ಬೆಳಗಾವಿ/ಬಾಗಲಕೋಟೆ: ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ನಿಮಿತ್ತ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಧ್ವಜಾರೋಹಣ ನೇರವೆರಿಸಿದರು. ಬಳಿಕ ರಾಷ್ಟ್ರಗೀತೆ ಮೂಲಕ ಗೌರವ ಸಲ್ಲಿಸಲಾಯಿತು.
ಧ್ವಜಾರೋಹಣದ ಬಳಿಕ ಕಾರಜೋಳ ಪಥ ಸಂಚಲನ ವೀಕ್ಷಿಸಿದರು. ಸಶಸ್ತ್ರ ಪಡೆಗಳು, ವಿದ್ಯಾರ್ಥಿಗಳು ಆಕರ್ಷಕ ಪಥಸಂಚಲನ ಮಾಡಿದರು. ಕಾರ್ಯಕ್ರಮದಲ್ಲಿ ಶಾಸಕರಾದ ಅನಿಲ್ ಬೆನಕೆ, ಅಭಯ ಪಾಟೀಲ್, ಸಂಸದೆ ಮಂಗಳ ಅಂಗಡಿ, ಕರಕುಶಲ ನಿಗಮದ ಅಧ್ಯಕ್ಷ ಮಾರುತಿ ಅಸ್ಟಗಿ, ಡಿಸಿ ನಿತೇಶ ಪಾಟೀಲ್, ಪೊಲೀಸ್ ಕಮಿಷನರ್ ಎಂ.ಬಿ.ಬೋರಲಿಂಗಯ್ಯಾ, ಎಸ್ ಸಂಜೀವ್ ಪಾಟೀಲ್, ಜಿಪಂ ಸಿಇಒ ದರ್ಶನ, ಪಾಲಿಕೆ ಕಮಿಷನರ್ ರುದ್ರೇಶ ಘಾಳಿ ಭಾಗಿಯಾಗಿದ್ದರು.
ಬಳಿಕ ಮಾತನಾಡಿದ ಕಾರಜೋಳ, ಇವತ್ತು ಸ್ವಾತಂತ್ರ್ಯ ತಂದುಕೊಟ್ಟ ಎಲ್ಲ ಮಹನಿಯರನ್ನ ಸ್ಮರಿಸಬೇಕು, ಗೌರವಿಸಬೇಕು. ನಮ್ಮ ಪೂರ್ವಜರ ತ್ಯಾಗ, ಬಲಿದಾನ, ಆತ್ಮಾರ್ಪಣೆ ಫಲದಿಂದ ನಮಗೆ ಸ್ವಾತಂತ್ರ್ಯ ಸಿಕ್ಕಿದೆ. ವಿವಿಧತೆಯಲ್ಲಿ ಏಕತೆ, ಏಕತೆಯಲ್ಲಿ ಅಖಂಡತೆ ಪ್ರತಿಪಾದಿಸುವ ದೇಶ ನಮ್ಮದು.
ಸ್ವಾತಂತ್ರ್ಯ ಹೋರಾಟಕ್ಕೆ ಕನ್ನಡಿಗರ, ಬೆಳಗಾವಿ ಜಿಲ್ಲೆಯ ಪಾತ್ರ ಪ್ರಮುಖವಾಗಿದೆ. ಕಿತ್ತೂರು ರಾಣಿ ಚೆನ್ನಮ್ಮ, ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಸೇರಿ ಸ್ವಾತಂತ್ರ್ಯ ಹೋರಾಟಗಾರರ ಸ್ಮರಣೆ ಮಾಡಬೇಕು. ಹರ್ ಘರ್ ತಿರಂಗಾ ಯೋಜನೆ ಯಶಸ್ವಿ ಆಗಿದೆ. ಕುಡಿವ ನೀರಿನ ಮಹದಾಯಿ ಯೋಜನೆ ಅನುಷ್ಠಾನಕ್ಕೆ ಕಾಲ ಸನ್ನಿತವಾಗಿದೆ ಎಂದರು.
ಬಾಗಲಕೋಟೆ ಧ್ವಜಾರೋಹಣ : ಒಂದೇ ಬಾರಿಗೆ ರಾಷ್ಟ್ರಧ್ವಜ ಹಾರದ ಹಿನ್ನೆಲೆ ಕೆಳಗೆ ಇಳಿಸಿ ನಂತರ ಮತ್ತೆ ಧ್ವಜಾರೋಹಣ ನೆರವೇರಿಸಿದ ಘಟನೆ ಬಾಗಲಕೋಟೆ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಿತು. ಜಿಲ್ಲಾ ಉಸ್ತುವಾರಿ ಸಚಿವರಾದ ಸಿ ಸಿ ಪಾಟೀಲ್ ಧ್ವಜಾರೋಹಣ ಮಾಡುತ್ತಿರುವ ಸಮಯದಲ್ಲಿ ಎಷ್ಟೇ ಪ್ರಯತ್ನ ಮಾಡಿದರೂ ಧ್ವಜ ಹಾರಲಿಲ್ಲ.
ಇದರಿಂದ ಇರುಸು ಮುರುಸುಗೊಂಡ ಸಚಿವರು ಸುಮ್ಮನಾದರು. ಆಗ ಸೇವಾದಳದ ಸಿಬ್ಬಂದಿ ಹಾರಿಸಲು ಪ್ರಯತ್ನ ಪಟ್ಟರು. ಬಳಿಕ ರಾಷ್ಟ್ರಧ್ವಜವನ್ನ ಕೆಳಗೆ ಎಳೆದು ಸರಿ ಮಾಡಿ ಧ್ವಜಾರೋಹಣ ನೇರವೇರಿಸಲಾಯಿತು.
ಈ ಸಂದರ್ಭದಲ್ಲಿ ಶಾಸಕರಾದ ವೀರಣ್ಣ ಚರಂತಿಮಠ, ವಿಧಾನ ಪರಿಷತ್ ಸದಸ್ಯ ಪಿ.ಹೆಚ್. ಪೂಜಾರ್, ಸಂಸದ ಪಿ. ಸಿ. ಗದ್ದಿಗೌಡರ್ ಸೇರಿದಂತೆ ಜನ ಪ್ರತಿನಿಧಿಗಳು, ಅಧಿಕಾರಿಗಳು ಉಪಸ್ಥಿತರಿದ್ದರು. ನಂತರ ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆದವು. ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಜಿಲ್ಲಾಡಳಿತ ವತಿಯಿಂದ ಸನ್ಮಾನಿಸಲಾಯಿತು.
ಇದನ್ನೂ ಓದಿ: ಶಕ್ತಿಧಾಮ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಶಿವ ರಾಜಕುಮಾರ್ ದಂಪತಿ ಭಾಗಿ