ಬೆಳಗಾವಿ: ಕೊರೊನಾ ಮಾರ್ಗಸೂಚಿ ಉಲ್ಲಂಘಿಸಿ ಅನಗತ್ಯ ಕಾರಣಗಳಿಗೆ ಜನರು ಗುಂಪುಗೂಡಿದ್ರೆ ಜಿಲ್ಲಾಡಳಿತ ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಜಿಲ್ಲಾಧಿಕಾರಿ ಡಾ. ಕೆ.ಹರೀಶ್ ಕುಮಾರ್ ಖಡಕ್ ಎಚ್ಚರಿಕೆ ನೀಡಿದ್ದಾರೆ.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸರ್ಕಾರದ ಚೌಕಟ್ಟುಗಳನ್ನು ಮೀರಿ ಯಾವುದೇ ರೀತಿಯ ಸಭೆ-ಸಮಾರಂಭಗಳನ್ನು ನಡೆಸುವಂತಿಲ್ಲ. ಒಂದು ವೇಳೆ ಆ ರೀತಿ ಜನರು ಗುಂಪು ಸೇರಿದ್ರೆ, ಆಯಾ ತಾಲೂಕಿನ ತಹಶೀಲ್ದಾರರನ್ನು ಜವಾಬ್ದಾರಿ ಮಾಡಲಾಗುತ್ತದೆ. ಕೋವಿಡ್ ಲಸಿಕೆ ನೀಡುವುದರಲ್ಲಿ ಬೆಳಗಾವಿ ಜಿಲ್ಲೆ ರಾಜ್ಯಕ್ಕೆ ಮಾದರಿಯಾಗಿದೆ. ದಿನಕ್ಕೆ 30 ಸಾವಿರ ಜನರಿಗೆ ಕೋವಿಡ್ ಲಸಿಕೆ ನೀಡುತ್ತಿದ್ದೇವೆ. ನಿರಂತರ ಲಸಿಕೆ ಪೂರೈಕೆಯಾದ್ರೆ, 50 ಸಾವಿರ ಕೋವಿಡ್ ಲಸಿಕೆಗಳನ್ನು ನೀಡಲಾಗುತ್ತದೆ ಎಂದರು.
ಜಿ.ಪಂ ಸಿಇಒ ಅಧ್ಯಕ್ಷತೆಯಲ್ಲಿ ಕೋವಿಡ್ ಟೆಸ್ಟ್ ದ್ವಿಗುಣಕ್ಕೆ ಕ್ರಮ ಕೈಗೊಳ್ಳಲಾಗಿದ್ದು, ಟ್ರೇಸಿಂಗ್ & ಟ್ರ್ಯಾಕಿಂಗ್‌ಗೆ ಹೆಚ್ಚಿನ ಒತ್ತು ನೀಡಲಾಗುವುದು. ಓರ್ವ ಸೋಂಕಿತ ಪತ್ತೆಯಾದ್ರೆ, ಆತನ ಸಂಪರ್ಕಕ್ಕೆ ಬಂದ 30 ಜನರ ತಪಾಸಣೆ ಮಾಡಲಾಗುತ್ತದೆ. ಈ ಬಗ್ಗೆ ಅಧಿಕಾರಿಗಳ ಸಭೆ ಕರೆದಿದ್ದು, ಆಯಾ ಅಧಿಕಾರಿಗಳಿಗೆ ಜವಾಬ್ದಾರಿ ಹಂಚಿಕೆ ಮಾಡಲಾಗುತ್ತಿದೆ. ಇಂದಿನಿಂದ ನಗರ ಪ್ರದೇಶಗಳಲ್ಲಿ ಹೆಚ್ಚಿನ ಟೆಸ್ಟ್‌ಗೆ ಕ್ರಮಕೈಗೊಳ್ಳಲಾಗಿದೆ. ಒಂದು ವೇಳೆ ಅನಗತ್ಯವಾಗಿ ಜನ ಸೇರಿದರೆ ಸರ್ಕಾರ ಯಾವ ರೀತಿ ಡಿಸಿಗಳನ್ನು ನೇರ ಹೊಣೆ ಮಾಡಿದೆಯೋ, ಆ ರೀತಿ ನಾವು ತಹಶೀಲ್ದಾರರನ್ನು ನೇರ ಹೊಣೆ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಬೆಳಗಾವಿಯ ಐಸಿಎಂಆರ್, ಬಿಮ್ಸ್ ಲ್ಯಾಬ್‌ನಲ್ಲಿ ಮಾತ್ರ ಕೋವಿಡ್ ಟೆಸ್ಟ್ ಮಾಡಿಸಲಾಗುತ್ತಿದೆ. ಎರಡು ಲ್ಯಾಬ್‌ಗಳಲ್ಲಿ ದಿನಕ್ಕೆ ಮೂರು ಸಾವಿರ ಟೆಸ್ಟ್ ಮಾತ್ರ ಮಾಡಬಹುದು. ಬೆಳಗಾವಿ ಜಿಲ್ಲೆಯಲ್ಲಿ ದಿನಕ್ಕೆ 6 ಸಾವಿರ ಜನರ ಗಂಟಲು ದ್ರವ ಸಂಗ್ರಹಿಸುತ್ತಿದ್ದೇವೆ. ಕೋವಿಡ್ ಟೆಸ್ಟ್ ಪ್ರಮಾಣ ಹೆಚ್ಚಿಸಿದರೂ ವರದಿ ವಿಳಂಬದಿಂದ ಸಮಸ್ಯೆಯಾಗುತ್ತಿದೆ. 24 ಗಂಟೆಯೊಳಗೆ ಕೋವಿಡ್ ವರದಿ ತರಲು ಪ್ರಯತ್ನಿಸುತ್ತಿದ್ದೇವೆ. ಜಿಲ್ಲೆಯಲ್ಲಿ ಕೋವಿಡ್ ಮರಣ ಪ್ರಮಾಣ ಕಡಿಮೆ ಇದೆ. ಸದ್ಯಕ್ಕೆ ಬೆಡ್, ಐಸಿಯು, ಔಷಧಿ ಯಾವುದೇ ರೀತಿಯ ಕೊರತೆ ಇಲ್ಲ. ಮುಂದಿನ ಎರಡು ವಾರ ಕಠಿಣ ಇದೆ ಎಂದು ತಜ್ಞರು ಹೇಳಿದ್ದರಿಂದ ಸಿದ್ಧತೆ ಮಾಡಿಕೊಳ್ಳಬೇಕಿದೆ ಎಂದರು.
ಓದಿ: ಗಮನಿಸಿ: ಈ ರಾಜ್ಯಗಳಿಗೆ ಪ್ರಯಾಣಿಸಲು ಕೋವಿಡ್ ನೆಗೆಟಿವ್ ರಿಪೋರ್ಟ್ ಕಡ್ಡಾಯ