ಚಿಕ್ಕೋಡಿ: ಶಾಸಕ ಶ್ರೀಮಂತ್ ಪಾಟೀಲ್ ವಿರುದ್ಧ 10 ಎಕರೆ ಜಮೀನು ಅತಿಕ್ರಮಣ ಆರೋಪ ಕೇಳಿ ಬಂದಿದೆ. ಇದನ್ನು ಪ್ರಶ್ನಿಸಲು ಮುಂದಾದ ಜಮೀನು ಮಾಲೀಕನಿಗೆ ಶಾಸಕರ ಪುತ್ರರಿಂದ ಜೀವ ಬೆದರಿಕೆ ಬಂದ ಹಿನ್ನೆಲೆ ಕಾಗವಾಡ ಪೊಲೀಸ್ ಠಾಣೆಯಲ್ಲಿ ಶಾಸಕ ಸೇರಿ ಮೂವರು ಪುತ್ರರ ವಿರುದ್ಧ ದೂರು ದಾಖಲಾಗಿದೆ.
ಕಾಗವಾಡ ತಾಲೂಕಿನ ಕೆಂಪವಾಡ ಗ್ರಾಮದ ದೇವದಾಸ್ ದೊಂಡಿಬಾ ಶೇರ್ಖಾನೆ ಎಂಬುವವರು ಮೇಲೆ ಶಾಸಕರ ಪುತ್ರರು ಹಲ್ಲೆಗೆ ಮುಂದಾಗಿದ್ದಲ್ಲದೇ ಜೀವ ಬೆದರಿಕೆ ಹಾಕಿರುವ ಆರೋಪ ಕೇಳಿ ಬಂದಿದೆ. ಹೀಗಾಗಿ ಕಾಗವಾಡ ಶಾಸಕ ಶ್ರೀಮಂತ್ ಪಾಟೀಲ್ ಸೇರಿ ಮೂವರು ಪುತ್ರರು ಸೇರಿದಂತೆ 8ಕ್ಕೂ ಹೆಚ್ಚು ಜನರ ಮೇಲೆ ಕಾಗವಾಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ದೇವದಾಸ್ ಎಂಬುವವರಿಗೆ ಸೇರಿದ್ದ 10ಎಕರೆ ಜಮೀನನ್ನು ಶಾಸಕ ಶ್ರೀಮಂತ ಪಾಟೀಲ ಅತಿಕ್ರಮಣ ಮಾಡಿಕೊಂಡು ಗೊಬ್ಬರ ಕಾರ್ಖಾನೆ, ಕೆರೆ ನಿರ್ಮಾಣ ಮಾಡಿದ್ದಾರಂತೆ. ಇದಲ್ಲದೇ ಕೆಂಪವಾಡ ಗ್ರಾಮಕ್ಕೆ ಸೇರಿದ ಸುಮಾರು 40ಎಕರೆ ಗಾಯರಾಣು ಜಮೀನನ್ನು ಅತಿಕ್ರಮಣ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಇತ್ತ ಜಮೀನು ಅತಿಕ್ರಮಣ ಬಗ್ಗೆ ಪ್ರಶ್ನಿಸಲು ಮುಂದಾದ ದೇವದಾಸ್ ಮೇಲೆ ಶಾಸಕರು ತಮ್ಮ ಬೆಂಬಲಿಗರು ಹಾಗೂ ಪುತ್ರರ ಮುಕೇನ್ ಜೀವ ಬೆದರಿಕೆ ಹಾಕಿಸುತ್ತಿದ್ದಾರಂತೆ.
ಸದ್ಯ ಜಮೀನು ಕಳೆದುಕೊಂಡು ಕಂಗಾಲಾಗಿರುವ ಜಮೀನು ಮಾಲೀಕರು ಕಾಗವಾಡ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನ ಮೇರೆಗೆ ಕಾಗವಾಡ ಶಾಸಕ ಶ್ರೀಮಂತ್ ಪಾಟೀಲ್ ಪುತ್ರರಾದ ಶ್ರೀನಿವಾಸ್ ಪಾಟೀಲ, ಯೋಗೇಶ ಶ್ರೀಮಂತ್ ಪಾಟೀಲ ಹಾಗೂ ಬೆಂಬಲಿಗರಾದ ರಾಹುಲ್ ಚವ್ಹಾಣ, ಸುರೇಶ ಪಾಟೀಲ, ಶಶಿಕಾಂತ ಪಾಟೀಲ ಸೇರಿದಂತೆ ಒಟ್ಟು 8ಕ್ಕೂ ಹೆಚ್ಚಿನ ಜನರ ಮೇಲೆ ಕಾಗವಾಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.