ಬೆಳಗಾವಿ: ಮಹಾಮಾರಿ ಕೊರೊನಾ ಹೊಡೆತಕ್ಕೆ ಎಲ್ಲ ವರ್ಗದ ಜನರು ನಲುಗಿದ್ದಾರೆ. ಕೊರೊನಾ ನಿಯಂತ್ರಿಸಲು ಸರ್ಕಾರ ಲಾಕ್‍ಡೌನ್, ಜನತಾ ಕರ್ಪ್ಯೂ ಕೂಡ ಜಾರಿಗೊಳಿಸಿದೆ. ಈ ಹಿನ್ನೆಲೆ ಬೀದಿಬದಿಯಲ್ಲೇ ವಾಸ್ತವ್ಯ ಹೂಡಿ ಜೀವನ ನಡೆಸುತ್ತಿದ್ದ ಭಿಕ್ಷುಕರು, ಮಾನಸಿಕ ಅಸ್ವಸ್ಥರ ಬದುಕು ಚಿಂತಾಜನಕವಾಗಿದೆ.
ಬೀದಿಬದಿಯಲ್ಲಿದ್ದ ಭಿಕ್ಷುಕರು, ಮಾನಸಿಕ ಅಸ್ವಸ್ಥರ ಬಾಳಿಗೆ ಬೆಳಗಾವಿಯ ಯುವಕರು ಬೆಳಕಾಗುವ ಮೂಲಕ ಇತರರಿಗೂ ಮಾದರಿಯಾಗಿದ್ದಾರೆ.
![Belgaum youth help to beggars](https://etvbharatimages.akamaized.net/etvbharat/prod-images/05:24:42:1621943682_kn-bgm-01-25-beggars-save-seva-trust-special-7201786_25052021164321_2505f_1621941201_287.jpg)
ಕೊರೊನಾದಿಂದ ಕೆಳವರ್ಗದ ಜನರ ಬದುಕು ಶೋಚನೀಯವಾಗಿದೆ. ಕೆಲಸ ಕಳೆದುಕೊಂಡು ಒಂದು ಹೊತ್ತಿನ ಊಟಕ್ಕೂ ಜನರು ಪರದಾಡುವ ಸ್ಥಿತಿ ಇದೆ. ಇಂತಹ ಜನರ ನೆರವಿಗೆ ಬೆಳಗಾವಿಯ ಸೇವಾ ಫೌಂಡೇಶನ್ ವೆಲ್ಫೇರ್ ಟ್ರಸ್ಟ್‍ನ ಯುವಕರು ಆಗಮಿಸಿದ್ದಾರೆ.
ಬಡ ಹಾಗೂ ಕಾರ್ಮಿಕ ಕುಟುಂಬಗಳಿಗೆ ದಿನಸಿ ಹಾಗೂ ಫುಡ್ ಪಾಕೇಟ್ ನೀಡಿ ಮಾನವೀಯತೆ ಮೆರೆಯುತ್ತಿದ್ದಾರೆ. ಯುವಕರ ಕಾರ್ಯಕ್ಕೆ ಸ್ಥಳೀಯರು ಶ್ಲಾಘಿಸುವ ಜೊತೆಗೆ ನೆರವು ನೀಡುತ್ತಿದ್ದಾರೆ. ಸಾರ್ವಜನಿಕರ ನೆರವು ಪಡೆದು ಸೇವಾ ಫೌಂಡೇಶನ್ ಸದಸ್ಯರು ಬಡವರ್ಗದ ಜನರಿಗೆ ನೆರವಾಗುತ್ತಿದ್ದಾರೆ.
ಬಿಕ್ಷುಕರ ಸ್ಥಳಾಂತರ:
ನಗರದ ವಿವಿಧ ಬಡಾವಣೆಗಳಲ್ಲಿ ರಸ್ತೆ ಬದಿಯಲ್ಲೇ ವಾಸ್ತವ್ಯ ಹೂಡಿ ಹಲವು ವರ್ಷಗಳಿಂದ ಭಿಕ್ಷೆ ಬೇಡಿ ಬದುಕು ಸಾಗಿಸುತ್ತಿದ್ದ ಎಂಟಕ್ಕೂ ಅಧಿಕ ಭಿಕ್ಷುಕರು ಹಾಗೂ ಮಾನಸಿಕ ಅಸ್ವಸ್ಥರನ್ನು ಸೇವಾ ಫೌಂಡೇಶನ್ ವೆಲ್ಫೆರ್ ಟ್ರಸ್ಟ್‍ನ ಯುವಕರು ಸ್ಥಳಾಂತರ ಮಾಡಿದ್ದಾರೆ.
![Belgaum youth help to beggars](https://etvbharatimages.akamaized.net/etvbharat/prod-images/05:24:41:1621943681_kn-bgm-01-25-beggars-save-seva-trust-special-7201786_25052021164321_2505f_1621941201_155.jpg)
ಸ್ಥಳಾಂತರಗೊಂಡವನ್ನು ಕೊರೊನಾ ಪರೀಕ್ಷೆಗೂ ಒಳಪಡಿಸಿದ್ದಾರೆ. ಯಾರಲ್ಲೂ ಕೊರೊನಾ ಸೋಂಕು ಪತ್ತೆಯಾಗಿಲ್ಲ. ಆದರೆ, ಮೂವರಿಗೆ ಕಾಲು ನೋವಿನ ಸಮಸ್ಯೆ ಇದ್ದ ಕಾರಣ ಜಿಲ್ಲಾಸ್ಪತ್ರೆಯಲ್ಲೇ ಚಿಕಿತ್ಸೆ ನೀಡುತ್ತಿದ್ದಾರೆ.
ಇನ್ನುಳಿದ ಐವರನ್ನು ಸರ್ಕಾರ ಆಶ್ರಮಗಳಿಗೆ ಸ್ಥಳಾಂತರ ಮಾಡಿಸಿದ್ದಾರೆ. ಅಲ್ಲದೇ ವಾರಕ್ಕೊಮ್ಮೆ ಅವರಿಗೆ ಆರೋಗ್ಯ ತಪಾಸಣೆ ನಡೆಸುತ್ತಿದ್ದಾರೆ. ಬೀದಿಬದಿಯಲ್ಲಿದ್ದ ಮಾನಸಿಕ ಅಸ್ವಸ್ಥರು ಹಾಗೂ ಭಿಕ್ಷುಕರು ಇದೀಗ ಆಶ್ರಮದಲ್ಲಿ ಖುಷಿಯಾಗಿ ಜೀವಿಸುತ್ತಿದ್ದಾರೆ.
![Belgaum youth help to beggars](https://etvbharatimages.akamaized.net/etvbharat/prod-images/05:24:40:1621943680_kn-bgm-01-25-beggars-save-seva-trust-special-7201786_25052021164321_2505f_1621941201_40.jpg)
ಹಲವಾರು ವರ್ಷಗಳಿಂದ ಸೇವೆ:
ಇಲ್ಲಿನ ಕ್ಯಾಂಪ್ ಪ್ರದೇಶದ ಏಳೆಂಟು ಜನ ಯುವಕರು ಸೇರಿ ಸೇವಾ ಫೌಂಡೇಶನ್ ವೆಲ್ಫೆರ್ ಟ್ರಸ್ಟ್ ಹುಟ್ಟುಹಾಕಿದ್ದಾರೆ. ಕಳೆದ ವರ್ಷ ಕೂಡ ಕೊರೊನಾ ವಾರಿಯರ್ಸ್ ಹಾಗೂ ಸ್ಲಮ್ ಪ್ರದೇಶಗಳಿಗೆ ಭೇಟಿ ನೀಡಿ 10 ಸಾವಿರಕ್ಕೂ ಅಧಿಕ ಜನರಿಗೆ ಮಾಸ್ಕ್, ಸ್ಯಾನಿಟೈಸರ್ ವಿತರಿಸಿದ್ದಾರೆ. ಈ ವರ್ಷ ಸ್ನೇಹಿತರೆಲ್ಲರೂ ಹಣ ಸೇರಿಸಿ ಬಡವರಿಗೆ ದಿನಸಿ ಕಿಟ್ ವಿತರಿಸಿದ್ದಾರೆ. ಅಲ್ಲದೇ ನಿತ್ಯ ಆಹಾರ ಪಾಕೆಟ್‍ಗಳನ್ನು ವಿತರಿಸುತ್ತಿದ್ದಾರೆ.