ಬೆಂಗಳೂರು: ಶುಕ್ರವಾರ ದಾಳಿ ನಡೆಸಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅವ್ಯವಹಾರ ಬಯಲಿಗೆಳೆದ ಭ್ರಷ್ಟಾಚಾರ ನಿಗ್ರಹ ದಳ ಇಂದು ಕೂಡಾ ಕಡತ ಪರಿಶೀಲನೆ ನಡೆಸಿದೆ. ಸುಮಾರು 50ಕ್ಕೂ ಹೆಚ್ಚು ಜನರ ತಂಡ ಬಿಡಿಎ ಕೇಂದ್ರ ಕಚೇರಿ ಮತ್ತು ಸಂಬಂಧಿತ ಕಚೇರಿಗಳ ಮೇಲೆ ದಾಳಿ ಮುಂದುವರೆಸಿದೆ.
ಬಿಡಿಎ ಕಚೇರಿ ಮೇಲೆ ಎಸಿಬಿ ದಾಳಿ: ಬಿಡಿಎ ಕೇಂದ್ರ ಕಚೇರಿಯಲ್ಲಿ ಸಾಕಷ್ಟು ಅವ್ಯವಹಾರಗಳು ನಡೆದಿರುವ ಮಾಹಿತಿ ಮೇರೆಗೆ ಅಧಿಕಾರಿಗಳು ಶುಕ್ರವಾರ ದಾಳಿ ನಡೆಸಿದ್ದರು. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ ಸಾಕಷ್ಟು ಹಣ ವಸೂಲಿ ಆರೋಪ ಕೇಳಿ ಬಂದಿತ್ತು. ಬಿಡಿಎ ಉಪಕಾರ್ಯದರ್ಶಿ 2, 3, 4ರಲ್ಲಿ ಇಂದೂ ಕೂಡ ಮಹತ್ವದ ದಾಖಲೆಗಳನ್ನು ಪರಿಶೀಲನೆ ಮಾಡಲಾಗುತ್ತಿದೆ. ಇಬ್ಬರು ಡಿ.ಸಿ.ಪಿ ಗಳ ನೇತೃತ್ವದಲ್ಲಿ ಹತ್ತಕ್ಕೂ ಹೆಚ್ಚು ಡಿ.ವೈ.ಎಸ್.ಪಿ ಸೇರಿದಂತೆ 40ಕ್ಕೂ ಹೆಚ್ಚು ಅಧಿಕಾರಿಗಳು ದಾಳಿ ನಡೆಸಿ ಕಡತಗಳ ಪರಿಶೀಲನೆ ನಡೆಸುತ್ತಿದ್ದಾರೆ.
ದಾಖಲೆ ಪರಿಶೀಲನೆ: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಭೂ ಸ್ವಾಧೀನ ವಿಭಾಗದ ಕಾರ್ಯದರ್ಶಿಗಳ ಕಚೇರಿಯ ಮೇಲೆ ಸ್ವಾಧೀನ ಜಾಗಕ್ಕೆ ಪರಿಹಾರ ರೂಪದಲ್ಲಿ ನಿವೇಶನ ಹಂಚಿಕೆಯಲ್ಲಿ ಅಕ್ರಮ ಹಾಗೂ ಪರಿಹಾರದ ಹಣ ನೀಡುವಲ್ಲಿ ವಿಳಂಬ ಬಗ್ಗೆ ಸಾರ್ವಜನಿಕ ವಲಯದಲ್ಲಿ ದೂರುಗಳು ಬಂದಿದ್ದವು. ಅಲ್ಲದೆ ಬಿಡಿಎ ವಿವಿಧ ವಿಭಾಗದಲ್ಲಿ ಸಾಕಷ್ಟು ಅಕ್ರಮಗಳು ಕೇಳಿಬಂದಿತ್ತು. ಈ ಸಂಬಂಧ ದಾಳಿ ನಡೆಸಿ ಅಧಿಕಾರಿಗಳು ನಿನ್ನೆಯಿಂದ ದಾಖಲೆಗಳ ಪರಿಶೀಲಿಸುತ್ತಿದ್ದಾರೆ.
ಬಿಡಿಎ ಕಚೇರಿ ಬಂದ್: ಇಂದು ಕೂಡ ಬಿಡಿಎ ಕೇಂದ್ರ ಕಚೇರಿ ಗೇಟ್ ಬಂದ್ ಮಾಡಿ ನೌಕರರನ್ನ ವಿಚಾರಣೆ ಮಾಡುತ್ತಿದ್ದಾರೆ. ಕಂಪ್ಯೂಟರ್ನಲ್ಲಿ ಇರುವ ಕಡತಗಳನ್ನು ಕೂಡ ಪರಿಶೀಲಿಸುತ್ತಿದ್ದಾರೆ. ಅಧಿಕಾರಿಗಳ ಮತ್ತು ನೌಕರರ ಬಳಿ ಹಣ ಪತ್ತೆಯಾಗಿದೆ ಎಂದೂ ಹೇಳಲಾಗುತ್ತಿದೆ. ಕೆಲ ರೈತರ ಬಳಿ ಹಣ ಪಡೆದುಕೊಂಡ ಬಗ್ಗೆ ಮಾಹಿತಿ ಹಿನ್ನೆಲೆ ಬಿಡಿಎಗೆ ಬಂದಿದ್ದ ಗ್ರಾಹಕರ ವಿಚಾರಣೆ ಕೂಡ ನಡೆಸಲಾಗುತ್ತಿದೆ. ಕಚೇರಿಯ ಒಳಗೆ ಬರುವವರು, ಹೋಗುವವರ ತಪಾಸಣೆಯನ್ನು ನಡೆಸುತ್ತಿದ್ದಾರೆ.
ಪ್ರಕರಣದ ಸಂಪೂರ್ಣ ವಿವರ
ಶುಕ್ರವಾರ ಬೆಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಮೇಲೆ ಎಸಿಬಿ ನಡೆಸಿದ ದಿಢೀರ್ ಮೆಗಾ ದಾಳಿಗೆ (ACB raid on BDA) ಒಂದು ಎಫ್ಐಆರ್ ಮೂಲ ಕಾರಣ ಎಂದು ಭ್ರಷ್ಟಾಚಾರ ನಿಗ್ರಹ ದಳದ ಮೂಲಗಳಿಂದ ತಿಳಿದು ಬಂದಿದೆ.
ಬೆಂಗಳೂರು ಅಭಿವೃದ್ಧಿ ಕೇಂದ್ರ ಅಕ್ರಮಗಳ ಅಡ್ಡೆಗಳಾಗಿರುವುದು ಕಚೇರಿಯಲ್ಲಿರುವ ಡಿಎಸ್-1, ಡಿಎಸ್-2, ಡಿಎಸ್-3, ಡಿಎಸ್-4 ಹಾಗೂ ಎಸ್.ಎಲ್.ಎ.ಓ ಕೊಠಡಿಗಳು. ಈ ಕೊಠಡಿಯೊಂದರಲ್ಲಿ ಇತ್ತಿಚೇಗೆ 1 ಕೋಟಿ 70 ಲಕ್ಷ ರೂ. ಲಂಚ ಪಡೆದು ಬಿಡಿಎ ಅಧಿಕಾರಿಗಳು ಮಹಿಳೆಯೊಬ್ಬರಿಗೆ ವಂಚಿಸಿದ್ದ ಕುರಿತು ಪ್ರಕರಣ ದಾಖಲಾಗಿತ್ತು. ಈ ದೂರಿನ ಆಧಾರದ ಮೇಲೆ ಎಸಿಬಿ ಶುಕ್ರವಾರ ದಾಳಿ ನಡೆಸಿತ್ತು. ದಾಳಿಯ ವೇಳೆ ನೂರಾರು ಕೋಟಿ ರೂ. ಮೌಲ್ಯದ ಅಕ್ರಮಗಳು ಪತ್ತೆಯಾಗಿವೆ ಎಂದು ಎನ್ನಲಾಗುತ್ತಿದೆ.
ನಿವೇಶನ ಹಂಚಿಕೆಯಲ್ಲಿ ಅಕ್ರಮ: ದಾಳಿ ವೇಳೆ ನಾಲ್ವರು ಉಪಕಾರ್ಯದರ್ಶಿಗಳು, ಭೂಸ್ವಾಧೀನ ವಿಭಾಗದ ಐವರು ಹಿರಿಯ ಅಧಿಕಾರಿಗಳಿಂದ ನಿವೇಶನ ಹಂಚಿಕೆ, ಭೂಸ್ವಾಧೀನ ಪರಿಹಾರ ವಿತರಣೆ ಅಕ್ರಮಕ್ಕೆ ಸಂಬಂಧಿಸಿದ ಕಡತಗಳನ್ನು ಎಸಿಬಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಅರ್ಹರಲ್ಲದ ಫಲಾನುಭವಿಗಳಿಗೂ ನಿವೇಶನ ಹಂಚಿಕೆ ಮಾಡಿರುವುದು ಈ ವೇಳೆ ಪತ್ತೆಯಾಗಿದೆ. ಕೆಲವು ಪ್ರಕರಣಗಳಲ್ಲಿ ಒಂದೇ ನಿವೇಶನ ಇಬ್ಬರಿಗೆ, ಮೂವರಿಗೆ ಹಂಚಿಕೆ ಮಾಡಿ ಆದೇಶಿಸಲಾಗಿದೆ ಎಂದು ಭ್ರಷ್ಟಾಚಾರ ನಿಗ್ರಹದಳ ಮೂಲಗಳು ಮಾಹಿತಿ ನೀಡಿವೆ.
ಒಂದೇ ಸಂಸ್ಥೆಗೆ 34 ಸೈಟ್ ಹಂಚಿಕೆ: ಫಲಾನುಭವಿಗಳು ಪಾವತಿಸಿದ ಹಣವನ್ನು ಪ್ರಾಧಿಕಾರದ ಬ್ಯಾಂಕ್ ಖಾತೆಗೆ ವರ್ಗಾಯಿಸದೇ ದುರ್ಬಳಕೆ ಮಾಡಿಕೊಳ್ಳಲಾಗಿದೆ. ಸೈಟ್ ಹಂಚಿಕೆಯಲ್ಲಿ ಡೆಪ್ಯುಟಿ ಸೆಕ್ರೆಟರಿಗಳೇ ಮಧ್ಯಸ್ಥಿಕೆದಾರರು ಎನ್ನುವುದನ್ನು ಪತ್ತೆ ಹಚ್ಚಿದ್ದೇವೆ. ಒಂದೇ ಸಂಸ್ಥೆಗೆ 34 ಸೈಟ್ಗಳನ್ನು ಹಂಚಿಕೆ ಮಾಡಿದ ದಾಖಲೆಗಳು ಸಹ ಸಿಕ್ಕಿವೆ. ಒಟ್ಟಿನಲ್ಲಿ ದಾಳಿಯ ವೇಳೆ ಕೋಟ್ಯಂತರ ರೂ. ಅವ್ಯವಹಾರಗಳು ಬೆಳಕಿಗೆ ಬಂದಿವೆ ಎಂದು ತಿಳಿಸಿದ್ದಾರೆ.