ಹೊಸಪೇಟೆ, ವಿಜಯನಗರ : ರಾಜ್ಯ ಬಿಜೆಪಿ ಸರ್ಕಾರದಲ್ಲಿ ಪ್ರಮುಖ ಬೆಳವಣಿಗೆಗಳು ನಡೆಯುತ್ತಿವೆ. ಇದರ ಜೊತೆಗೆ ಮುಂದಿನ ವರ್ಷ ವಿಧಾನಸಭಾ ಚುನಾವಣೆಗಳೂ ನಡೆಯುತ್ತಿದ್ದು ಈ ಹಿನ್ನೆಲೆಯಲ್ಲಿ ಇಂದು ವಿಜಯನಗರ ಜಿಲ್ಲೆಯ ಹೊಸಪೇಟೆಯ ಸಮೀಪದ ಆಂಜನೇಯ ಭಟ್ಟರಹಳ್ಳಿಯಲ್ಲಿ ಬಿಜೆಪಿ ಕಾರ್ಯಕಾರಿಣಿ ಸಭೆ ನಡೆಯಲಿದೆ.
ಎರಡು ದಿನ ನಡೆಯುವ ಈ ಕಾರ್ಯಕಾರಿಣಿ ಸಭೆ ಮಧ್ಯಾಹ್ನ 2.30ಕ್ಕೆ ಆರಂಭವಾಗಲಿದ್ದು, ಬಿಜೆಪಿ ರಾಜ್ಯಾಧ್ಯಕ್ಷರು ಮತ್ತು ಸಂಸದರೂ ಆದ ನಳಿನ್‍ಕುಮಾರ್ ಕಟೀಲ್, ಸಿಎಂ ಬಸವರಾಜ ಬೊಮ್ಮಾಯಿ, ಕರ್ನಾಟಕದ ಉಸ್ತುವಾರಿಗಳು ಹಾಗೂ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ಅರುಣ್ ಸಿಂಗ್ ಅವರು ಧ್ವಜಾರೋಹಣವನ್ನು ನೆರವೇರಿಸಲಿದ್ದಾರೆ ಮತ್ತು ವಿಶೇಷ ರಾಜ್ಯ ಕಾರ್ಯಕಾರಿಣಿ ಸಭೆಯ ಉದ್ಘಾಟನೆಯನ್ನು ಸಿಎಂ ಬೊಮ್ಮಾಯಿ ಅವರು ನೆರವೇರಿಸಲಿದ್ದಾರೆ.
ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಹಾಗೂ ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವೆಯಾದ ಶಶಿಕಲಾ ಜೊಲ್ಲೆ ಕಾರ್ಯಕಾರಿಣಿ ಸಭೆಯ ಉಸ್ತುವಾರಿ ನೋಡಿಕೊಳ್ಳುತ್ತಿದ್ದು, ಕೆ.ಎಸ್.ಈಶ್ವರಪ್ಪ ರಾಜೀನಾಮೆ, ಹಿಜಾಬ್ ವಿವಾದ ಮತ್ತು ಹಲಾಲ್ ವಿವಾದಗಳ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆ ಇದೆ.
128 ಪುಸ್ತಕಗಳ ಬಿಡುಗಡೆ : ಕಾರ್ಯಕಾರಿಣಿ ಸಭೆಗೆ ಆಗಮಿಸಿರುವ ಸಿಎಂ ಬೊಮ್ಮಾಯಿ, ಕನ್ನಡ ವಿಶ್ವವಿದ್ಯಾಲಯದಲ್ಲಿ ನಿರ್ಮಿಸಲಾಗಿರುವ ನೂತನ ಕಟ್ಟಡಗಳನ್ನು ಉದ್ಘಾಟಿಸಿದರು. ವಿವಿಯ ಮಂಟಪ ಸಭಾಂಗಣದಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಕಟ್ಟಡಗಳಾದ ಓನಕೆ ಓಬವ್ವ ಅಧ್ಯಯನ ಕೇಂದ್ರ, ವಿದ್ಯಾರ್ಥಿಗಳು ಎರಡು ವಸತಿ ನಿಲಯಗಳು, ಪ್ರಸಾರಂಗದ ನವೀಕೃತ ಚಿತ್ತಾರ ಕಟ್ಟಡ, ಪತ್ರಿಕೋದ್ಯಮ ವಿಭಾಗದ ಕಟ್ಟಡಗಳನ್ನು ಸಿಎಂ ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ 128 ಪುಸ್ತಕಗಳನ್ನು ಬಿಡುಗಡೆಗೊಳಿಸಿದರು. ಇದರ ಜೊತೆಗೆ ವಿವಿಯ ಸಂಚಾರ ಪುಸ್ತಕ ಮಾರಾಟ ವಾಹನವನ್ನು ಸಹ ಲೋಕಾರ್ಪಣೆಗೊಳಿಸಿದರು.
ಈ ಸಂದರ್ಭದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ, ಸಾರಿಗೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವ ಬಿ.ಶ್ರೀರಾಮುಲು, ಉನ್ನತ ಶಿಕ್ಷಣ, ಐಟಿ-ಬಿಟಿ, ವಿಜ್ಞಾನ- ತಂತ್ರಜ್ಞಾನ, ಕೌಶಲ್ಯ ಅಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಗಳ ಸಚಿವ ಡಾ.ಸಿ.ಎನ್.ಅಶ್ವಥ್ ನಾರಾಯಣ, ಮುಜರಾಯಿ, ಹಜ್ ಮತ್ತು ವಕ್ಫ್ ಸಚಿವರು ಹಾಗೂ ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವರಾದ ಶಶಿಕಲಾ ಜೊಲ್ಲೆ, ಸಂಸದ ಅಣ್ಣಾಸಾಹೇಬ ಜೊಲ್ಲೆ, ಶಾಸಕರಾದ ಸೋಮಶೇಖರ್ ರೆಡ್ಡಿ, ವೈ.ಎಂ.ಸತೀಶ್, ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ.ಸ.ಚಿ.ರಮೇಶ,ವಿಜಯನಗರ ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್, ಎಸ್ಪಿ ಡಾ.ಅರುಣ್ ಎಸ್.ಕೆ.ಕುಲಸಚಿವ ಡಾ.ಎ.ಸುಬ್ಬಣ್ಣ ರೈ, ಪ್ರಸಾರಂಗ ವಿಭಾಗದ ನಿರ್ದೇಶಕರಾದ ಡಾ.ಶೈಲಜಾ ಎಂ.ಹಿರೇಮಠ, ವಿವಿಯ ತಾಂತ್ರಿಕ ವಿಭಾಗದ ಮುಖ್ಯಸ್ಥ ಜೆ.ಎಸ್.ನಂಜಯ್ಯನವರ್ ಸೇರಿದಂತೆ ಅನೇಕರು ಇದ್ದರು.
ಇದನ್ನೂ ಓದಿ: ರಾಜಕಾರಣದಲ್ಲಿ ಯಾರು ಸತ್ಯವಂತರು?: ಜೆಡಿಎಸ್ ವರಿಷ್ಠ ಹೆಚ್.ಡಿ ದೇವೇಗೌಡ ಪ್ರಶ್ನೆ