾಲನೆ ನೀಡಲಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಮಾಧ್ಯಮಗೊಷ್ಠಿ ನಡೆಸಿ ಮಾತನಾಡಿದ ಅವರು, ನಾಳೆ ರಾತ್ರಿ 10.30ಕ್ಕೆ ಅಮಿತ್ ಶಾ ಬೆಂಗಳೂರಿಗೆ ಬರಲಿದ್ದು, ಫೆ.1ರಂದು ಸಿದ್ಧಗಂಗಾ ಮಠದಲ್ಲಿ ನಡೆಯಲಿರುವ ಶಿವಕುಮಾರ ಶ್ರೀಗಳ 115ನೇ ಜನ್ಮದಿನೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.
ತುಮಕೂರಿನಲ್ಲೇ ಭೋಜನ ಮಾಡಿಕೊಂಡು ಬಳಿಕ ಚಿಕ್ಕಬಳ್ಳಾಪುರಕ್ಕೆ ತೆರಳಲಿದ್ದಾರೆ. ಅಲ್ಲಿನ ಮುದ್ದೇನಹಳ್ಳಿಯಲ್ಲಿ ಆಸ್ಪತ್ರೆ ಕಟ್ಟಡಕ್ಕೆ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದು, ನಂತರ ಬೆಂಗಳೂರಿನಲ್ಲಿ ಸಹಕಾರ ಸಮ್ಮೇಳನ ಕಾರ್ಯಕ್ರಮದಲ್ಲಿ ಭಾಗವಹಿಸಿ, ಬಳಿಕ ಸಂಜೆ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಅರಮನೆ ಮೈದಾನದಲ್ಲಿ ನಡೆಯಲಿರುವ ಸಹಕಾರ ಸಮ್ಮೇಳನ ಕಾರ್ಯಕ್ರಮದಲ್ಲಿ ನಂದಿನಿ ಕ್ಷೀರಾಭಿವೃದ್ಧಿ ಬ್ಯಾಂಕ್ ಲೋಗೊ ಬಿಡುಗಡೆ ಮಾಡಲಿದ್ದಾರೆ. ನಂದಿನಿ ಕ್ಷೀರಾಭಿವೃದ್ದಿ ಬ್ಯಾಂಕ್ನ್ನು ಬಜೆಟ್‌ನಲ್ಲಿ ಘೋಷಿಸಿದ್ದೇವೆ, ಹಾಲು ಉತ್ಪಾದನೆ ಮತ್ತು ಇತರ ಚಟುವಟಿಕೆಗಳಿಗೆ ಆರ್ಥಿಕ ಸಂಸ್ಥೆ ಇರಬೇಕೆಂದು ಮನಗಂಡು ರಾಜ್ಯ ಸರ್ಕಾರ 100 ಕೋಟಿ ರೂ. ನೀಡುತ್ತಿದೆ.
ಹಾಲು ಮಂಡಳಗಳಿಂದ 260 ಕೋಟಿ ಷೇರು ಹೂಡಿ ಬ್ಯಾಂಕ್ ನಿರ್ಮಾಣ ಮಾಡಲಾಗುತ್ತದೆ. ದೇಶದಲ್ಲಿ ಮೊದಲ ಬಾರಿಗೆ ಹಾಲು ಉತ್ಪಾದಕಾರ ಬ್ಯಾಂಕ್ ತೆರೆಯಲಾಗುತ್ತಿದ್ದು, ಹಾಲು ಉತ್ಪಾದಕರಿಗೆ ಉಪಯೋಗವಾಗಲಿದೆ.
ಒಟ್ಟು 26 ಲಕ್ಷ ಸದಸ್ಯ ರೈತರಿದ್ದು 14,900 ಹಾಲು ಸಂಘಗಳು ಹಾಗೂ ಒಟ್ಟು 15 ಹಾಲು ಒಕ್ಕೂಟಗಳಿವೆ. ಹಾಲು ಉತ್ಪಾದಕರ ಆದಾಯ ದ್ವಿಗುಣಗೊಳಿಸುವುದೇ ನಮ್ಮ ಉದ್ದೇಶವಾಗಿದೆ. ಮುಂದಿನ ದಿನಗಳಲ್ಲಿ ರೈತರ ಆರ್ಥಿಕ ಸ್ಥಿತಿ ಬದಲಾಯಿಸಲು ಈ ಯೋಜನೆ ಸಹಕಾರಿಯಾಗಲಿದೆ ಎಂದರು.
ಯಶಸ್ವಿನಿ ಯೋಜನೆ ಪುನಾರಂಭ: ಯಶಸ್ವಿನಿ ಯೋಜನೆ ಮತ್ತೆ ಜಾರಿ ಮಾಡುವ ಬಗ್ಗೆ ಬೇಡಿಕೆ ಇತ್ತು. ರಾಜ್ಯ ಸರ್ಕಾರ ಯಶಸ್ವಿನಿ ಯೋಜನೆಗೆ 300 ಕೋಟಿ ಮೀಸಲಿಟ್ಟಿದ್ದು, ಅದಕ್ಕೂ ಕೂಡ ಅಮಿತ್ ಶಾ ಅವರು ಚಾಲನೆ ನೀಡಲಿದ್ದಾರೆ. ಕೆಲವೊಂದು ಮಾರ್ಪಾಡುಗಳೊಂದಿಗೆ ಯಶಸ್ವಿನಿ ಯೋಜನೆ ಪುನರಾರಂಭ ಮಾಡಲಾಗುತ್ತದೆ ಎಂದು ತಿಳಿಸಿದರು.
ಅಪೆಕ್ಸ್, ಡಿಸಿಸಿ, ಪ್ಯಾಕ್ಸ್ ಹೀಗೆ ಮೂರು ಹಂತದ ಸಹಕಾರ ಬ್ಯಾಂಕ್ಗಳಿವೆ. ಇದರಲ್ಲಿ ಅಪೆಕ್ಸ್ ಬ್ಯಾಂಕ್ ಜೊತೆ ಡಿಸಿಸಿ ಬ್ಯಾಂಕ್ ವಿಲೀನ ಮಾಡಿದರೆ, ಅಪೆಕ್ಸ್ ಬ್ಯಾಂಕ್ನಿಂದ ನೇರ ರೈತರಿಗೆ ಸೌಲಭ್ಯ ತಲುಪಲಿದೆ. ಇದರಿಂದ ಡಿಸಿಸಿ ಬ್ಯಾಂಕ್ಗೆ ಹೋಗುವ ಶೇ. 1.5 ಕಮಿಷನ್ ಉಳಿದು, ರೈತರಿಗೆ ಸಿಗಲಿದೆ ಎನ್ನುವುದು ಕೇಂದ್ರದ ಚಿಂತನೆಯಾಗಿದೆ.
ಇದರ ಆಧಾರದಲ್ಲಿ ಈಗಾಗಲೇ ಛತ್ತೀಸ್ಗಡ, ಕೇರಳದಲ್ಲಿ ಅನುಷ್ಠಾನಗೊಳಿಸಲಾಗಿದ್ದು, ನಮ್ಮ ಅಧಿಕಾರಿಗಳನ್ನು ಅಧ್ಯಯನಕ್ಕಾಗಿ ಅಲ್ಲಿಗೆ ಕಳುಹಿಸಲಾಗುತ್ತದೆ. ಬಳಿಕ ಆ ಬಗ್ಗೆ ವರದಿ ಪಡೆದು ನಂತರ ಕೇಂದ್ರಕ್ಕೆ ಕಳುಹಿಸಿ, ನಿರ್ಧಾರ ಕೈಗೊಳ್ಳಲಾಗುತ್ತದೆ. ಸದ್ಯ ಅಪೆಕ್ಸ್ ಬ್ಯಾಂಕ್ ಜೊತೆ ಡಿಸಿಸಿ ಬ್ಯಾಂಕ್ ವಿಲೀನ ಚಿಂತನೆಯು ಇನ್ನೂ ಪ್ರಾಥಮಿಕ ಹಂತದಲ್ಲಿದೆ ಎಂದರು.
ಇದನ್ನೂ ಓದಿ: ಪ್ರತಿಪಕ್ಷಗಳೊಂದಿಗೆ MQM ಒಪ್ಪಂದ: ಅಧಿಕಾರ ಕಳೆದುಕೊಳ್ಳುತ್ತಾರಾ ಪಾಕ್ ಪ್ರಧಾನಿ ಇಮ್ರಾನ್ ಖಾನ್?