ಬಳ್ಳಾರಿ : ಜಿಲ್ಲಾಡಳಿತವು ಖನಿಜ ನಿಧಿ ಅನುದಾನ ಬಳಸಿಕೊಂಡು ವಿಶೇಷ ಚೇತನರ ಆರೋಗ್ಯದ ಹಿತದೃಷ್ಟಿಯಿಂದ ಮತ್ತು ಅವರ ಆರೋಗ್ಯ ಉತ್ತಮಪಡಿಸಿಕೊಳ್ಳಲು ಅನುಕೂಲವಾಗುವ ನಿಟ್ಟಿನಲ್ಲಿ ಹೆಚ್ಚುವರಿ ಮಾಸಿಕ ಪಿಂಚಣಿ ವಿಶೇಷ ಯೋಜನೆಯೊಂದನ್ನು ಜಾರಿಗೆ ತರುವ ಮೂಲಕ ಗಮನ ಸೆಳೆದಿದೆ.
ಈ ಯೋಜನೆಗೆ 'ಆಶಾಕಿರಣ' ಎಂದು ನಾಮಕರಣ ಮಾಡಲಾಗಿದ್ದು, ಪ್ರಾಯೋಗಿಕವಾಗಿ ಬಳ್ಳಾರಿ ಜಿಲ್ಲೆಯಲ್ಲಿ ಅತಿಹೆಚ್ಚು ಗಣಿಬಾಧಿತವಾಗಿರುವ ಸಂಡೂರು ತಾಲೂಕಿನಲ್ಲಿ ಈ ಯೋಜನೆ ಅನುಷ್ಠಾನಗೊಳಿಸಲಾಗಿದೆ. ನಂತರ ಉಳಿದೆಡೆ ವಿಸ್ತರಿಸಲು ಉದ್ದೇಶಿಸಲಾಗಿದೆ.
ಬಳ್ಳಾರಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಖನಿಜ ಪ್ರತಿಷ್ಠಾನ ಟ್ರಸ್ಟ್ ಅನುದಾನದಲ್ಲಿ, ವಿಶೇಷ ಚೇತನರ ಆರೋಗ್ಯದ ಹಿತ ದೃಷ್ಟಿಯಿಂದ ಕರ್ನಾಟಕ ಸರ್ಕಾರದಿಂದ ಬರುತ್ತಿರುವ ಮಾಸಿಕ ಪಿಂಚಣಿ ಸೌಲಭ್ಯದ ಜೊತೆಗೆ 'ಆಶಾಕಿರಣ' ಯೋಜನೆಯಡಿ ಹೆಚ್ಚುವರಿಯಾಗಿ ಮಾಸಿಕ ಪಿಂಚಣಿ ಸೌಲಭ್ಯವನ್ನು ನೀಡಲಾಗುತ್ತದೆ.
ಕರ್ನಾಟಕ ಸರ್ಕಾರದ ವತಿಯಿಂದ ಪ್ರಸ್ತುತ ಶೇ.40 ರಿಂದ ಶೇ.75 ರವರೆಗಿನ ವಿಶೇಷ ಚೇತನರಿಗೆ 600 ರೂ.ಗಳು ನೀಡಲಾಗುತ್ತಿದೆ. ಈ ಸದರಿ ಮೊತ್ತದ ಜೊತೆಗೆ ಜಿಲ್ಲಾ ಖನಿಜ ಪ್ರತಿಷ್ಠಾನ ನಿಧಿಯಿಂದ ಹೆಚ್ಚುವರಿಯಾಗಿ 500 ರೂ.ಗಳನ್ನು ನೀಡಲಾಗುವುದು. ಇದರಿಂದಾಗಿ ಫಲಾನುಭವಿ ಕೈಗೆ ಪಿಂಚಣಿ ಮೊತ್ತ 1,100 ರೂ.ಗಳು ಸೇರಲಿದೆ.
ಪ್ರಸ್ತುತ ಶೇ.75ಕ್ಕಿಂತ ಮೇಲ್ಪಟ್ಟ ವಿಶೇಷ ಚೇತನರಿಗೆ ರಾಜ್ಯ ಸರಕಾರವು 1400 ರೂ.ಗಳ ಮಾಸಿಕ ಪಿಂಚಣಿ ನೀಡುತ್ತಿದ್ದು, ಇದರ ಜೊತೆಗೆ ಜಿಲ್ಲಾ ಖನಿಜ ಪ್ರತಿಷ್ಠಾನ ನಿಧಿಯಿಂದ ಹೆಚ್ಚುವರಿಯಾಗಿ 700 ರೂ.ಗಳನ್ನು ನೀಡಲಾಗುತ್ತಿದೆ. ಇದರಿಂದಾಗಿ ಫಲಾನುಭವಿಗಳಿಗೆ ಒಟ್ಟು ಪಿಂಚಣಿ 2,100 ರೂ. ಕೈ ಸೇರಲಿವೆ. ಸಂಡೂರು ತಾಲೂಕಿನಲ್ಲಿ ಸದ್ಯ 3408 ವಿಶೇಷ ಚೇತನರಿದ್ದಾರೆ.
ಈ ಪಿಂಚಣಿ ಮೊತ್ತವನ್ನು ಪಡೆದುಕೊಂಡ ಫಲಾನುಭವಿಗಳು ತಮ್ಮ ಆರೋಗ್ಯ ಸ್ಥಿತಿಯನ್ನು ಉತ್ತಮ ರೀತಿಯಲ್ಲಿ ಕಾಪಾಡಿಕೊಳ್ಳಲು ಮಾತ್ರ ಬಳಸಿಕೊಳ್ಳಬೇಕು ಎಂಬ ಷರತ್ತನ್ನು ವಿಧಿಸಲಾಗಿದೆ. ಈಗಾಗಲೇ ಪ್ರಾಯೋಗಿಕವಾಗಿ ಅನುಷ್ಠಾನಗೊಳಿಸಲಾಗುತ್ತಿರುವ ಸಂಡೂರಿನಲ್ಲಿ ಫಲಾನುಭವಿಗಳಿಗೆ ಇದಕ್ಕೆ ಸಂಬಂಧಿಸಿದ ತಿಳಿವಳಿಕೆ ಪತ್ರಗಳನ್ನು ಅಧಿಕಾರಿಗಳು ನೀಡುವುದರ ಮೂಲಕ ಅರಿವು ಮೂಡಿಸುತ್ತಿದ್ದಾರೆ.
ಸದರಿ ಯೋಜನೆಯಲ್ಲಿ ಹೆಚ್ಚುವರಿಯಾಗಿ ಮಾಸಿಕ ಪಿಂಚಣಿಯನ್ನು ಪಡೆಯಲು ಕಡ್ಡಾಯವಾಗಿ ಬ್ಯಾಂಕ್ ಖಾತೆಯನ್ನು ಹೊಂದಿರತಕ್ಕದ್ದು. ಬ್ಯಾಂಕ್ ಖಾತೆಯನ್ನು ಹೊಂದದೆ ಇರುವವರು ಶೀಘ್ರವಾಗಿ ಬ್ಯಾಂಕ್‍ನಲ್ಲಿ ಹೊಸ ಉಳಿತಾಯ ಖಾತೆಯನ್ನು ತೆರೆದು ಅದರ ವಿವರವನ್ನು ಸಂಡೂರು ತಹಶೀಲ್ದಾರ್ ಕಚೇರಿಗೆ ಸಲ್ಲಿಸತಕ್ಕದ್ದು.
ಬ್ಯಾಂಕ್ ಖಾತೆ ಹೊಂದಿರುವ ಫಲಾನುಭವಿಗಳಿಗೆ ಡಿಬಿಟಿ ಮೂಲಕ ಹಾಗೂ ಅಂಚೆ ಇಲಾಖೆಯಲ್ಲಿ ಖಾತೆ ಹೊಂದಿರುವವರಿಗೆ ಇಎಂಒ ಮೂಲಕ ಹೆಚ್ಚುವರಿ ಮಾಸಿಕ ಪಿಂಚಣಿ ಹಣವನ್ನು ಜಮಾ ಮಾಡಲಾಗುತ್ತಿದೆ. ವಿಶೇಷ ಚೇತರಿಗೆ ಏನಾದರೂ ಗೊಂದಲಗಳಿದ್ದಲ್ಲಿ ಹಾಗೂ ಹೆಚ್ಚಿನ ಮಾಹಿತಿಗೆ ಬಳ್ಳಾರಿ ಜಿಲ್ಲಾಧಿಕಾರಿಗಳ ಕಚೇರಿಯ ಕಂಟ್ರೋಲ್ ರೂಂ ದೂ: 08392-277100 ಮತ್ತು ಸಂಡೂರು ತಹಶೀಲ್ದಾರ್ ಕಛೇರಿಯ ದೂ: 08395-260241 ಸಂಪರ್ಕಿಸಬಹುದಾಗಿದೆ.