ಬೆಂಗಳೂರು : ಲಂಚದ ಪಡೆದ ಆರೋಪದಡಿ ಕೊಡಿಗೆಹಳ್ಳಿ ಪೊಲೀಸ್ ಠಾಣೆಯ ಎಎಸ್ಐ ದಯಾನಂದ ಸ್ವಾಮಿ ಅಮಾನತುಗೊಂಡ ಬೆನ್ನಲೇ ಅವರ ಮನೆ ಮೇಲೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)ದ ಅಧಿಕಾರಿಗಳು ದಾಳಿ ಮಾಡಿದ್ದಾರೆ.
ಯಲಹಂಕ ಉಪನಗರ ಠಾಣಾ ವ್ಯಾಪ್ತಿಯಲ್ಲಿರುವ ಮನೆ ಮೇಲೆ ಎಸಿಬಿ ಎಸ್.ಪಿ.ಯತೀಶ್ ಚಂದ್ರ ನೇತೃತ್ವದಲ್ಲಿ 15 ಮಂದಿ ಅಧಿಕಾರಿಗಳ ತಂಡವು ದಾಳಿ ನಡೆಸಿದೆ. ದಾಳಿ ವೇಳೆ ಮನೆಯಲ್ಲಿ ದಯಾನಂದ್ ಇರಲಿಲ್ಲ. ಈ ಬಗ್ಗೆ ಪ್ರಶ್ನಿಸಿದರೆ ಕುಟುಂಬಸ್ಥರು ಗೊತ್ತಿಲ್ಲ ಎಂದು ಹೇಳುತ್ತಿರುವುದಾಗಿ ತಿಳಿದುಬಂದಿದೆ. ದಾಳಿ ವೇಳೆ 50 ಸಾವಿರ ನಗದು ಪತ್ತೆಯಾಗಿದೆ. ಮನೆಯಲ್ಲಿರುವ ದಾಖಲಾತಿ ಪತ್ರಗಳನ್ನು ಪರಿಶೀಲಿಸುತ್ತಿದೆ ಎಂದು ತಿಂದು ಮೂಲಗಳು ತಿಳಿಸಿವೆ.
35/40 ಅಳತೆಯ ಮೂರು ಅಂತಸ್ತಿನ ಡುಪ್ಲೆಕ್ಸ್ ನಿವಾಸ ಸುಮಾರು 2 ಕೋಟಿ ಮೌಲ್ಯದ್ದಾಗಿದೆ. ಕಳೆದ ವರ್ಷ 2020 ರಲ್ಲಿ ಹೆಡ್ ಕಾನ್ಸ್ಟೇಬಲ್ನಿಂದ ಎಎಸ್ಐ ಆಗಿ ಮುಂಬಡ್ತಿ ಪಡೆದಿದ್ದ ದಯಾನಂದ್, ನಗರ ಈಶಾನ್ಯ ವಿಭಾಗದ ಡಿಸಿಪಿ ಕಚೇರಿಯಲ್ಲಿ ಸ್ಪೆಷಲ್ ಬ್ರಾಂಚ್ (ಎಸ್ಬಿ) ಸಿಬ್ಬಂದಿಯಾಗಿ ಕಳೆದ ಆರು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದರು.
ಪ್ರಕರಣ ಹಿನ್ನೆಲೆ:
ಲಂಚ ಪಡೆದ ಆರೋಪದಡಿ ಉದ್ಯಮಿ ಭರತ್ ಶೆಟ್ಟಿ ಎಂಬುವರು ಇತ್ತೀಚೆಗೆ ನಗರ ಕೊಡಿಗೆಹಳ್ಳಿ ಪೊಲೀಸ್ ಠಾಣೆಗೆ ಹಾಗೂ ಎಸಿಬಿಗೆ ದೂರು ನೀಡಿದ್ದರು. ಆಂತರಿಕ ತನಿಖೆ ನಡೆಸಿ ಪ್ರಾಥಮಿಕ ತನಿಖಾ ವರದಿಯನ್ನು ನಗರ ಈಶಾನ್ಯ ವಿಭಾಗದ ಡಿಸಿಪಿ ಸಿ ಕೆ ಬಾಬಾ ಅವರು, ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರಿಗೆ ಸಲ್ಲಿಸಿದ್ದರು. ಮೇಲ್ನೋಟಕ್ಕೆ ಎಎಸ್ಐ ತಪ್ಪಿತಸ್ಥ ಎಂದು ಕಂಡು ಬಂದಿದ್ದರಿಂದ ಸಸ್ಪೆಂಡ್ ಮಾಡಿ ಎಸಿಬಿ ತನಿಖೆಗೆ ಶಿಫಾರಸು ಮಾಡಲಾಗಿತ್ತು.
ಭರತ್ ಶೆಟ್ಟಿ ಮೇಲೆ ವಂಚನೆ ಹಾಗೂ ಹಲ್ಲೆ ಕೇಸ್ ದಾಖಲಾಗಿತ್ತು. ಪ್ರಕರಣದಿಂದ ಮುಕ್ತಗೊಳಿಸಿ ನ್ಯಾಯಾಲಯಕ್ಕೆ ಬಿ ರಿಪೋರ್ಟ್ ಸಲ್ಲಿಸಲು ಎಎಸ್‌ಐ ದಯಾನಂದ ಸ್ವಾಮಿ 5 ಲಕ್ಷ ರೂ. ಲಂಚ ಪಡೆದಿದ್ದರು. ಅಲ್ಲದೆ, ತಮ್ಮ ಅಧಿಕಾರದ ಪ್ರಭಾವ ಬಳಸಿ ಉದ್ದೇಶಪೂರ್ವಕವಾಗಿವಾಗಿ ಪ್ರಕರಣ ದಾಖಲಿಸಿ ಹಣ ಸುಲಿಗೆ ಮಾಡಿದ ಆರೋಪ ಕೇಳಿ ಬಂದಿತ್ತು. ಈ ಸಂಬಂಧ ಭರತ್, ಎಎಸ್ಐ ವಿರುದ್ಧ ನಗರ ಪೊಲೀಸ್ ಆಯುಕ್ತರಿಗೆ ಹಾಗೂ ಎಸಿಬಿಗೆ ದೂರು ನೀಡಿದ್ದರು.
ಪ್ರಾಥಮಿಕ ತನಿಖೆಯಲ್ಲಿ ಎಸ್ಐಐ ಮೇಲೆ ಬಂದ ಆಪಾದನೆ ಮೇಲ್ನೊಟಕ್ಕೆ ಸಾಬೀತಾಗಿದ್ದು, ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿತ್ತು. ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳುವಂತೆ ಆಯುಕ್ತರು ಪತ್ರ ಬರೆದ ಬೆನ್ನಲೇ ಇಂದು ಎಸಿಬಿ ದಾಳಿ ನಡೆಸಿದೆ.