ಹೈದರಾಬಾದ್: ಸದ್ಯ ಮದುವೆ ಸೀಸನ್ ಆರಂಭವಾಗಿದ್ದು, ಈ ಸೀಸನ್ನಲ್ಲಿ ಸಾಕಷ್ಟು ಮದುವೆಗಳು ನಡೆಯುತ್ತಿವೆ. ಹೊಸ ಬಾಳಿಗೆ ಕಾಲಿಡುವ ಯುವ ಜೋಡಿಗಳು ತಮ್ಮ ಜೀವನದುದ್ದಕ್ಕೂ ಪರಸ್ಪರರ ಜೊತೆಗೆ ನಿಲ್ಲುವ ಮತ್ತು ಒಟ್ಟಿಗೆ ವಾಸಿಸುವ ಪ್ರತಿಜ್ಞೆ ಮಾಡುತ್ತಾರೆ. ನವದಂಪತಿಗಳು ಹೊಸ ಜೀವನವನ್ನು ಪ್ರಾರಂಭಿಸಿದ ನಂತರ, ತಮ್ಮ ಮುಂದಿನ ಜೀವನ ಸುಖವಾಗಿರಲು ಅವರು ಅನೇಕ ವಿಷಯಗಳ ಬಗ್ಗೆ ಜಾಗ್ರತೆ ವಹಿಸಬೇಕಾಗುತ್ತದೆ. ಹೊಸದಾಗಿ ಮದುವೆಯಾದ ದಂಪತಿಗಳು ಮಾಡಬೇಕಾದ ಬಹಳ ಮುಖ್ಯವಾದ ಕೆಲಸವೆಂದರೆ ಸ್ಪಷ್ಟವಾದ ಹಣಕಾಸು ಗುರಿಯನ್ನು ಹಾಕಿಕೊಳ್ಳುವುದು. ತಮ್ಮ ಮತ್ತು ತಮ್ಮ ಮಕ್ಕಳಿಗೆ ಸುಖಮಯವಾದ ಜೀವನವನ್ನು ಖಚಿತಪಡಿಸಿಕೊಳ್ಳಲು ಅವರು ಏನು ಮಾಡಿದರೆ ಸರಿ ಎಂಬುದನ್ನು ಇಲ್ಲಿ ತಿಳಿಸಲಾಗಿದೆ.
ಜೊತೆಯಾಗಿ ನಿರ್ಧಾರ ತೆಗೆದುಕೊಳ್ಳಿ : ಮದುವೆಯಾದ ನಂತರ ಸಂಗಾತಿಗಳು ಪರಸ್ಪರರ ಆರ್ಥಿಕ ಆದ್ಯತೆಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಬೇಕು. ವಾಸ್ತವಿಕವಾದ ನೆಲೆಗಟ್ಟಿನಲ್ಲಿ ಜಂಟಿ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಅಗತ್ಯ. ಹಣಕಾಸು ಗುರಿಗಳನ್ನು ಸಾಧಿಸಲು ಯಾವ ಮಾರ್ಗ ಉತ್ತಮವಾಗಿದೆ ಎಂಬುದನ್ನು ಕಂಡುಕೊಳ್ಳಿ. ಯುವ ದಂಪತಿಗಳು ದೀರ್ಘಾವಧಿಗಾಗಿ ಹೂಡಿಕೆ ಮಾಡಲು ಅವಕಾಶ ಹೊಂದಿರುತ್ತಾರೆ. ಇದನ್ನು ಎಚ್ಚರಿಕೆಯಿಂದ ಮತ್ತು ಯೋಜನೆಯೊಂದಿಗೆ ಮಾಡಿದರೆ, ತಮ್ಮ ಭವಿಷ್ಯದ ಅಗತ್ಯಗಳಿಗಾಗಿ ದೊಡ್ಡ ಮೊತ್ತದ ಹಣ ಕೂಡಿಸಲು ಸಾಧ್ಯವಾಗುತ್ತದೆ.
ಜವಾಬ್ದಾರಿಗಳನ್ನು ಹಂಚಿಕೊಳ್ಳುವುದು : ಹಣಕಾಸಿನ ಗುರಿಯನ್ನು ಸಾಧಿಸುವ ವಿಷಯ ಬಂದಾಗ ನಾವು ಅದನ್ನು ಹೇಗೆ ಯೋಜಿಸುತ್ತೇವೆ ಎಂಬುದು ಮುಖ್ಯವಾಗುತ್ತದೆ. ನಮ್ಮ ಹಣಕಾಸು ಗುರಿ ಅಲ್ಪಾವಧಿಯದ್ದಾ ಅಥವಾ ದೀರ್ಘಾವಧಿಯದ್ದಾ ಎಂಬುದನ್ನು ಮೊದಲು ನಿರ್ಧರಿಸಬೇಕು. ಭವಿಷ್ಯದ ದಿನಗಳಲ್ಲಿ ಸಂಗಾತಿಗಳು ಇಬ್ಬರೂ ಗಳಿಸುತ್ತಾರೆ ಎಂದು ಭಾವಿಸಿದರೆ ಹಣಕಾಸು ಗುರಿಗಳನ್ನು ಸಾಧಿಸುವುದು ಸುಲಭವಾಗುತ್ತದೆ. ಒಬ್ಬ ಸಂಗಾತಿ ಮಾತ್ರ ಕೆಲಸ ಮಾಡಿದರೆ, ಇಬ್ಬರೂ ತಮ್ಮ ಜವಾಬ್ದಾರಿಗಳನ್ನು ಬ್ಯಾಲೆನ್ಸ್ ಮಾಡಬೇಕಾಗುತ್ತದೆ.
ಕೇವಲ ಗುರಿ ಇದ್ದರೆ ಸಾಕಾಗುವುದಿಲ್ಲ. ಅದನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಕೆಲವೊಂದಿಷ್ಟು ತ್ಯಾಗಗಳನ್ನೂ ಮಾಡಬೇಕಾಗುತ್ತದೆ. ಇಬ್ಬರೂ ಮೊದಲು ಹಣ ಉಳಿತಾಯ ಮಾಡಲು ಕಲಿಯಬೇಕು ಮತ್ತು ಉಳಿಸಿದ ನಂತರ ಮಿಕ್ಕ ಹಣದಲ್ಲಿ ಜೀವನ ಮಾಡುವುದನ್ನು ಕಲಿಯಬೇಕು. ಕುಟುಂಬದಲ್ಲಿ ನೀವೊಬ್ಬರೇ ಸಂಪಾದನೆ ಮಾಡುವವರಾದರೂ ಸರಿಯಾದ ಯೋಜನೆ ಮತ್ತು ಸಂಗಾತಿಯ ಬೆಂಬಲದಿಂದ ದೊಡ್ಡ ಗುರಿಗಳನ್ನು ಸುಲಭವಾಗಿ ಸಾಧಿಸಬಹುದು ಎಂಬುದನ್ನು ಮರೆಯಬೇಡಿ. ಸರಿಯಾದ ಹೂಡಿಕೆ ನೀತಿಯನ್ನು ಅನುಸರಿಸಲು ಪ್ರಯತ್ನಿಸಿ.
ಸಾಲ ಮಾಡುವ ಮುನ್ನ ಹುಷಾರು : ಸಾಲ ಮಾಡುವುದು ಕೆಲವೊಮ್ಮೆ ಅನಿವಾರ್ಯವಾಗಬಹುದು. ಆದರೆ ಯಾವಾಗ, ಎಷ್ಟು ಸಾಲ ತೆಗೆದುಕೊಳ್ಳಬೇಕೆಂಬುದು ಮುಖ್ಯವಾಗುತ್ತದೆ. ಅಗತ್ಯವಿಲ್ಲದ ವಸ್ತುಗಳನ್ನು ಖರೀದಿಸಲು ನೀವು ಸಾಲ ಮಾಡಿದರೆ, ನಿಮಗೆ ಬೇಕಾದ ವಸ್ತುಗಳ ಮೇಲಿನ ಆಸೆ ಬಿಡಬೇಕಾಗುತ್ತದೆಎಂಬ ತತ್ವವನ್ನು ಎಂದಿಗೂ ಮರೆಯಬೇಡಿ. ಸಾಲ ತೆಗೆದುಕೊಂಡರೂ ಬಡ್ಡಿ ಕಡಿಮೆ ಇರುವಂತೆ ನೋಡಿಕೊಳ್ಳಬೇಕು. ಮೌಲ್ಯ ವರ್ಧಿಸುವ ವಸ್ತುಗಳಿಗಾಗಿ ಮಾತ್ರ ಸಾಲ ತೆಗೆದುಕೊಳ್ಳಬೇಕು. ಇದಕ್ಕೆ ಉತ್ತಮ ಉದಾಹರಣೆ ಎಂದರೆ ಗೃಹ ಸಾಲ. ನೀವು ದಂಪತಿಯಾಗಿ ಗೃಹ ಸಾಲವನ್ನು ತೆಗೆದುಕೊಂಡರೆ, ಅದು ತೆರಿಗೆ ಉಳಿಸಲು ಸಹ ಉಪಯುಕ್ತವಾಗಿದೆ. ಪರಸ್ಪರ ಆರ್ಥಿಕವಾಗಿ ಅರ್ಥ ಮಾಡಿಕೊಳ್ಳಲು ಕ್ರೆಡಿಟ್ ಸ್ಕೋರ್ ಮತ್ತು ಕ್ರೆಡಿಟ್ ಇತಿಹಾಸದ ವರದಿಗಳನ್ನು ಪರಿಶೀಲಿಸಿ.
ದೀರ್ಘಾವಧಿಯ ಯೋಜನೆ : ಕನಸನ್ನು ನನಸಾಗಿಸಲು ಪ್ರತಿ ಕ್ಷಣವೂ ಶ್ರಮಿಸುವುದು ಮುಖ್ಯ. ನೀವು ಕಷ್ಟಪಟ್ಟು ಗಳಿಸಿದ ಹಣವನ್ನು ರಕ್ಷಿಸುವ ಮತ್ತು ನಿಮ್ಮ ಹೂಡಿಕೆಯನ್ನು ಹೆಚ್ಚಿಸಲು ಸಹಾಯ ಮಾಡುವ ಯೋಜನೆಗಳನ್ನು ಪರಿಶೀಲಿಸಿ. ನಿಮ್ಮ ವಯಸ್ಸು ಮತ್ತು ಹೂಡಿಕೆಯ ಸಾಮರ್ಥ್ಯ ಬಹಳ ಪ್ರಮುಖವಾಗಿದೆ. ಆರಂಭಿಕ ದಿನಗಳಲ್ಲಿ ಹೆಚ್ಚಿನ ನಷ್ಟದ ಅಪಾಯವಿದ್ದರೂ ಸಹ, ಹೆಚ್ಚಿನ ಆದಾಯವನ್ನು ನೀಡುವ ಯೋಜನೆಗಳನ್ನು ನೀವು ಆರಿಸಿಕೊಳ್ಳಬೇಕು. ಸಮಯ ಕಳೆದಂತೆ ಅಗತ್ಯ ಬಿದ್ದರೆ ನಿಮ್ಮ ಹೂಡಿಕೆಯನ್ನು ಬದಲಾಯಿಸಬೇಕು. ಹಣಕಾಸು ಯೋಜನೆ ಒಂದು ಪ್ರಯಾಣದಂತೆ, ಒಂದೇ ದಿನದಲ್ಲಿ ಮುಗಿಯುಂಥದ್ದಲ್ಲ.
ಆದಾಯ ಗಳಿಸುವವರ ಹೆಸರಲ್ಲಿ ಹೂಡಿಕೆ : ಕುಟುಂಬದಲ್ಲಿ ಆದಾಯ ಗಳಿಸುವವರ ಹೆಸರಿನಲ್ಲಿ ವಿಮಾ ಪಾಲಿಸಿಯನ್ನು ತೆಗೆದುಕೊಳ್ಳಬೇಕು. ಇದು ಅನಿರೀಕ್ಷಿತ ಘಟನೆಗಳ ಸಂದರ್ಭದಲ್ಲಿ ಕುಟುಂಬಕ್ಕೆ ಆರ್ಥಿಕ ಬೆಂಬಲ ನೀಡಲು ಸಹಕಾರಿಯಾಗುತ್ತದೆ. ವಿಮಾ ಪಾಲಿಸಿಯನ್ನು ಮಕ್ಕಳ ಶಿಕ್ಷಣಕ್ಕಾಗಿ ಉಳಿತಾಯ ಯೋಜನೆಯಾಗಿಯೂ ಬಳಸಬಹುದು. ಜೀವವಿಮಾ ಮತ್ತು ಆರೋಗ್ಯ ವಿಮಾ ಪಾಲಿಸಿಗಳು ಈಗಿನ ಕಾಲದಲ್ಲಿ ಬೇಕೇ ಬೇಕು. ಮದುವೆಯಾದ ನಂತರ ಸಂಗಾತಿಗಳು ಜಾಯಿಂಟ್ ಫ್ಯಾಮಿಲಿ ಫ್ಲೋಟರ್ ಹೆಲ್ತ್ ಪಾಲಿಸಿ ತೆಗೆದುಕೊಳ್ಳಲು ಆದ್ಯತೆ ನೀಡಬೇಕು.
ಇದನ್ನೂ ಓದಿ: ಏನಿದು ಹೊಸ ಜೀರೊ ಕಾಸ್ಟ್ ಟರ್ಮ್ ಇನ್ಸೂರೆನ್ಸ್ ಪಾಲಿಸಿ? ಪ್ರಯೋಜನಗಳೇನು?