ಬೆಳಗಾವಿ: ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿರುವ ನಗರದ ನಿಯಾಜ್ ಹೋಟೆಲ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಬಿಜೆಪಿ ಶಾಸಕ ಅನಿಲ ಬೆನಕೆ ನೇತೃತ್ವದ ಬಿಜೆಪಿ ನಿಯೋಗ ಡಿಸಿ ಎಂ.ಜಿ.ಹಿರೇಮಠ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.
ಬೆಳಗಾವಿಯ ನಿಯಾಜ್ ಹೋಟೆಲ್‍ನವರು ಬಿರಿಯಾನಿ ಜಾಹೀರಾತಿಗಾಗಿ ಹಿಂದೂ ಸಂತರ ಚಿತ್ರ ಬಳಸಿ ಅವಹೇಳನಕಾರಿ ಮಾಹಿತಿಯೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಮಾಡಿದ್ದು, ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿದೆ. ಕೋಮು ಗಲಭೆಗಳಿಗೆ ಪ್ರಚೋದನೆ ನೀಡಲಾಗಿದೆ. ಆದ್ದರಿಂದ ನಗರದಲ್ಲಿ ಶಾಂತಿ ಸುವ್ಯವಸ್ಥೆ ಹದಗೆಡುವ ಇಂತಹ ಕೃತ್ಯ ಎಸಗಿರುವ ನಿಯಾಜ್ ಹೋಟೆಲ್ ವಿರುದ್ಧ ಕ್ರಮಕೈಗೊಳ್ಳುವಂತೆ ಶಾಸಕ ಅನಿಲ್ ಬೆನಕೆ ನೇತೃತ್ವದ ನಿಯೋಗ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದೆ.
ಬಳಿಕ ಮಾತನಾಡಿದ ಶಾಸಕ ಅನಿಲ್ ಬೆನಕೆ, ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕುವ ಮೂಲಕ ನಿಯಾಜ್ ಹೋಟೆಲ್‍ನವರು ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ತರುವ ಕೆಲಸ ಮಾಡಿದ್ದಾರೆ. ಮೂರು ವರ್ಷಗಳಿಂದ ಬೆಳಗಾವಿ ಉತ್ತರ ಕ್ಷೇತ್ರದಲ್ಲಿ ಯಾವುದೇ ಸಮಸ್ಯೆ ಆಗಿಲ್ಲ. ಇನ್ಮುಂದೆ ಯಾವುದೇ ರೀತಿ ಧರ್ಮ ಹಾಗೂ ಸಾಧು ಸಂತರ ಬಗ್ಗೆ ಅವಮಾನ ಮಾಡುವಂತಹ ಕೆಲಸ ಮಾಡಬಾರದು ಎಂದು ಎಚ್ಚರಿಕೆ ನೀಡಿದ್ದಾರೆ.