ಅಥಣಿ(ಬೆಳಗಾವಿ) : ಶಾಲೆಯೆಂದರೆ ದೇಗುಲ ಎಂಬ ಭಕ್ತಿಭಾವ ಜನರಲ್ಲಿದೆ. ಅದೇ ಭಕ್ತಿಯಿಂದ ಶಾಲೆಗೆ ಮಕ್ಕಳು ಹೋಗುತ್ತಾರೆ. ಮಕ್ಕಳ ಭವಿಷ್ಯ ನಿರ್ಧರಿಸುವ ಶಾಲೆಗೆನೇ ವಾಮಾಚಾರ ಮಾಡಿರುವ ವಿಚಿತ್ರ ಘಟನೆ ಅಥಣಿಯಲ್ಲಿ ಬೆಳಕಿಗೆ ಬಂದಿದೆ.
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕೋಹಳ್ಳಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯ ಬಾಗಿಲುಗಳ ಎದುರು ವಾಮಾಚಾರ ಮಾಡಲಾಗಿದೆ. ಮೂರು ಕೊಠಡಿಗಳ ಬಾಗಿಲುಗಳಿಗೆ ವಾಮಾಚಾರ ಮಾಡಿದ್ದು, ಶಿಕ್ಷಕರು, ವಿದ್ಯಾರ್ಥಿಗಳಲ್ಲಿ ಹಾಗೂ ಗ್ರಾಮಸ್ಥರಲ್ಲಿ ಭಯ ಮೂಡಿದೆ.
ನಿನ್ನೆ ಅಮಾವಾಸ್ಯೆಯಾದ್ದರಿಂದ ತಡರಾತ್ರಿ 2ಗಂಟೆ ಸುಮಾರಿಗೆ ಈ ಮಾಟ-ಮಂತ್ರ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಬಾಗಿಲು ಮುಂದೆ ನಿಂಬೆಹಣ್ಣು, ಕುಂಕುಮ, ಮಾಟ-ಮಂತ್ರದ ವಸ್ತುಗಳನ್ನು ಇಟ್ಟಿದ್ದಾರೆ. ಮುಂಜಾನೆ ವಿದ್ಯಾರ್ಥಿಗಳು, ಶಿಕ್ಷಕರು ಶಾಲೆಗೆ ಬರುತ್ತಿದ್ದಂತೆ ಈ ಪ್ರಕರಣ ಬೆಳಕಿಗೆ ಬಂದಿದೆ.
ಇದನ್ನೂ ಓದಿ: ಬೆಂಗಳೂರಲ್ಲಿ ಅಂತಾರಾಜ್ಯ ಗಾಂಜಾ ಗ್ಯಾಂಗ್ ಬಂಧನ.. ಆರೋಪಿಗಳಿಂದ 40 ಕೆ.ಜಿ ಮಾದಕವಸ್ತು ಸೀಜ್
ಶಾಲೆಯಲ್ಲಿ 560 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದು, ಆತಂಕದ ವಾತಾವರಣ ಸೃಷ್ಟಿಯಾಗಿದೆ. ರಾಜ್ಯದಲ್ಲಿ ಮೌಢ್ಯ ನಿಷೇಧ ಕಾನೂನು ಜಾರಿಯಲ್ಲಿದ್ದರೂ ಚಿಕ್ಕೋಡಿ ಉಪವಿಭಾಗದಲ್ಲಿ ಮಾಟ-ಮಂತ್ರದ ಘಟನೆಗಳು ಆಗಾಗ ಬೆಳಕಿಗೆ ಬರುತ್ತವೆ. ಇದೀಗ ಐಗಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ