ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ರೈಲ್ವೆ ನಿಲ್ದಾಣ ನಿರ್ಮಾಣವಾಗುತ್ತಿದ್ದು, ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿಯಮಿತ (ಬಿ.ಐ.ಎ.ಎಲ್.) ಮತ್ತು ಭಾರತೀಯ ರೈಲ್ವೇಸ್ ನಡುವೆ ಪಾಲುದಾರಿಕೆ ಒಡಂಬಡಿಕೆಗೆ ಸಹಿ ಹಾಕಲಾಗಿದೆ.
ವಿಡಿಯೋ ಕಾನ್ಫರೆನ್ಸ್ ಮೂಲಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿಯವರ ಉಪಸ್ಥಿತಿಯಲ್ಲಿ ಭಾರತೀಯ ರೈಲ್ವೆ ಮತ್ತು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿಯಮಿತ (ಬಿ.ಐ.ಎ.ಎಲ್.) ಪರಸ್ಪರ ತಿಳುವಳಿಕಾ ಒಡಂಬಡಿಕೆಗೆ ಸಹಿ ಹಾಕಲಾಯಿತು.
ಒಡಂಬಡಿಕೆ ಪ್ರಕಾರ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ರೈಲ್ವೆ ನಿಲ್ದಾಣದ ನಿರ್ಮಾಣ ಜಂಟಿ ಸಹಯೋಗದಲ್ಲಿ ನಡೆಯಲಿದೆ. ರೈಲ್ವೆ ನಿಲ್ದಾಣದ ನಿರ್ಮಾಣ ಪೂರ್ಣವಾಗುವ ಹಂತದಲ್ಲಿದ್ದು, ಶೀಘ್ರದಲ್ಲಿಯೇ ಕಾರ್ಯಾಚರಣೆ ಆರಂಭಿಸಲಿದೆ. ಏರ್ಪೋರ್ಟ್ ರೈಲ್ವೆ ನಿಲ್ದಾಣವನ್ನು ಬಿ.ಐ.ಎ.ಎಲ್. ನಿರ್ಮಿಸುತ್ತಿದ್ದು, ಕಾಮಗಾರಿ ಪೂರ್ಣಗೊಂಡ ನಂತರ ಭಾರತೀಯ ರೈಲ್ವೆಗೆ ಹಸ್ತಾಂತರಿಸಲಿದೆ. ಭಾರತೀಯ ರೈಲ್ವೆ ನಿಲ್ದಾಣದ ಕಾರ್ಯಾಚರಣೆ ಮತ್ತು ನಿರ್ವಹಣೆ ಮಾಡಲಿದೆ. ವಿಮಾನ ನಿಲ್ದಾಣದ ರೈಲ್ವೆ ಸ್ಟೇಷನ್‍ನಿಂದ ನಿಗದಿಗೊಳಿಸಿದ ವೇಳಾಪಟ್ಟಿಗೆ ಅನುಗುಣವಾಗಿ ಬಿಐಎಎಲ್ ಉಚಿತ ಶಟಲ್ ಸೇವೆಯನ್ನು ಟರ್ಮಿನಲ್ ಮತ್ತು ವಿಮಾನ ನಿಲ್ದಾಣದ ಇತರೆ ಭಾಗಗಳಿಗೆ ರೈಲ್ವೆ ಸೇವೆಗಳನ್ನು ಪೂರೈಸಲಿದೆ.
ಏರ್ಪೋರ್ಟ್ ರೈಲ್ವೆ ನಿಲ್ದಾಣ ಕಾರ್ಯರಂಭವಾದ ನಂತರ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಬರುವ ನಿವಾಸಿಗಳು ಮತ್ತು ಉದ್ಯಮಿ ಪ್ರಯಾಣಿಕರಿಗೆ ಕಡಿಮೆ ವೆಚ್ಚದ ಮತ್ತು ಗುಣಮಟ್ಟದ ಸೇವೆ ಲಭಿಸಲಿದೆ. ಇದರಿಂದ ವಿಮಾನ ನಿಲ್ದಾಣಕ್ಕೆ ಸಂಪರ್ಕಿಸುವ ರಸ್ತೆಗಳಲ್ಲಿನ ವಾಹನ ದಟ್ಟನೆ ಸಹ ಕಡಿಮೆಯಾಗಲಿದೆ.
ಉತ್ತಮ ಕಾರ್ಯಕ್ಷಮತೆಯ ಸಾರಿಗೆ ಮಾದರಿಯನ್ನು ಪೂರೈಸಲಿದೆ. ಇದರಿಂದ ನಗರದ ನೈಜ ಆರ್ಥಿಕ ಸಾಮರ್ಥ್ಯವನ್ನು ಸಾಧಿಸಲು ಅವಕಾಶ ಮಾಡಿಕೊಡುವುದಲ್ಲದೆ, ವಿಮಾನ ನಿಲ್ದಾಣದ ಕಡೆಗೆ ಸಾಗುವ ರಸ್ತೆಗಳಲ್ಲಿ ವಾಹನ ದಟ್ಟಣೆಯನ್ನು ಕಡಿಮೆ ಮಾಡಲು ನೆರವಾಗಲಿದೆ.