ಬಳ್ಳಾರಿ: ನಗರದ ರಾಯಲ್ ವೃತ್ತದಲ್ಲಿ ಇಂದು ಪೌರತ್ವ ತಿದ್ದುಪಡಿ ಕಾಯಿದೆ ವಿರೋಧಿಸಿ ನಡೆಸುತ್ತಿರುವ ಪ್ರತಿಭಟನೆಯನ್ನು ಹತ್ತಿಕ್ಕಲು ಬಿಜೆಪಿ ಸರ್ಕಾರವು 144 ಸೆಕ್ಷನ್ ಜಾರಿ ಮಾಡಿದೆ ಎಂದು ಸಿಪಿಐ ಮತ್ತು ಸಿಪಿಎಂ ಪಕ್ಷದಿಂದ ನೂರಾರು ಕಾರ್ಯಕರ್ತರು ಪ್ರತಿಭಟನೆ ಮಾಡಿದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಸಿಪಿಎಂ ಮತ್ತು ಸಿಪಿಐ ಸದಸ್ಯ ಸತ್ಯಬಾಬಾ, ದೇಶಾದ್ಯಂತ ಬಿಜೆಪಿ ಸರ್ಕಾರ ಮತ್ತು ಪೌರತ್ವ ಕಾಯಿದೆ ವಿರುದ್ಧ ಪ್ರತಿಭಟನೆ ಮಾಡಲಾಗುತ್ತಿದೆ. ಈ ದೇಶವಿರೋಧಿ ಕೆಲಸವನ್ನು ನಾವು ಖಂಡಿಸುತ್ತಿದ್ದೇವೆ ಎಂದು ತಿಳಿಸಿದರು.
ಸಿಪಿಎಂ ಮತ್ತು ಸಿಪಿಐ ಪಕ್ಷದ ಸದಸ್ಯರು ಪ್ರತಿಭಟನೆ ವೇಳೆ ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ಪೌರತ್ವ ಕಾಯಿದೆ ಹಿಂಪಡೆಯಬೇಕು ಎಂದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಬಳ್ಳಾರಿಯ ರಾಯಲ್ ವೃತ್ತ, ಮೋತಿ, ಎಸ್.ಪಿ.ಸರ್ಕಲ್, ಸಂಗಮ್, ಕೌಲ್ ಬಜಾರ್ ಪದೇಶಗಳಲ್ಲಿ ಮತ್ತು ಜಿಲ್ಲೆಯ ವಿವಿಧ ತಾಲೂಕಿನಲ್ಲಿ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯನ್ನು ಭದ್ರತೆಯ ದೃಷ್ಟಿಯಿಂದ ನಿಯೋಜನೆ ಮಾಡಲಾಗಿದೆ. 144 ಸೆಕ್ಷನ್ ಮೂರು ದಿನಗಳವರೆಗೆ ಜಾರಿಯಲ್ಲಿದೆ. ವಿವಿಧ ತಾಲೂಕಿನಲ್ಲಿ ಒಟ್ಟು 1,500 ಪೊಲೀಸ್ ಅಧಿಕಾರಿಗಳು, ಪೊಲೀಸ್ ಸಿಬ್ಬಂದಿ, ಹೋಮ್ ಗಾರ್ಡ್ ನಿಯೋಜನೆ ಮಾಡಲಾಗಿದೆ ಎಂದು ಎಸ್ಪಿ ಸಿ.ಕೆ ಬಾಬಾ ತಿಳಿಸಿದರು.
ಇನ್ನು ಪ್ರತಿಭಟನೆ ವೇಳೆ ಸಾಕಷ್ಟು ಟ್ರಾಫಿಕ್ ಸಮಸ್ಯೆ ಉಂಟಾಯಿತು. ಇದರಿಂದ ಆಂಬ್ಯುಲೆನ್ಸ್ ಸಂಚಾರಕ್ಕೆ ತೊಂದರೆ ಉಂಟಾಗಿದ್ದು ರೋಗಿಗಳು ಪರದಾಡುವ ಪರಿಸ್ಥಿತಿ ನಿರ್ಮಾಣವಾಯಿತು. ಪ್ರತಿಭಟನಾ ಸ್ಥಳಕ್ಕೆ ನಗರ ಡಿವೈಎಸ್ಪಿ ಕೆ.ರಾಮರಾವ್, ಸಿಪಿಐ ನಾಗರಾಜ್, ಗಾಯತ್ರಿ, ರಘು ಕುಮಾರ್ ಮತ್ತು ಪಿ.ಎಸ್.ಐ ನಾಗರಾಜ್ ಮತ್ತು 70 ಪೊಲೀಸ್ ಸಿಬ್ಬಂದಿ ಹಾಜರಿದ್ದರು.