ಬೆಂಗಳೂರು: ಕರ್ನಾಟಕ ಬೋವಿ ಅಭಿವೃದ್ಧಿ ನಿಗಮದ ಪ್ರಧಾನ ವ್ಯವಸ್ಥಾಪಕರ ಮನೆ ಸೇರಿದಂತೆ 5 ಸ್ಥಳಗಳ ಮೇಲೆ ಭ್ರಷ್ಟಾಚಾರ ನಿಗ್ರಹ ಅಧಿಕಾರಿಗಳು ಗುರುವಾರ ದಾಳಿ ನಡೆಸಿದ್ದು, ಕೋಟಿಗಟ್ಟಲೆ ಅಕ್ರಮ ಆಸ್ತಿ ಪತ್ತೆಯಾಗಿದೆ. ಪ್ರಧಾನ ವ್ಯವಸ್ಥಾಪಕ ಡಾ.ನಾಗರಾಜಪ್ಪ ಬಿ.ಎಂ ಮನೆ ಸೇರಿದಂತೆ 5 ಸ್ಥಳಗಳ ಮೇಲೆ ಎಸಿಬಿ ದಾಳಿ ನಡೆದಿದೆ.
ಅಕ್ರಮ ಆಸ್ತಿಯ ಕುರಿತು ಮಾಹಿತಿ ಕಲೆ ಹಾಕಿದ ಎಸಿಬಿ ತಂಡ, ಕರ್ನಾಟಕ ಬೋವಿ ಅಭಿವೃದ್ಧಿ ನಿಗಮದ ಎಂಡಿ ಮನೆ, ವಿಜಯನಗರದಲ್ಲಿರುವ ಎಂ.ಸಿ.ಲೇಔಟ್‌ನಲ್ಲಿರುವ ನಾಗರಾಜಪ್ಪ ಅವರ ಸೋದರನ ಮನೆ, ಮಾಗಡಿ ರಸ್ತೆ ಸನ್‌ಪ್ಲವರ್ ಅಪಾರ್ಟ್‌ಮೆಂಟ್‌ನಲ್ಲಿನ ಪರಿಚಿತರ ವಾಸದ ಮನೆ, ಇವರಿಗೆ ಸೇರಿದ ಹೊಸಕೋಟೆ ತಾಲೂಕು ಬೆನ್ನಿಗಾನಹಳ್ಳಿಯ ವಾಸದ ಮನೆ ಹಾಗೂ ಸಂಬಂಧಿಕರ ಹಾರೋಕೊಪ್ಪೆ ಚೆನ್ನಪಟ್ಟಣ ತಾಲೂಕಿನ ವಾಸದ ಮನೆಯ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಲಾಗಿದೆ ಎಂದು ಅಪರಾಧ ಪತ್ತೆ ದಳದ ಅಧಿಕಾರಿಗಳು ತಿಳಿಸಿದ್ದಾರೆ.
ಪರಿಶೀಲನೆ ವೇಳ ಮಾಗಡಿ ರಸ್ತೆಯ ಸನ್‌ಫ್ಲವರ್ ಅರ್ಪಾಟ್‌ಮೆಂಟ್‌ನ 1 ಪ್ಲಾಟ್, ವಿಜಯನಗರ ಎಂ. ಸಿ. ಲೇಔಟ್‌ನಲ್ಲಿ 1 ಮನೆ, 1ಕಾರು, 1ದ್ವಿಚಕ್ರ ವಾಹನ, 26 ಸಾವಿರ ರೂ ಬೆಲೆ ಬಾಳುವ ಗೃಹೋಪಯೋಗಿ ವಸ್ತುಗಳು, ವಿವಿಧ ಬ್ಯಾಂಕ್ ಖಾತೆಗಳಲ್ಲಿ 19 ಲಕ್ಷ ಹಣ ದೊರಕಿದೆ ಎಂದಿದ್ದಾರೆ.
ಹೆಚ್ಚಿನ ಸ್ಥಳಗಳ ಮಾಹಿತಿ ಸಂಗ್ರಹ: ಪ್ರಕರಣದ ತನಿಖೆ ಮುಂದುವರೆದಿದ್ದು, ಸರ್ಕಾರಿ ನೌಕರರು ಹೊಂದಿರುವ ಆಸ್ತಿ - ಪಾಸ್ತಿಗಳ ಮೂಲದ ಬಗ್ಗೆ ತನಿಖೆ ಹಾಗೂ ದಾಖಲೆಗಳ ಪರಿಶೀಲನಾ ಕಾರ್ಯ ಹಾಗೂ ಸಂಬಂಧಪಟ್ಟ ಹೆಚ್ಚಿನ ಸ್ಥಳಗಳ ಮಾಹಿತಿ ಸಂಗ್ರಹಕ್ಕೆ ಮುಂದಾಗಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
(ಓದಿ: ಲಂಚ ಪಡೆಯುತ್ತಿದ್ದ ವೇಳೆ ಎಸಿಬಿ ಬಲೆಗೆ ಬಿದ್ದ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿ)