ಹೊಸಪೇಟೆ: ಸಚಿವ ಆನಂದ ಸಿಂಗ್ ತಮ್ಮ ಸ್ವಂತ ವೆಚ್ಚದಲ್ಲಿ ಶಂಕರ ಆನಂದ ಸಿಂಗ್ ಫೌಂಡೇಶನ್ ವತಿಯಿಂದ ಇಂದು ಸರ್ಕಾರಿ ಆಸ್ಪತ್ರೆಗೆ ಉಚಿತವಾಗಿ ಆಂಬ್ಯುಲೆನ್ಸ್ ವಿತರಣೆ ಮಾಡಿದರು.
ಸಚಿವರ ಪುತ್ರ ಸಿದ್ಧಾರ್ಥ ಸಿಂಗ್ ಅವರು ಆ್ಯಂಬ್ಯುಲೆನ್ಸ್ಗೆ ಪೂಜೆ ಸಲ್ಲಿಸಿದರು. ಬಳಿಕ ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ಸಲೀಂ ಅವರಿಗೆ ವಾಹನದ ಕೀಲಿ ಕೈ ಹಾಗೂ ದಾಖಲೆಗಳನ್ನು ಹಸ್ತಾಂತರ ಮಾಡಲಾಯಿತು.
ಕೋವಿಡ್ ತುರ್ತು ಸಂದರ್ಭದಲ್ಲಿ ಆ್ಯಂಬ್ಯುಲೆನ್ಸ್ ಸೇವೆ ಅವಶ್ಯಕತೆ ಇದೆ. ಹಾಗಾಗಿ 16.50 ಲಕ್ಷ ರೂ. ವೆಚ್ಚದಲ್ಲಿ ಆಸ್ಪತ್ರೆಗೆ ಆ್ಯಂಬ್ಯುಲೆನ್ಸ್ ನೀಡಲಾಗಿದೆ. ಜನರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಅರಣ್ಯ ಸಚಿವ ಆನಂದ ಸಿಂಗ್ ತಿಳಿಸಿದರು.
ತಾಲೂಕು ಪಂಚಾಯಿತಿ ಅಧ್ಯಕ್ಷೆ ನಾಗವೇಣಿ ಬಸವರಾಜ, ಮುಖಂಡರಾದ ಅಯ್ಯಾಳಿ ತಿಮ್ಮಪ್ಪ, ಜಂಬಯ್ಯ ನಾಯಕ ಇನ್ನಿತರರು ಉಪಸ್ಥಿತರಿದ್ದರು.