ಬೆಂಗಳೂರು: ಏಪ್ರಿಲ್ 4 ಮಂಗಳವಾರದಿಂದ ಜಾರಿಗೆ ಬರುವಂತೆ ದೇಶೀಯವಾಗಿ ಉತ್ಪಾದಿಸುವ ಕಚ್ಚಾ ತೈಲದ ಮೇಲಿನ ವಿಂಡ್‌ಫಾಲ್ ತೆರಿಗೆಯನ್ನು ಸರ್ಕಾರವು ಪ್ರತಿ ಟನ್‌ಗೆ 3,500 ರೂ.ಗಳಿಂದ ಶೂನ್ಯಕ್ಕೆ ಇಳಿಸಿದೆ. ಈ ಕುರಿತು ಕೇಂದ್ರ ಸರ್ಕಾರ ಹೊಸ ಅಧಿಸೂಚನೆ ಹೊರಡಿಸಿದೆ. ಇದಲ್ಲದೇ, ಡೀಸೆಲ್ ರಫ್ತಿನ ಮೇಲಿನ ವಿಶೇಷ ಹೆಚ್ಚುವರಿ ಅಬಕಾರಿ ಸುಂಕವನ್ನು 1/ಲೀಟರ್‌ನಿಂದ (ಪ್ರತಿ ಲೀಟರ್‌ಗೆ 1 ರೂಪಾಯಿ) 0.5/ ಲೀಟರ್‌ಗೆ (50 ಪೈಸೆ ಪ್ರತಿ ಲೀಟರ್) ಕಡಿತಗೊಳಿಸಲಾಗಿದೆ. ಡೀಸೆಲ್ ಹೊರತುಪಡಿಸಿ ಕಚ್ಚಾ ತೈಲ, ಪೆಟ್ರೋಲ್ ಮತ್ತು ಎಟಿಎಫ್ ನಂತಹ ಉತ್ಪನ್ನಗಳಿಗೆ ಇನ್ನು ಮುಂದೆ ಯಾವುದೇ ವಿಂಡ್‌ಫಾಲ್ ತೆರಿಗೆ ವಿಧಿಸಲಾಗುವುದಿಲ್ಲ.
ಜುಲೈ 1 ರಂದು ಭಾರತೀಯ ಕಂಪನಿಗಳ ಮೇಲೆ ವಿಂಡ್‌ಫಾಲ್ ಟ್ಯಾಕ್ಸ್ ವಿಧಿಸಲಾಗಿತ್ತು. ಇಂಧನ ಸಂಸ್ಥೆಗಳು ಪಡೆಯುವ ಅತ್ಯಧಿಕ ಪ್ರಮಾಣದ ಅಸಾಧಾರಣ ಲಾಭದ ಕಾರಣದಿಂದ ಭಾರತೀಯ ಕಂಪನಿಗಳ ಮೇಲೆ ವಿಂಡ್‌ಫಾಲ್ ಟ್ಯಾಕ್ಸ್ ವಿಧಿಸಲಾಗಿತ್ತು. ಆದಾಗ್ಯೂ, ಅಂತಾರಾಷ್ಟ್ರೀಯ ತೈಲ ಬೆಲೆಗಳು ಸದ್ಯಕ್ಕೆ ಕಡಿಮೆಯಾಗಿವೆ. ಇದರಿಂದ ತೈಲ ಉತ್ಪಾದಕರು ಮತ್ತು ಸಂಸ್ಕರಣಾಗಾರಗಳ ಲಾಭದ ಪ್ರಮಾಣ ಕಡಿಮೆಯಾಗಿದೆ. ಪ್ರತಿ ಬ್ಯಾರೆಲ್‌ಗೆ USD 75 ರ ಮಿತಿಗಿಂತ ಹೆಚ್ಚಿಗೆ ಎಷ್ಟೇ ಬೆಲೆ ಪಡೆದರೂ ಅದರ ಮೇಲೆ ಸರ್ಕಾರವು ವಿಂಡ್‌ಫಾಲ್ ಟ್ಯಾಕ್ಸ್ ವಿಧಿಸುತ್ತದೆ. ಇಂಧನ ರಫ್ತಿನ ಮೇಲಿನ ಆದಾಯ ಕುಸಿತ ಅಥವಾ ಸಂಸ್ಕರಣಾಗಾರರು ಸಾಗರೋತ್ತರ ಸಾಗಣೆಗಳಲ್ಲಿ ಗಳಿಸುವ ಮಾರ್ಜಿನ್ ಮೇಲೆ ತೆರಿಗೆ ವಿಧಿಸಲಾಗುತ್ತದೆ. ಈ ಮಾರ್ಜಿನ್ಗಳು ಪ್ರಾಥಮಿಕವಾಗಿ ಅಂತಾರಾಷ್ಟ್ರೀಯ ತೈಲ ಬೆಲೆ ಮತ್ತು ವೆಚ್ಚದ ನಡುವಿನ ವ್ಯತ್ಯಾಸವಾಗಿದೆ.
ವಿಂಡ್‌ಫಾಲ್ ತೆರಿಗೆಯನ್ನು ವಿಶೇಷ ಹೆಚ್ಚುವರಿ ಅಬಕಾರಿ ಸುಂಕವಾಗಿ ವಿಧಿಸಲಾಗುತ್ತದೆ. ಹೆಚ್ಚಿನ ಜಾಗತಿಕ ಕಚ್ಚಾ ಉತ್ಪನ್ನದ ಬೆಲೆಗಳಿಂದಾಗಿ ದೇಶೀಯ ಕಚ್ಚಾ ತೈಲ ಉತ್ಪಾದಕರು ಗಳಿಸುವ ಅತ್ಯಧಿಕ ಲಾಭದ ಮೇಲೆ ತೆರಿಗೆ ವಿಧಿಸುವ ಗುರಿಯನ್ನು ಇದು ಹೊಂದಿದೆ. ಕೇಂದ್ರ ಸರ್ಕಾರವು ಪ್ರತಿ ಹದಿನೈದು ದಿನಗಳಿಗೊಮ್ಮೆ ಇದನ್ನು ಪರಿಷ್ಕರಿಸುತ್ತದೆ. ಕಚ್ಚಾ ತೈಲ ಬೆಲೆಗಳು ಮತ್ತು ಸಂಸ್ಕರಣೆಯ ಪ್ರಮಾಣವನ್ನು ಅವಲಂಬಿಸಿ ಸುಂಕಗಳ ದರಗಳನ್ನು ಬದಲಾಯಿಸಲಾಗುತ್ತಿದೆ.
ತಾಂತ್ರಿಕವಾಗಿ ನೋಡುವುದಾದರೆ- ವಿಂಡ್‌ಫಾಲ್ ಟ್ಯಾಕ್ಸ್ ಅನ್ನು ಶೂನ್ಯಕ್ಕೆ ಇಳಿಸುವುದು ಎಂದರೆ ಅದನ್ನು ರದ್ದುಗೊಳಿಸಲಾಗಿದೆ ಎಂದು ಅರ್ಥವಲ್ಲ. ಈ ಟ್ಯಾಕ್ಸ್ಗಳ ನಿಬಂಧನೆಯು ಇನ್ನೂ ಉಳಿದಿದೆ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆಗಳು ಮತ್ತು ಇಂಧನ ಮಾರ್ಜಿನ್ಗಳು ಗಮನಾರ್ಹವಾಗಿ ಏರಿದರೆ, ಸರ್ಕಾರವು ಮತ್ತೆ ವಿಂಡ್‌ಫಾಲ್ ತೆರಿಗೆಗಳನ್ನು ಹೆಚ್ಚಿಸಬಹುದು. ವಾಸ್ತವವಾಗಿ, ಎಟಿಎಫ್ ರಫ್ತುಗಳ ಮೇಲಿನ ಲೆವಿಯನ್ನು ಎರಡು ಸಂದರ್ಭಗಳಲ್ಲಿ ಆಗಸ್ಟ್ 3 ಮತ್ತು ಅಕ್ಟೋಬರ್ 2, 2022 ರಂದು ಶೂನ್ಯಕ್ಕೆ ಇಳಿಸಲಾಗಿತ್ತು. ಆದರೆ ನಂತರದ ಪರಿಷ್ಕರಣೆಗಳಲ್ಲಿ ಈ ತೆರಿಗೆಯನ್ನು ಹೆಚ್ಚಿಸಲಾಯಿತು. ಕಳೆದೆರಡು ದಿನಗಳಿಂದ ಕಂಡುಬರುತ್ತಿರುವ ತೈಲ ಬೆಲೆಯ ಏರಿಕೆಯು ಹದಿನೈದು ದಿನಗಳಲ್ಲಿ ಮುಂದುವರಿದರೆ, ಮುಂದಿನ ಪರಿಷ್ಕರಣೆಯಲ್ಲಿ ದೇಶೀಯ ಕಚ್ಚಾ ತೈಲದ ಮೇಲಿನ ತೆರಿಗೆಯನ್ನು ಹೆಚ್ಚಿಸುವ ಸಾಧ್ಯತೆಯಿದೆ.
ಇದನ್ನೂ ಓದಿ : ಹವಾಮಾನ ಬದಲಾವಣೆಯಿಂದ ಕೋವಿಡ್ ಸೋಂಕು ಹೆಚ್ಚಳ: ನಿರ್ಲಕ್ಷ್ಯ ಬೇಡ, ಮುನ್ನೆಚ್ಚರಿಕೆ ಇರಲಿ