ಚಿಕ್ಕೋಡಿ: 4 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾದ ಕಾಲೇಜು ಕಟ್ಟಡದ ಛಾವಣಿ ಸಿಮೆಂಟ್ ಸೀಲಿಂಗ್ ಕಿತ್ತುಹೋಗಿ ವಿದ್ಯಾರ್ಥಿಗಳ ತಲೆ ಮೇಲೆ ಬಿಳ್ಳುತ್ತಿದ್ದು, ಪ್ರಾಣ ಭಯದಲ್ಲೇ ಪಾಠ ಕೇಳುವ ದುಃಸ್ಥಿತಿ ಎದುರಾಗಿದೆ.
ಬೆಳಗಾವಿ ಜಿಲ್ಲೆಯ ರಾಯಬಾಗ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕಟ್ಟಡವನ್ನು 4 ಕೋಟಿ ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಿಸಲಾಗಿದೆ. ಆದರೆ, ಕಾಮಗಾರಿಗೆ ಕಳಪೆ ಗುಣಮಟ್ಟದ ವಸ್ತುಗಳನ್ನು ಬಳಕೆ ಮಾಡಿರೋದ್ರಿಂದ ಉದ್ಘಾಟನೆಗೂ ಮುನ್ನವೇ ಕಟ್ಟಡದ ಒಳ ಛಾವಣಿ ಸೀಲಿಂಗ್ ಕಿತ್ತು ಬೀಳುತ್ತಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಹಾನಿ ಸಂಭವಿಸಿಲ್ಲ.
ರಾಯಬಾಗ ಪಟ್ಟಣದ ಸರ್ಕಾರಿ ಕಾಲೇಜಿನಲ್ಲಿ ಒಟ್ಟು 1,800 ಕ್ಕೂ ಅಧಿಕ ವಿದ್ಯಾರ್ಥಿಗಳು ದಾಖಲಾಗಿದ್ದರು. ಆದರೆ, ಇದೀಗ ಕಟ್ಟಡದ ಛಾವಣಿ ಕಳಚಿಕೊಂಡು ಬೀಳುತ್ತಿರುವ ಪರಿಣಾಮ ಪೋಷಕರು ತಮ್ಮ ಮಕ್ಕಳನ್ನು ಬೇರೆ ಕಾಲೇಜುಗಳಿಗೆ ದಾಖಲಿಸುತ್ತಿದ್ದಾರೆ. ಕೋಟಿಗಟ್ಟಲೇ ಸರ್ಕಾರದ ಅನುದಾನವನ್ನು ವ್ಯಯಿಸಿ ಹೊಸದಾಗಿ ನಿರ್ಮಿಸಿದ ಕಟ್ಟಡದಲ್ಲೇ ವಿದ್ಯಾರ್ಥಿಗಳು ಕುಳಿತು ಪಾಠ ಕೇಳಲು ಹೆದರುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದು ಶಾಲಾ ಆಡಳಿತ ಮಂಡಳಿಗೆ ತಲೆನೋವಾಗಿ ಪರಿಣಮಿಸಿದೆ.
ಅವಧಿ ಮುಗಿದು 2 ವರ್ಷ ಕಳೆದರೂ ಪೂರ್ಣಗೊಳ್ಳದ ಕಾಮಗಾರಿ:
ಜಿಲ್ಲಾಡಳಿತದ ವ್ಯಾಪ್ತಿಗೆ ಬರುವ ನಿರ್ಮಿತಿ ಕೇಂದ್ರದ ಅಧಿಕಾರಿಗಳು 2019-20ನೇ ಸಾಲಿನಲ್ಲಿ ಕಾಮಗಾರಿ ಮುಗಿಸಿ ಕಾಲೇಜು ಆಡಳಿತ ಮಂಡಳಿಗೆ ಕೊಡಬೇಕಿತ್ತು. ಆದ್ರೆ, ಗುತ್ತಿಗೆದಾರರ ಯಡವಟ್ಟಿನಿಂದಾಗಿ ಕಾಲೇಜಿನ ಕೆಲಸ - ಕಾರ್ಯಗಳು ಬಾಕಿ ಉಳಿದುಕೊಂಡಿವೆ. ಇನ್ನೂ ಪ್ಲಂಬಿಗ್, ಎಲೆಕ್ಟ್ರಿಕಲ್ ವರ್ಕ್ ಸೇರಿದಂತೆ ಹಲವು ಕೆಲಸಗಳು ಬಾಕಿ ಇವೆ. ಹೀಗಾಗಿ ಕಾಲೇಜು ಪ್ರಾಚಾರ್ಯರರು ಕೂಡ ಕಾಲೇಜನ್ನು ತಮ್ಮ ಸುಪರ್ದಿಗೆ ತೆಗೆದುಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ.
ಸರ್ಕಾರಿ ಕಾಲೇಜು ಕಟ್ಟಡ ನೆಲಸಮ :
ಸರ್ಕಾರಿ ಕಾಲೇಜು ಕಟ್ಟಡದ ಕಾಮಗಾರಿ ಗುತ್ತಿಗೆ ಪಡೆದುಕೊಂಡಿದ್ದ ಗುತ್ತಿಗೆದಾರ ಹಾಗೂ ಆತನಿಗೆ ಸಹಕರಿಸಿದ ಸಂಬಂಧಿಸಿದ ಅಧಿಕಾರಿಗಳು ವಿರುದ್ದ ಕ್ರಿಮಿನಲ್ ಕೇಸ್ ದಾಖಲಿಸಬೇಕು. ಇದರ ಜೊತೆಗೆ ಕಾಲೇಜು ಕಟ್ಟಡ ಸಂಪೂರ್ಣವಾಗಿ ನೆಲಸಮ ಮಾಡಿ ಹೊಸ ಕಟ್ಟಡ ನಿರ್ಮಿಸಿಕೊಡುವಂತೆ ಸಾರ್ವಜನಿಕರು ಒತ್ತಾಯ ಮಾಡಿದ್ದಾರೆ.